ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯ ಉಡುಪು ತೊಟ್ಟರೆ ಮಾತ್ರ ಜಗನ್ನಾಥನ ದರ್ಶನ: ಇಂದಿನಿಂದಲೇ ವಸ್ತ್ರಸಂಹಿತೆ ಜಾರಿ

Published 1 ಜನವರಿ 2024, 10:41 IST
Last Updated 1 ಜನವರಿ 2024, 10:41 IST
ಅಕ್ಷರ ಗಾತ್ರ

ಭುವನೇಶ್ವರ: ಪುರಿ ಜಗನ್ನಾಥ ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಇಂದಿನಿಂದ (ಸೋಮವಾರ) ವಸ್ತ್ರಸಂಹಿತೆ ‌ಕಡ್ಡಾಯಗೊಳಿಸಲಾಗಿದೆ. ಜತೆಗೆ ದೇಗುಲದ ಆವರಣದಲ್ಲಿ ಗುಟ್ಕಾ ಮತ್ತು ಪಾನ್ ಜಗಿಯುವುದನ್ನು, ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನಿಯಮ 2024ರ ಹೊಸ ವರ್ಷದ ಮೊದಲ ದಿನದಿಂದಲೇ ಜಾರಿಗೆ ಬಂದಿದೆ. ದೇಗುಲಕ್ಕೆ ಬರುವ ಭಕ್ತರು ಸಭ್ಯ ಉಡುಪುಗಳನ್ನು ಧರಿಸಬೇಕು ಎಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (SJTA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಫ್ ಪ್ಯಾಂಟ್, ಶಾರ್ಟ್ಸ್, ಟೋರ್ನ್ ಜೀನ್ಸ್, ಸ್ಕರ್ಟ್, ಸ್ಲೀವ್ ಲೆಸ್ ಡ್ರೆಸ್ ಧರಿಸಿದ ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದು ಅವರು ತಿಳಿಸಿದ್ದಾರೆ.

ನಿಯಮ ‌ಜಾರಿಗೆ ಬರುವುದರೊಂದಿಗೆ 2024ರ ಮೊದಲ ದಿನವಾದ ಇಂದು ದೇವಾಲಯಕ್ಕೆ ಆಗಮಿಸಿದ ಪುರುಷರು ಧೋತಿ ಮತ್ತು ಟವೆಲ್‌ಗಳನ್ನು ಧರಿಸಿರುವುದು ಹಾಗೂ ಮಹಿಳೆಯರು ಸೀರೆ, ಸಲ್ವಾರ್ ಧರಿಸಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯ ಕಂಡು ಬಂತು.

ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಆವರಣದೊಳಗೆ ಗುಟ್ಕಾ ಮತ್ತು ಪಾನ್ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೊಸ ವರ್ಷದ ದಿನದಂದು ಭಗವಾನ್ ಜಗನ್ನಾಥನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದಾರೆ. ಮಧ್ಯಾಹ್ನ 12 ಗಂಟೆಯವರೆಗೆ 1,80,000ಕ್ಕೂ ಹೆಚ್ಚು ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿದ್ದಾರೆ.‌ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಪುರಿ ಪೊಲೀಸ್ ಅಧಿಕಾರಿ ಸಮರ್ಥ್ ವರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT