ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಹಗರಣ? ನಿರ್ಲಕ್ಷಿಸಲು ಸಾಧ್ಯವಿಲ್ಲದಷ್ಟು ವಿಷಯಗಳಿವೆ

Last Updated 22 ಮಾರ್ಚ್ 2019, 7:44 IST
ಅಕ್ಷರ ಗಾತ್ರ

ರಫೇಲ್ ಯುದ್ಧವಿಮಾನ ಒಪ್ಪಂದ ಪ್ರಕರಣದತೀರ್ಪಿನ ಮರುಪರಿಶೀಲನೆ ವಿಚಾರವಾಗಿ ಕೇಂದ್ರ ಸಲ್ಲಿಸಿರುವ ಆಕ್ಷೇಪಗಳಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕಾಯ್ದಿರಿಸಿದೆ. ರಫೇಲ್ ಹಗರಣಕ್ಕೆ ಸಂಬಂಧಿಸಿ ತನಿಖೆ ಅಗತ್ಯವಿಲ್ಲ ಎಂದು 2018ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಮರುಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. 36ರಫೇಲ್ ಯುದ್ಧವಿಮಾನಗಳ ಖರೀದಿಗೆ ಕೈಗೊಂಡ ನಿರ್ಧಾರ ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ದಾಖಲೆಗಳು ಈಗ ಲಭ್ಯವಿವೆ. ಈ ದಾಖಲೆಗಳನ್ನು ಪರಿಶೀಲಿಸಬೇಕು ಎಂಬುದು ಅರ್ಜಿದಾರರ ವಾದ. ಆದರೆ, ಇದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಡಿಸೆಂಬರ್‌ನಲ್ಲಿ ನೀಡಲಾಗಿರುವ ತೀರ್ಪು ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಸುಳ್ಳು ಮತ್ತು ಅಪೂರ್ಣ ಮಾಹಿತಿಯನ್ನು ಆಧರಿಸಿದ್ದು ಎಂಬುದು ತಿಳಿದಿರುವ ವಿಚಾರ. ಆದರೆ ಈ ಹಿಂದೆ ನೀಡಿದ್ದ ಮಾಹಿತಿ ಮಾತ್ರವಲ್ಲದೆ ಹೊಸ ದಾಖಲೆಗಳನ್ನೂಈ ಬಾರಿ ಕೋರ್ಟ್‌ ಪರಿಗಣಿಸುವ ಭರವಸೆಯಿದೆ. ಸುಪ್ರೀಂ ಕೋರ್ಟ್‌ ಏನೇ ತೀರ್ಪು ನೀಡಲಿ, ರಫೇಲ್ ಒಪ್ಪಂದದ ಅಕ್ರಮದ ವಾಸನೆ ಮರೆಯಾಗದು.

ಈಗಾಗಲೇ ಕೇಳಿಬಂದಿರುವ ಅಕ್ರಮಗಳ ಆರೋಪಗಳಪೈಕಿ ಹಲವು ನಿಜವೆಂಬುದು ಸ್ಪಷ್ಟ. ಉದಾಹರಣೆಗೆ; ತಮ್ಮದೇ ಸಂಪುಟದ ರಕ್ಷಣಾ ಸಚಿವರಿಗೂ ಗೊತ್ತಿಲ್ಲದೆ ಮತ್ತು ಸಚಿವ ಸಂಪುಟದ ಭದ್ರತಾ ಸಮಿತಿ ಅನುಮೋದನೆಯಿಲ್ಲದೆ, 126ರ ಬದಲು 36 ಯುದ್ಧವಿಮಾನಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಕೈಗೊಂಡರು. ಇದಕ್ಕಿಂತಲೂ 15 ದಿನ ಮೊದಲು, ಡಾಸೊ ಕಂಪನಿಯ ಆಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎರಿಕ್ ಟ್ರ್ಯಾಪಿಯರ್ ಭಾರತೀಯ ವಾಯುಪಡೆಯ ಆಗಿನ ಮುಖ್ಯಸ್ಥ ಅರೂಪ್ ರಾಹಾ ಮತ್ತು ಎಚ್‌ಎಎಲ್‌ನ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಆಗಿನ ಅಧ್ಯಕ್ಷ ಸುವರ್ಣ ರಾಜು ಜತೆಗೂಡಿ ಶೀಘ್ರದಲ್ಲೇ 126 ಯುದ್ಧವಿಮಾನ ಖರೀದಿ ಒಪ್ಪಂದ ಘೋಷಣೆಯಾಗಲಿದೆ ಎಂದಿದ್ದರು. ಎಚ್‌ಎಎಲ್, ಭಾರತೀಯ ವಾಯುಪಡೆ ಮತ್ತು ಡಾಸೊ ಮಧ್ಯೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್ ಹೇಳಿದ್ದರು. ಮೋದಿ ಅವರು ಒಪ್ಪಂದ ಘೋಷಣೆ ಮಾಡುವುದಕ್ಕೂ ಎರಡು ದಿನ ಮೊದಲು ಈ ಹೇಳಿಕೆ ನೀಡಿದ್ದರು ಜೈಶಂಕರ್. ಡಾಸೊ ಜತೆ ಬಗೆಹರಿಸಲು ಇನ್ನು ಒಂದು ಸಮಸ್ಯೆಯಷ್ಟೇ ಬಾಕಿ ಇದೆ ಎಂದು ರಕ್ಷಣಾ ಸಚಿವಾಲಯಕ್ಕೆ ಎಚ್‌ಎಎಲ್‌ ಪತ್ರ ಬರೆದಿದ್ದನ್ನು 2014ರ ಜುಲೈನಲ್ಲಿ ರಕ್ಷಣಾ ಸಚಿವರು ಬಹಿರಂಗಪಡಿಸಿದ್ದರು.

ಎಚ್‌ಎಎಲ್‌ ಹೋಯ್ತು, ರಿಲಯನ್ಸ್ ಬಂತು!

ಇವರ್‍ಯಾರಿಗೂ ಪ್ರಧಾನಿ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದಿರಲಿಲ್ಲ. ಪ್ರಧಾನಿ ಜತೆ ಪ್ಯಾರಿಸ್‌ಗೆ ತೆರಳಿದ್ದ ನಿಯೋಗದಲ್ಲಿ ಸುವರ್ಣ ರಾಜು ಕೂಡ ಇದ್ದರು. ಆದರೆ, ಪ್ರಧಾನಿಯವರು ಫ್ರಾನ್ಸ್‌ನ ಆಗಿನ ಅಧ್ಯಕ್ಷ ಫ್ರಾಂಸ್ವಾಒಲಾಂಡ್‌ಅವರನ್ನು ಭೇಟಿಯಾಗುವಾಗ ರಾಜು ಜತೆಗಿರಲಿಲ್ಲ. ಬದಲಿಗೆ ಅನಿಲ್ ಅಂಬಾನಿ ಇದ್ದರು. ಅದಕ್ಕೂ ವಾರದ ಮೊದಲಷ್ಟೇ ಅಂಬಾನಿ ತಮ್ಮ ರಕ್ಷಣಾ ಕಂಪನಿಯನ್ನು (ರಿಲಯನ್ಸ್ ಡಿಫೆನ್ಸ್) ನೋಂದಾಯಿಸಿದ್ದರು. ರಕ್ಷಣಾ ಉತ್ಪಾದನೆಯಲ್ಲಿ ಯಾವುದೇ ಅನುಭವ, ರಕ್ಷಣಾ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಹಣಕಾಸೂ ಇಲ್ಲದ ಅವರು ಕಂಪನಿ ಹೆಸರು ನೋಂದಾಯಿಸಿದ ಬೆನ್ನಲ್ಲೇ ಪ್ಯಾರಿಸ್‌ಗೆ ತೆರಳಿದ್ದರು. 2015ರ ಮಾರ್ಚ್‌ನಲ್ಲಿ, ಪ್ರಧಾನಿ ಪ್ರವಾಸಕ್ಕೂ ಮೊದಲೇ ಅಲ್ಲಿಗೆ ತೆರಳಿದ್ದ ಅಂಬಾನಿ ಫ್ರಾನ್ಸ್‌ ಸರ್ಕಾರ ಮತ್ತು ರಕ್ಷಣಾ ಕೈಗಾರಿಕೆ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಮೋದಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗುಜರಾತ್‌ನ ಪಿಪ್ಪಾವ್‌ನಲ್ಲಿ ಹಡಗುಗಟ್ಟೆ ಆರಂಭಿಸಿದ್ದ ಅವರು ಸಾಗರ ರಕ್ಷಣಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರು (ಇದನ್ನು ಭಾರತೀಯ ನೌಕಾಪಡೆ ಕಪ್ಪುಪಟ್ಟಿಗೆ ಸೇರಿಸಿದೆ).

ಇದಾದ ಕೆಲವು ತಿಂಗಳುಗಳಲ್ಲಿ 36 ಯುದ್ಧವಿಮಾನಗಳನ್ನು (126ರ ಬದಲಿಗೆ) ಖರೀದಿಸುವ ಒಪ್ಪಂದ ಕುದುರಿತು. ಭಾರತೀಯ ಪಾಲುದಾರ ಕಂಪನಿಯೂ ಬದಲಾಯಿತು.

ಉತ್ತರ ಮತ್ತು ಪಶ್ಚಿಮ ವಲಯಗಳಿಗೆ ತಲಾ ಎರಡರಂತೆನಾಲ್ಕು ಸ್ಕ್ವಾಡ್ರನ್ (ಯುದ್ಧವಿಮಾನಗಳ ತಂಡ) ಅಥವಾ 72 ಯುದ್ಧವಿಮಾನಗಳ ಅಗತ್ಯ ಭಾರತೀಯ ವಾಯುಪಡೆಗೆ ಇದೆ ಎಂಬುದನ್ನು ಮೋದಿಯವರಿಗೆ ತಿಳಿಸಲಾಗಿತ್ತು ಎಂಬುದನ್ನು ನಿವೃತ್ತ ಏರ್ ವೈಸ್ ಮಾರ್ಷಲ್ ಒಬ್ಬರು ತಿಳಿಸಿದ್ದಾರೆ. ಆದರೆ, ಮೋದಿ ಸರ್ಕಾರವು ಎರಡುಸ್ಕ್ವಾಡ್ರನ್ ರಫೇಲ್‌ ಯುದ್ಧವಿಮಾನಗಳನ್ನಷ್ಟೇ ಖರೀದಿಸಲು ನಿರ್ಧರಿಸಿತು.

2015ರ ಏಪ್ರಿಲ್‌ನಲ್ಲಿ ಪ್ಯಾರಿಸ್‌ಗೆ ತೆರಳಿದ್ದ ಪ್ರಧಾನಿ ಅಲ್ಲಿನ ಅಧ್ಯಕ್ಷರ ಜತೆಗೂಡಿ 36 ಯುದ್ಧವಿಮಾನಗಳ ಖರೀದಿ ಒಪ್ಪಂದ ಘೋಷಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಾಯುಪಡೆ ಅನುಮೋದನೆ ನೀಡಿದ್ದ ಟೆಂಡರ್ ಪ್ರಕ್ರಿಯೆಯ ಸಂರಚನೆಯನ್ನೇ ಈ ಒಪ್ಪಂದ ಒಳಗೊಂಡಿದೆ. ಆದರೆ ಅದಕ್ಕಿಂತಲೂಉತ್ತಮವಾಗಿರಲಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕಾಗಿ ಭಾರತೀಯ ಮಾತುಕತೆ ತಂಡವೊಂದನ್ನೂ (ಐಎನ್‌ಟಿ) ರಚಿಸಲಾಯಿತು. ನಂತರ ಏನಾಯಿತು?

ಹೆಚ್ಚು ಬೆಲೆಗೆ ಒಪ್ಪಂದ ಘೋಷಿಸಿದ ಪ್ರಧಾನಿ

ರಫೇಲ್ ಒಪ್ಪಂದಕ್ಕೆ520 ಕೋಟಿ ಯುರೋ (ಅಂದಾಜು ₹4 ಲಕ್ಷ ಕೋಟಿಗೂ ಹೆಚ್ಚು) ಬೆಲೆ ನಿಗದಿಪಡಿಸಲು ಸಲಹೆ ನೀಡಿತು. ಆದರೆ ಪ್ರಧಾನಿ ನೇತೃತ್ವದಸಚಿವ ಸಂಪುಟದ ಭದ್ರತಾ ಸಮಿತಿಯು 820 ಕೋಟಿ ಯುರೋಗೆ (ಅಂದಾಜು ₹6.41ಲಕ್ಷ ಕೋಟಿಗೂ ಹೆಚ್ಚು) ಒಪ್ಪಂದ ರೂಪಿಸಲು 2016ರ ಆಗಸ್ಟ್ 24ರಂದು ಅನುಮೋದನೆ ನೀಡಿತು. ಇದಕ್ಕೆ ವಿವರಣೆಯನ್ನೂ ನೀಡಲಿಲ್ಲ. ‘ಅಂತರ ಸರ್ಕಾರ ಒಪ್ಪಂದ’ದ ಕರಡಿನಲ್ಲಿಯೂ ಬದಲಾವಣೆ ಮಾಡಲಾಯಿತು. ಅಂತಿಮ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಕೆಲವೇ ದಿನ ಮೊದಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಡಾಸೊ ಕಂಪನಿಯ ಪರವಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ತೀರ್ಮಾನ ಕೈಗೊಳ್ಳುವಾಗ ಫ್ರಾನ್ಸ್‌ ಸರ್ಕಾರದ ಖಾತರಿಯನ್ನೂ (sovereign guarantee) ಕೇಂದ್ರ ಪಡೆಯಲಿಲ್ಲ. ಬದಲಿಗೆ ಫ್ರಾನ್ಸ್ ಪ್ರಧಾನಿಯವರಿಂದ (ಅಧ್ಯಕ್ಷರಿಂದಲೂ ಅಲ್ಲ) ಪತ್ರವೊಂದನ್ನು ಮಾತ್ರ ಪಡೆದಿತ್ತು. ಒಂದು ವೇಳೆ ಒಪ್ಪಂದದಂತೆ ಪೂರೈಕೆ ಮಾಡದಿದ್ದರೆ ಡಾಸೊ ಮತ್ತು ಎಂಬಿಡಿಎ ಪಾವತಿ ಮಾಡಬೇಕು ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು (ಇದಕ್ಕೆ ಸಮಯದ ಮಿತಿಯನ್ನೂ ನಿಗದಿಪಡಿಸಿರಲಿಲ್ಲ).

ಬ್ಯಾಂಕ್ ಖಾತರಿಯೂ ಪಡೆಯದೆ ಒಪ್ಪಂದ

ಯುಪಿಎ ಅವಧಿಯ 126 ಯುದ್ಧವಿಮಾನ ಖರೀದಿ ಒಪ್ಪಂದದ ವೇಳೆ ಡಾಸೊ ಕಂಪನಿ ಬ್ಯಾಂಕ್ ಖಾತರಿ ನೀಡಿತ್ತು. ಆದರೆ, ಮೋದಿ ಸರ್ಕಾರದ 36ಯುದ್ಧವಿಮಾನಖರೀದಿ ಒಪ್ಪಂದದ ವೇಳೆ ಬ್ಯಾಂಕ್ ಖಾತರಿ ನೀಡಲು ನಿರಾಕರಿಸಿದೆ. ಹಣಕಾಸಿನ ವಿಷಯದಲ್ಲಿ ಅದೊಂದು ದುರ್ಬಲ ಕಂಪನಿ ಎಂದು ತಿಳಿದಿದ್ದರೂ ಮೋದಿ ಸರ್ಕಾರ ಇದನ್ನು ಒಪ್ಪಿಕೊಂಡಿತು.

ಆರಂಭದ ಮೂರು ವರ್ಷಗಳ ನಂತರ ಯುದ್ಧವಿಮಾನಗಳನ್ನು ಹಸ್ತಾಂತರಿಸುವುದಾದರೂ ಬೃಹತ್ ಮೊತ್ತದ ಮುಂಗಡ ನೀಡಲೂ ಮೋದಿ ಸರ್ಕಾರ ಒಪ್ಪಿಕೊಂಡಿತ್ತು.

ವಿತರಣೆ ಸಂದರ್ಭದಲ್ಲಿ ‘ಎಸ್ಕ್ರೊ ಅಕೌಂಟ್‌ (ಮೂರನೇ ವ್ಯಕ್ತಿ ದೃಢೀಕರಿಸಿ ಪಾವತಿ ಮಾಡುವ ವ್ಯವಸ್ಥೆ)’ ಮೂಲಕ ಪಾವತಿ ಮಾಡಬೇಕೆಂದು ಆಗ ರಕ್ಷಣಾ ಸಚಿವಾಲಯದ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದ ಸುಧಾಂಶು ಮೊಹಾಂತಿ ಒತ್ತಿಹೇಳಿದ್ದರು. ಆದರೂ ಸರ್ಕಾರ ಇದನ್ನು ಕಡೆಗಣಿಸಿತ್ತು ಎಂಬುದು ಗಮನಿಸಬೇಕಾದ ಅಂಶ.

ಭ್ರಷ್ಟಾಚಾರ ತಡೆ ನಿಯಮ ತೆರವು!

ಇದೆಲ್ಲ ಸಾಲದೆಂಬಂತೆ, ಭ್ರಷ್ಟಾಚಾರ ತಡೆ ನಿಯಮವನ್ನೂ ಮೋದಿ ಸರ್ಕಾರ ತೆರವುಗೊಳಿಸಿತು (ಒಪ್ಪಂದದ ಯಾವುದೇ ಸಮಯದಲ್ಲೂ ಯಾವುದೇ ಕಾರಣಕ್ಕೂ ಭಾರತೀಯ ಅಧಿಕಾರಿಗಳಿಗೆ ಡಾಸೊ ಲಂಚ ನೀಡಬಾರದು ಎಂಬ ವಿಷಯಕ್ಕೆ ಸಂಬಂಧಿಸಿದ್ದು). ಡಾಸೊದ ಅಕೌಂಟ್‌ ಬುಕ್‌ ಪರಿಶೀಲಿಸಲು ಇರುವ ಹಕ್ಕನ್ನೂ ಬಿಟ್ಟುಕೊಟ್ಟಿತು (ಕಂಪನಿಯು ಅಕ್ರಮವಾಗಿ ಭಾರತದ ಅಧಿಕಾರಿಗಳಿಗೆ ಹಣ ನೀಡಿದೆ ಎಂಬ ಅನುಮಾನ ಬಂದರೆ ಪರಿಶೀಲಿಸಲು ಅಗತ್ಯವಿರುವ ಹಕ್ಕು. ರಫೇಲ್ ಒಪ್ಪಂದದ ಸಮಯದಲ್ಲೇ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ನಿಯಮದಲ್ಲೂ ಕೇಂದ್ರ ತಿದ್ದುಪಡಿ ಮಾಡಿತ್ತು. ಚುನಾವಣಾ ಬಾಂಡ್ ರೂಪದಲ್ಲಿ ಡಾಸೊ ಬಿಜೆಪಿಗೆ ಲಂಚ ನೀಡಿದರೂ ಗೊತ್ತಾಗದಂತೆ ಮಾಡಲಾಯಿತು).

‘ನಾನೊಬ್ಬ ಗುಜರಾತಿ, ಉದ್ಯಮವು ನನ್ನ ರಕ್ತದಲ್ಲಿದೆ’ ಎಂದು ಹೇಳಿದ್ದ ಮೋದಿ ಅವರು ಡಾಸೊ ಮತ್ತು ಫ್ರಾನ್ಸ್‌ ಸರ್ಕಾರದ ಜತೆ ಈ ಎಲ್ಲ ರಿಯಾಯಿತಿಗಳಿಗೆ ಯಾಕೆ ಒಪ್ಪಿಕೊಂಡರು?

ಈ ಪ್ರಶ್ನೆಗೆ,ಭಾರತೀಯ ವಾಯುಪಡೆಗೆ ತುರ್ತಾಗಿ ರಫೇಲ್ ಯುದ್ಧವಿಮಾನಗಳನ್ನು ಪೂರೈಸಬೇಕಾದ ಒತ್ತಡ ಸರ್ಕಾರದ ಮೇಲಿದೆ ಎಂಬ ಹಾರಿಕೆಯ ಉತ್ತರ ನೀಡಲಾಗಿದೆ. ಒಂದೇ ಸಮಸ್ಯೆಯೆಂದರೆ ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷದ ಬಳಿಕವಷ್ಟೇ, ಅಂದರೆ 2019ರ ಸೆಪ್ಟೆಂಬರ್‌ನಲ್ಲಿ ರಫೇಲ್ ಯುದ್ಧವಿಮಾನವನ್ನು ಡಾಸೊ ಪೂರೈಸಲಿದೆ. ಆದರೆ 24 ರಫೇಲ್‌ಗಳಿಗೆ 2015ರ ಫೆಬ್ರುವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದಈಜಿಪ್ಟ್‌ಗೆ ಅದೇ ವರ್ಷ ಜುಲೈನಲ್ಲಿ ಯುದ್ಧವಿಮಾನ ಪೂರೈಕೆ ಆರಂಭವಾಯಿತು. ಇದಕ್ಕೆ ಸರ್ಕಾರವು, ‘ರಫೇಲ್ ಯುದ್ಧವಿಮಾನವನ್ನು ಆಗಿದ್ದ ಸ್ಥಿತಿಯಲ್ಲೇ ಈಜಿಪ್ಟ್‌ ಖರೀದಿಸಿತ್ತು. ಆದರೆ ನಾವು ಭಾರತಕ್ಕೆಂದೇ ಕೆಲವೊಂದು ಅಪ್‌ಗ್ರೇಡ್‌ಗಳನ್ನು (ಮೇಲ್ದರ್ಜೆಗೇರಿಸುವ ಪ್ರಕ್ರಿಯೆ) ಮಾಡಲು ಕೇಳಿಕೊಂಡಿದ್ದೆವು. ಹೀಗಾಗಿ ಮೂರು ವರ್ಷಗಳ ಸಮಯ ನಿಗದಿಪಡಿಸಲಾಯಿತು’ ಎಂಬ ವಿವರಣೆ ನೀಡಿತು. ಆದರೆ, ಸರ್ಕಾರ ಹೇಳಿದ ಎಲ್ಲ ಅಪ್‌ಗ್ರೇಡ್‌ಗಳನ್ನು ಯುದ್ಧವಿಮಾನವು ಭಾರತಕ್ಕೆ ಹಸ್ತಾಂತರವಾದ ಬಳಿಕವೇ ಮಾಡಲಾಗುತ್ತದೆ ಎಂಬುದು ಭಾರತೀಯ ವಾಯುಪಡೆಯ ದಾಖಲೆಗಳಿಂದ ನಾವು ತಿಳಿದಿರುವ ವಿಚಾರವಷ್ಟೆ. ವಾಯುಪಡೆಗೆ ತುರ್ತಾಗಿ ಯುದ್ಧವಿಮಾನ ಅಗತ್ಯವಿದೆ ಎಂದಾದರೆ ಆ ಕ್ಷಣದಲ್ಲಿ ಸಿದ್ಧವಿರುವ ಹಾಗೆಯೇ ಖರೀದಿಸಬೇಕಿತ್ತಲ್ಲವೇ? ಇಂದಿರಾ ಗಾಂಧಿಯವರು ಅಂದು ‘ಮಿರಾಜ್ 2000’ ಖರೀದಿಸಿದ ಹಾಗೆ. ಏನೇ ಆದರೂ ಫ್ರಾನ್ಸ್ ವಾಯುಪಡೆಯ ರಫೇಲ್ ಯಾವುದೇ ದೃಷ್ಟಿಕೋನದಿಂದಲೂ ಕೆಟ್ಟ ಯುದ್ಧವಿಮಾನವೇನೂ ಅಲ್ಲವಲ್ಲ!

ಖರೀದಿದಾರರ ಮಾರುಕಟ್ಟೆಯಲ್ಲಿ ಎಲ್ಲವೂ!

ಚೌಕಾಸಿಯಿಂದ ನಾವು ಕಳೆದುಕೊಂಡದ್ದೇನು? 36 ರಫೇಲ್ ಖರೀದಿಸುವ ಮೋದಿಯವರ ನಿರ್ಧಾರದಿಂದ ತಂತ್ರಜ್ಞಾನ ಹಸ್ತಾಂತರ ಮತ್ತು ವ್ಯೂಹಾತ್ಮಕ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವ ಅವಕಾಶವನ್ನು ದೇಶ ಕಳೆದುಕೊಂಡಿತು. ಲಘು ಯುದ್ಧವಿಮಾನ ಖರೀದಿ ಒಪ್ಪಂದದ ಅನ್ವಯ ವಾಯುಪಡೆಗೆ ಸಿಬ್ಬಂದಿ ನೇಮಕಾತಿ ಮಾಡುವ ತಂಡದಲ್ಲಿದ್ದ ನಿವೃತ್ತ ಏರ್‌ ಮಾರ್ಷಲ್ ಒಬ್ಬರು ಹೀಗೆ ಹೇಳಿದ್ದಾರೆ; ‘ಸ್ಥಳೀಯ ಉತ್ಪಾದನೆ ಮತ್ತು ತಂತ್ರಜ್ಞಾನ ಹಸ್ತಾಂತರದ ಅವಕಾಶ ಕಳೆದುಕೊಂಡಿರುವುದು ದೊಡ್ಡ ನಷ್ಟ. ಹಾಗೇ ಊಹಿಸಿಕೊಳ್ಳಿ; ಹಲವು ವರ್ಷಗಳಲ್ಲಿ ಇಂತಹ ಅತ್ಯಾಧುನಿಕ ಯುದ್ಧವಿಮಾನಗಳನ್ನು ನಾವೇ ತಯಾರಿಸಿದರೆ ದೇಶದಲ್ಲಿ ಒಂದು ವ್ಯವಸ್ಥೆಯೇ ರೂಪುಗೊಳ್ಳುತ್ತಿತ್ತಲ್ಲವೇ? ಈಗ ಆಗಿರುವ ನಷ್ಟ ಬಹಳ ದೊಡ್ಡದು.

ಭಾರತೀಯ ವಾಯುಪಡೆ, ಯುಪಿಎ ಸರ್ಕಾರ (ಅದಕ್ಕಿಂತಲೂ ಹಿಂದಿನ ವಾಜಪೇಯಿ ಸರ್ಕಾರ) 126 ಯುದ್ಧವಿಮಾನಗಳನ್ನು ಖರೀದಿಸಲು ಬಯಸಿದ್ದಕ್ಕೆ ಕೆಲವು ಮುಖ್ಯ ಕಾರಣಗಳಿವೆ. ಹಳೆಯದಾದ ಮಿಗ್ ವಿಮಾನಗಳನ್ನು ಬದಲಾಯಿಸಲು ವಾಯುಪಡೆ ಉದ್ದೇಶಿಸಿತ್ತು. ಮಿಗ್ ಉತ್ತಮ ಯುದ್ಧವಿಮಾನವೇನೋ ಹೌದು. ಇದು ಏರ್‌ ಟು ಏರ್‌ ಹೋರಾಟಕ್ಕೆ ಮಾತ್ರ ಬಳಸಬಹುದಾದ ವಿಮಾನ. ಆದರೆ, 1960 ಮತ್ತು 70ರ ದಶಕದಲ್ಲಿ ವಿಶ್ವದ ರಕ್ಷಣಾ ಬಜೆಟ್ ಮತ್ತು ತಂತ್ರಜ್ಞಾನದ ಆಯಾಮ ಬದಲಾಯಿತು. ಏರ್ ಟು ಏರ್, ಗ್ರೌಂಡ್ ಅಟ್ಯಾಕ್ ಮತ್ತು ಬಾಂಬರ್ ವಿಮಾನಗಳ ಕಾಲ ಆರಂಭವಾಯಿತು. ಎಫ್‌–16, ಎಫ್/ಎ–18, ಮಿರಾಜ್ 2000ನಂತಹ ವಿಮಾನಗಳನ್ನು ಅಭಿವೃದ್ಧಿಪಡಿಸಲಾಯಿತು. ನಂತರ ರಫೇಲ್, ಯುರೋಫೈಟರ್ ಟೈಫೂನ್‌ಗಳು ಅಸ್ತಿತ್ವಕ್ಕೆ ಬಂದವು.

ಶತಮಾನ ಬದಲಾಗುತ್ತಿದ್ದಂತೆ ಭಾರತೀಯ ವಾಯುಪಡೆ ಕೂಡಾ ‘ಮಿಗ್’ ಬದಲಿಗೆ 126 ಮಲ್ಟಿ ರೋಲ್ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಯಿತು. ಮಲ್ಟಿ ರೋಲ್ ಮಾತ್ರವಲ್ಲದೆ ‘ಮಿರಾಜ್ 2000’ನಂತಹ ವಿಮಾನಗಳಿಗಿಂತಲೂ ಹೆಚ್ಚು ಸಾಮರ್ಥ್ಯದವುಗಳನ್ನು ಹೊಂದಬೇಕೆಂಬ ಬಯಕೆ ಹೊಂದಿತ್ತು. ಆಗಎಫ್‌–16, ಎಫ್/ಎ–18, ಯುರೋಫೈಟರ್ ಟೈಫೂನ್‌, ರಫೇಲ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

ರಷ್ಯಾ, ಬ್ರಿಟನ್, ಫ್ರಾನ್ಸ್‌ಗಳಿಂದ 7–8 ಮಾದರಿಯ ಯುದ್ಧವಿಮಾನಗಳನ್ನು ಖರೀದಿಸಿ ಅದಕ್ಕೆ ತಕ್ಕಂತೆ ಸಿಬ್ಬಂದಿಯನ್ನು ತರಬೇತುಗೊಳಿಸುವುದು, ಆ ವಿಮಾನಗಳ ನಿರ್ವಹಣೆ ಮಾಡುವುದು ಕಷ್ಟಕರ ಮತ್ತು ವೆಚ್ಚದಾಯಕವಾಗಿತ್ತು. ಹೀಗಾಗಿ ಲೋವರ್ ಎಂಡ್‌ನ ‘ತೇಜಸ್‌’ನಿಂದ ‘ಮೀಡಿಯಮ್ ಮಲ್ಟಿ ರೋಲ್ ಯುದ್ಧವಿಮಾನ’ ಮತ್ತು ಟಾಪ್‌ ಎಂಡ್‌ನ ‘ಸುಖೊಯ್–30 ಎಂಕೆಐ’ ಸೇರಿದಂತೆ 3–4 ಮಾದರಿಯ ಹೆಚ್ಚಿನ ಯುದ್ಧವಿಮಾನಗಳನ್ನು ಹೊಂದುವುದು ವಾಯುಪಡೆಯ ಉದ್ದೇಶವಾಗಿತ್ತು. 126 ಯುದ್ಧವಿಮಾನ ಖರೀದಿಸುವ ಯೋಜನೆ ಹಿಂದೆ ಈ ಎಲ್ಲ ಅಂಶಗಳು ಕೆಲಸ ಮಾಡಿವೆ.

ಬದಲಾಯ್ತು ರಕ್ಷಣಾ ಮಾರುಕಟ್ಟೆ, ವಹಿವಾಟು

ಈ ಮಧ್ಯೆ ಶೀತಲ ಸಮರದ ಬಳಿಕ ಪಶ್ಚಿಮದ ರಾಷ್ಟ್ರಗಳ, ವಿಶೇಷವಾಗಿ ಯುರೋಪ್‌ನಲ್ಲಿ ರಕ್ಷಣಾ ಬಜೆಟ್‌ನಲ್ಲಿ ತೀವ್ರ ಕುಸಿತವಾಯಿತು. ಅಮೆರಿಕದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಆ ರಾಷ್ಟ್ರಗಳ ರಕ್ಷಣಾ ಕೈಗಾರಿಕೆಗಳಿಗೆ ರಫ್ತು ಮಾರುಕಟ್ಟೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಯಿತು.

ಈ ಹೊಸ ಸನ್ನಿವೇಶದಲ್ಲಿ ಆ ರಾಷ್ಟ್ರಗಳಿಗೆ ಚೀನಾ, ಭಾರತ ಮತ್ತು ಸೌದಿ ಅರೇಬಿಯಾ ದೊಡ್ಡ ಮಾರುಕಟ್ಟೆ ಸಾಧ್ಯತೆಗಳಾಗಿ ಗೋಚರಿಸಿದವು. ಈ ಪೈಕಿ ಅಮೆರಿಕ ಮತ್ತು ಯುರೋಪ್‌ ತಮ್ಮ ಪ್ರಬಲ ಸ್ಪರ್ಧಿಯಾದ ಚೀನಾಕ್ಕೆ ಯುದ್ಧೋಪಕರಣಗಳನ್ನು ಮಾರಾಟ ಮಾಡದ ಪರಿಸ್ಥಿತಿ ಎದುರಿಸಿದವು. ಅವು ಭಾರತದತ್ತ ದೃಷ್ಟಿ ಹಾಯಿಸಿದವು. ಆದರೆ, ಭಾರತವು ತನ್ನದೇ ಆದ ರಕ್ಷಣಾ ಕೈಗಾರಿಕೆ ಅಭಿವೃದ್ಧಿಪಡಿಸುವ ಆಸಕ್ತಿ ಹೊಂದಿತ್ತು.

ಪಶ್ಚಿಮದ ದೇಶಗಳು ದೇಶಿ ಪಾಲುದಾರಿಕೆ (ಆಫ್‌ಸೆಟ್ ಪಾರ್ಟ್ನರ್) ವಿಚಾರದಲ್ಲಿ ಭಾರತದಂತಹ ರಾಷ್ಟ್ರಗಳಿಗೆ ವಿವಿಧ ಕೊಡುಗೆಗಳನ್ನು ನೀಡಲು ಮುಂದಾದವು. ರಕ್ಷಣಾ ಮಾರುಕಟ್ಟೆಯು ಪೂರೈಕೆದಾರರಿಂದ ಖರೀದಿದಾರರತ್ತ ವಾಲುತ್ತಿರುವುದನ್ನು ಮನಗಂಡ ಭಾರತ ತಂತ್ರಜ್ಞಾನ ಹಸ್ತಾಂತರಕ್ಕೂ ಬೇಡಿಕೆ ಇಡತೊಡಗಿತು. 126 ಯುದ್ಧವಿಮಾನ ಖರೀದಿ ಒಪ್ಪಂದವನ್ನು ವಿದೇಶಿ ಮಾಧ್ಯಮಗಳು ‘ಯುದ್ಧವಿಮಾನ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಿದವು. ಈ ಒಪ್ಪಂದಕ್ಕಾಗಿ ಅದಾಗಲೇ 2007ರಲ್ಲಿ 1,000 ಕೋಟಿ ಡಾಲರ್‌ಗಳನ್ನು ಮೀಸಲಿಡಲಾಯಿತು. ಭಾರತವು ಈ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ಮಾರಾಟಗಾರರು ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಈ ಒಪ್ಪಂ‌ದ ಅನ್ವಯ ಇನ್ನೂ 63 ವಿಮಾನಗಳ ಖರೀದಿಗೆ ಭಾರತಕ್ಕೆ ಅವಕಾಶವಿದ್ದು, ಮುಂದಿನ 40–50 ವರ್ಷಗಳವರೆಗೆ ನಿರ್ವಹಣೆ, ಬಿಡಿ ಭಾಗಗಳು ಮತ್ತು ಸೇವೆ ಒದಗಿಸುವ ಆಯ್ಕೆ ಹೊಂದಿದ್ದರು.

126 ಯುದ್ಧವಿಮಾನ ಖರೀದಿ ಒಪ್ಪಂದದ ಅನ್ವಯ, ಹೆಚ್ಚಿನ ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ತಂತ್ರಜ್ಞಾನವನ್ನು ಹಸ್ತಾಂತರಿಸುವ ಬಗ್ಗೆಪಶ್ಚಿಮದ ರಾಷ್ಟ್ರಗಳ ಕಂಪನಿಗಳು ಆಯ್ಕೆಯನ್ನು ನೀಡಬೇಕಾಗಿ ಬಂದಿತು. ‘ತೇಜಸ್‌’ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಿದ ಎಚ್‌ಎಎಲ್ ಬಳಿಕ ‘ಸುಖೊಯ್ 30–ಎಂಕೆಐ’ಯನ್ನು ನಿರ್ಮಾಣ ಮಾಡುವುದನ್ನು ಅರಿತುಕೊಂಡಿತು. ರಫೇಲ್ ನಿರ್ಮಾಣ ವಿಚಾರದಲ್ಲಿನ ತಂತ್ರಜ್ಞಾನ ಹಸ್ತಾಂತರ, ದೇಶಿ ಪಾಲುದಾರ ಮತ್ತಿತರ ವಿಚಾರಗಳು ಭಾರತಕ್ಕೆ ತನ್ನದೇ ಆದ ಐದನೇ ತಲೆಮಾರಿನ ಯುದ್ಧವಿಮಾನ ಅಬಿವೃದ್ಧಿಪಡಿಸುವ ಸಾಮರ್ಥ್ಯ ಒದಗಿಸಲು ನೆರವಾಗಲಿದೆ. ಪರಿಣಾಮವಾಗಿ ಈ 126 ಯುದ್ಧವಿಮಾನ ಖರೀದಿ ಒಪ್ಪಂದವೇ ಕೊನೆಯ ವಿದೇಶಿ ಖರೀದಿ ಒಪ್ಪಂದವಾಗುವುದರಲ್ಲಿತ್ತು. ಒಪ್ಪಂದದ ಹಿಂದೆ ಇದ್ದ ಅತಿ ದೊಡ್ಡ ವ್ಯೂಹಾತ್ಮಕ ತಂತ್ರಗಾರಿಕೆ ಇದಾಗಿತ್ತು.

ಈ ನಡುವೆ ವಿಮಾನ ಖರೀದಿ ವೆಚ್ಚ ಬದಲಾಯಿತು. ವಿರ್ವಹಣೆ, ಬಿಡಿ ಭಾಗಗಳು, ಇಂಧನ, ಮೇಲ್ದರ್ಜೆಗೇರಿಸುವುದರ (ಅಪ್‌ಗ್ರೇಡೆಷನ್) ವೆಚ್ಚ ಏರಿಕೆಯಾಯಿತು. ತಂತ್ರಜ್ಞಾನ ಹಸ್ತಾಂತರ, ದೇಶಿ ಪಾಲುದಾರಿಕೆ ವಿಷಯದಲ್ಲಿ ಎಷ್ಟು ಮೊತ್ತ ವಾಪಸ್ ಪಡೆಯಬಹುದು ಎಂಬ ವಿಷಯಗಳ ಬಗ್ಗೆ ರಕ್ಷಣಾ ಸಚಿವಾಲಯ ಲೆಕ್ಕಹಾಕಿತು. ಕೊನೆಗೆ, ಆರು ವಿಮಾನಗಳು ಮೂರು ವರ್ಷಗಳಲ್ಲಿ ಭಾರತದ ಮರುಭೂಮಿ, ಪರ್ವತ ಪ್ರದೇಶಗಳಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದವು. 2007ರಲ್ಲಿ ಪ್ರಸ್ತಾವನಾ ಮನವಿ (ಆರ್‌ಎಫ್‌ಪಿ) ಸಲ್ಲಿಕೆಯಾಗಿ 2010ರ ವೇಳೆಗೆ ಪರೀಕ್ಷಾರ್ಥ ಹಾರಾಟ ನಡೆದಿತ್ತು. ವಾಯುಪಡೆಯಿಂದ ತಾಂತ್ರಿಕ ಲೆಕ್ಕಾಚಾರ, ರಕ್ಷಣಾ ಇಲಾಖೆಯಿಂದ ವೆಚ್ಚದ ಲೆಕ್ಕಾಚಾರ 2011ರ ವೇಳೆಗೆ ಪೂರ್ಣಗೊಂಡಿತು. ಅಂತಿಮ ವೆಚ್ಚದ ಮಾತುಕತೆ ಪೂರ್ಣಗೊಂಡು 2014ರ ಜುಲೈನಲ್ಲಿ ರಕ್ಷಣಾ ಇಲಾಖೆಗೆ ಎಚ್‌ಎಎಲ್ ಪತ್ರ ಬರೆದು ತನ್ನ ಹಾಗೂ ಡಾಸೊ ಮಧ್ಯೆ ಇನ್ನೊಂದು ಸಮಸ್ಯೆ ಬಗೆಹರಿಯಬೇಕಿದೆ ಎಂದು ತಿಳಿಸಿತು.

ಬದಲಾಯ್ತು ಸರ್ಕಾರ, ಬದಿಗೆ ಸರಿಯಿತು ಒಪ್ಪಂದ

ಸರ್ಕಾರ ಬದಲಾಗುವುದರೊಂದಿಗೆ ಈ ಸಂಪೂರ್ಣ ಪ್ರಕ್ರಿಯೆ ಬದಿಗೆ ಸರಿಯಿತು. ಅಲ್ಲದೆ, 126 ಯುದ್ಧವಿಮಾನ ಖರೀದಿಸಲು ಮೀಸಲಿಡಲಾಗಿದ್ದ 1000 ಕೋಟಿ ಡಾಲರ್‌ 36ಯುದ್ಧವಿಮಾನಗಳ ಖರೀದಿಗೆ ಮತ್ತು ಶಸ್ತ್ರಾಸ್ತ್ರ ಖರೀದಿಗೆ 100 ಕೋಟಿ ಡಾಲರ್ ಬೇಕಾಗಬಹುದು ಎಂದುಹೇಳಲಾಯಿತು.

ಯುಪಿಎ ಸರ್ಕಾರ ಯುದ್ಧವಿಮಾನ ಖರೀದಿಗೆ ವಿಳಂಬ ಮಾಡಿ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿತು ಎಂದು ಆರೋಪಿಸುವುದು ಸುಲಭ. ಆದರೆ, ವಾಸ್ತವಾಂಶಗಳು ಮತ್ತು ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

36 ರಫೇಲ್ ಖರೀದಿ ಒಪ್ಪಂದ...

ಒಪ್ಪಂದದಲ್ಲಿ ಶೇ 9ರಷ್ಟು ರಿಯಾಯಿತಿ ಪಡೆದುಕೊಂಡಿರುವುದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ (ಶೇ 20, 40 ಹೀಗೆ ರಿಯಾಯಿತಿ ಪಡೆದುಕೊಂಡಿರುವುದಾಗಿ ಮೋದಿ ಸರ್ಕಾರದ ಕೆಲವು ಸಚಿವರು ಹೇಳಿಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿಯ ಒಪ್ಪಂದಕ್ಕೆ ಹೋಲಿಸಿದರೆ ವೆಚ್ಚದಲ್ಲಿ ಶೇ 2.8ರಷ್ಟು ಪ್ರಯೋಜನ ಪಡೆದುಕೊಳ್ಳಲಾಗಿದೆ ಎಂದು ಸಿಎಜಿ ಅಥವಾ ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ. ಆದರೆ, ತಂತ್ರಜ್ಞಾನ ಹಸ್ತಾಂತರ, ಸರ್ಕಾರದ ಮತ್ತು ಬ್ಯಾಂಕ್ ಖಾತರಿ ಮೋದಿ ಸರ್ಕಾರದ ಒಪ್ಪಂದದಲ್ಲಿ ಇಲ್ಲ ಎಂಬುದು ಗಮನಾರ್ಹ).

126 ಯುದ್ಧವಿಮಾನಗಳನ್ನು ಖರೀದಿಸುವುದಿದ್ದರೆ ಮೋದಿ ಸರ್ಕಾರಕ್ಕೆ ಇನ್ನಷ್ಟು ಚೌಕಾಸಿ ಮಾಡಲು ಅವಕಾಶವಿತ್ತಲ್ಲವೇ? ಶೇ 20ರ ರಿಯಾಯಿತಿಯೊಂದಿಗೆ ತಂತ್ರಜ್ಞಾನ ಹಸ್ತಾಂತರ, ಹೆಚ್ಚಿನ ದೇಶಿ ಪಾಲುದಾರಿಕೆ ಪಡೆಯಬಹುದಿತ್ತಲ್ಲವೇ? ಶೇ 9ರ ರಿಯಾಯಿತಿಯಲ್ಲಾದರೂ 126 ಯುದ್ಧವಿಮಾನಗಳನ್ನು ಖರೀದಿಸಬಾರದೇಕೆ? ಸಚಿವ ಸಂಪುಟದ ಭದ್ರತಾ ಸಮಿತಿಯು ಡಾಸೊ ಮತ್ತು ಫ್ರಾನ್ಸ್‌ಗೆ ಎಲ್ಲ ವಿನಾಯಿತಿಗಳನ್ನು ನೀಡಿದ್ದೇಕೆ?

ರಫೇಲ್ ಯುದ್ಧವಿಮಾನ ಇದ್ದರೆ ಪಾಕಿಸ್ತಾನಕ್ಕೆ ಇನ್ನಷ್ಟು ತೀಕ್ಷ್ಣವಾದ ತಿರುಗೇಟು ನೀಡಬಹುದಾಗಿತ್ತು ಎಂದು ಪ್ರಧಾನಿಯವರು ಇತ್ತೀಚೆಗೆ ಹೇಳಿದ್ದಾರೆ. ಅದು ನಿಜವಿರಬಹುದು. ಹಾಗಿದ್ದರೆ 2014 ಅಥವಾ 2015ರಲ್ಲಿ ಯಾಕೆ 126 ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ? ಈಗ ಸರ್ಕಾರ ಭರವಸೆ ನೀಡುತ್ತಿರುವಂತೆ 2019ರ ಸೆಪ್ಟೆಂಬರ್‌ಗೆ ಬದಲಾಗಿ 2017ಕ್ಕೇ ವಾಯುಪಡೆಗೆ ರಫೇಲ್ ದೊರಕಿಸಿಕೊಡಬಹುದಿತ್ತಲ್ಲವೇ?

ನಿಜವಾಗಿಯೂ ಭಾರತೀಯ ವಾಯುಪಡೆಯ ಬಲ ವೃದ್ಧಿಸುವುದು, ರಕ್ಷಣಾ ಕೈಗಾರಿಕೆಯ ವ್ಯೂಹಾತ್ಮಕ ಬಲ ವೃದ್ಧಿಯೇ ಉದ್ದೇಶ ಆಗಿದ್ದರೆ ದರ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ದೇಶಕ್ಕೆ ಹೆಚ್ಚು ನೆರವಾಗುವಂತೆ ಹಾಗೂ ಬೇಗನೆ ವಿತರಣೆಯಾಗುವಂತೆ ನೋಡಿಕೊಳ್ಳಬಹುದಿತ್ತಲ್ಲವೇ?

ಅಥವಾ ಈಗಾಗಲೇ ಕೇಳಿಬಂದಿರುವ ಆರೋಪದಂತೆ, 36 ರಫೇಲ್ ಖರೀದಿ ಒಪ್ಪಂದವು ನಿರ್ಧಾರ ಕೈಗೊಳ್ಳುವವರ, ಆಡಳಿತ ಪಕ್ಷದ ಮತ್ತು ಬಂಡವಾಳಗಾರರಿಗೆ ನೆರವಾಗಲೆಂದೇ ರೂಪುಗೊಂಡಿತೇ?

36 ರಫೇಲ್ ಖರೀದಿ ಒಪ್ಪಂದದಲ್ಲಿ ಪ್ರಧಾನಿ ಕಾರ್ಯಾಲಯ ಭಾಗಿಯಾದ ಪ್ರತಿ ಹಂತ, ಪ್ರತಿ ವಿಷಯವೂ ಅಚ್ಚರಿದಾಯಕ. ಒಪ್ಪಂದದ ಸಂಧಾನ ಸಮಿತಿಯಲ್ಲಿ ಅಥವಾ ಎರಡು ರಾಷ್ಟ್ರಗಳ ನಡುವೆ ಯಾವುದೇ ಬಿಕ್ಕಟ್ಟಿದ್ದರೆ ಆಗ ಪ‍್ರಧಾನಿ ಕಾರ್ಯಾಲಯ ಮಧ್ಯಪ್ರವೇಶಿಸಿ ಅದನ್ನು ಬಗೆಹರಿಸಿದ್ದರೆ ಮತ್ತು ವಾಯುಪಡೆಗೆ ತೃಪ್ತಿಕರವಾಗುವಂತಿದ್ದರೆ ಸರಿ. ಆದರೆ, ದಾಖಲೆಗಳು ಹೇಳುವಂತೆ ರಫೇಲ್ ಒಪ್ಪಂದದಲ್ಲಿ ಇದು ಆಗಿಲ್ಲ. ಒಪ್ಪಂದದ ಪ್ರಮುಖ ಬದಲಾವಣೆಯಲ್ಲಿ ಪ್ರಧಾನಿ ಕಾರ್ಯಾಲಯ ಪ್ರಮುಖ ಪಾತ್ರ ವಹಿಸಿತು. ಸಂಧಾನ ಸಮಿತಿಯನ್ನೂ ಮೀರಿ ನಿರ್ಧಾರ ಕೈಗೊಂಡಿತು.ಇದು ಅನಪೇಕ್ಷಿತ ಆಸಕ್ತಿಯನ್ನು ಹೊಂದಿಲ್ಲವೇ?

ದೇಶಿ ಪಾಲುದಾರಿಕೆಖಾಸಗಿ ಕಂಪನಿಗೆ

ದೇಶಿ ಪಾಲುದಾರಿಕೆಯುಹೂಡಿಕೆ, ತಂತ್ರಜ್ಞಾನ, ಉದ್ಯೋಗ ಸೇರಿದಂತೆ ಕೈಗಾರಿಕಾ ಕ್ಷೇತ್ರದ ಕೆಲವು ಲಾಭಗಳಿಗೆ ಸಂಬಂಧಿಸಿದೆ. ‘ಭಾರತದಲ್ಲೇ ತಯಾರಿಸಿ (ಮೇಕ್‌ ಇನ್ ಇಂಡಿಯಾ)’ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿದ್ದರೆ; ದೇಶಿ ಪಾಲುದಾರಿಕೆಯು ಹೂಡಿಕೆಯನ್ನು ತರುತ್ತದೆ. ಇದು ಉತ್ಪಾದನಾ ಘಟಕಗಳನ್ನು ನಿರ್ಮಿಸಲು, ಭಾರತವು ಖರೀದಿಸುವಂತಹ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ರಕ್ಷಣಾ ಕೈಗಾರಿಕೆಯ ಅಭಿವೃದ್ಧಿಗೆ ನೆರವಾಗುತ್ತದೆ. ಅಲ್ಲದೆ, ರಫೇಲ್ ನಿರ್ಮಾಣದ ತಂತ್ರಜ್ಞಾನವೂ ನಮಗೆ ದೊರೆಯುತ್ತದೆ. ಈ ವಿಚಾರದಲ್ಲಿ ಸರ್ಕಾರದ ಆಯ್ಕೆ ಡಾಸೊ ಮತ್ತು ಎಚ್‌ಎಎಲ್ ಆಗಿರಬೇಕಿತ್ತು.

ಇದಕ್ಕೆ ಹೊರತಾಗಿ ಡಾಸೊನ ಫಾಲ್ಕನ್‌ ಜೆಟ್‌ಗೆ ಅನುವು ಮಾಡಿಕೊಡಲು ದೇಶಿ ಪಾಲುದಾರಿಕೆಯನ್ನು ದುರ್ಬಲಗೊಳಿಸಲಾಯಿತು. ಡಾಸೊ–ರಿಲಯನ್ಸ್‌ ಏರೋಸ್ಪೇಸ್ ಲಿಮಿಟೆಡ್ (ಡಿಆರ್‌ಎಎಲ್‌) ಎಂಬ ಜಂಟಿ ಸಂಸ್ಥೆ ಸ್ಥಾಪಿಸಲಾಯಿತು. ಇದರಿಂದ ಭಾರತಕ್ಕೇನು ಪ್ರಯೋಜನ? ಇಂತಹ ಸಂದರ್ಭದಲ್ಲಿ ಭಾರತೀಯ ಪಾಲುದಾರ ಕಂಪನಿಯು ಸರ್ಕಾರಕ್ಕೆ ನಿಕಟವಾಗಿದ್ದುಕೊಂಡು ವಿದೇಶಿ ಕಂಪನಿಗೆ ನೆರವಾಗಲಿದೆಯೇ? ಅಥವಾ ದರ ಹೆಚ್ಚಿಸಿದ್ದಕ್ಕಾಗಿ ಚುನಾವಣಾ ಬಾಂಡ್ ಮೂಲಕ ಲಂಚ ನೀಡುವ ಮಾಧ್ಯಮವಾಗಿ ಬಳಕೆಯಾಗಲಿದೆಯೇ?

ದೇಶಿ ಪಾಲುದಾರನ ಆಯ್ಕೆ ವಿಚಾರವನ್ನು ಸರ್ಕಾರ ಸಮರ್ಥಿಸಿತು. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಅನ್ನು ದೇಶಿ ಪಾಲುದಾರ ಕಂಪನಿಯಾಗಿ ಡಾಸೊ ಆಯ್ಕೆ ಮಾಡಿದ್ದು ತಿಳಿದಿರಲಿಲ್ಲ ಎಂದಿತು. 2015ರ ಏಪ್ರಿಲ್‌ನಲ್ಲಿ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಘೋಷಿಸುವಾಗ ಪ್ರಧಾನಿ ಮೋದಿ ಜತೆ ಅನಿಲ್ ಅಂಬಾನಿ ಇರಲಿಲ್ಲವೇ? ದೇಶಿ ಪಾಲುದಾರ ಕಂಪನಿಯ ಆಯ್ಕೆ ವೇಳೆ ಅನಿಲ್ ಅಂಬಾನಿ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಲಾಗಿತ್ತು ಎಂಬುದು ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ನಾವು ಅಂದುಕೊಳ್ಳಬೇಕೇ? ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾಒಲಾಂಡ್‌ ಸಂಗಾತಿ ಜೂಲಿ ಗಯೆಟ್ ಅವರ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದನ್ನು ಮೋದಿ ಜತೆ ಅಂಬಾನಿ ಹೇಳಿಯೇ ಇರಲಿಲ್ಲ ಎಂದು ತಿಳಿದುಕೊಳ್ಳಬೇಕೇ?

ರಕ್ಷಣಾ ಖರೀದಿ ಪ್ರಕ್ರಿಯೆಯ ದೇಶಿ ಪಾಲುದಾರಿಕೆ ನಿಯಮಗಳಿಗೆ 2016ರಲ್ಲಿ ಸರ್ಕಾರ ತಿದ್ದುಪಡಿ ಮಾಡಿತ್ತು. ಇದಕ್ಕೂ ಮೊದಲಿನ ನಿಯಮದ ಪ್ರಕಾರ, ದೇಶಿ ಪಾಲುದಾರನಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ಡಾಸೊ ಮೊದಲೇ ತಿಳಿಸಬೇಕಿತ್ತು. ಆದರೆ, ಒಪ್ಪಂದ ರೂಪುಗೊಳ್ಳುವ ವೇಳೆಗೆ ನಿಯಮ ಬದಲಾಗಿತ್ತು. ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ನೀಡದೇ ಅನಿಲ್ ಅಂಬಾನಿಯ ರಿಲಯನ್ಸ್‌ ಅನ್ನು ಪಾಲುದಾರನಾಗಿ ಆಯ್ಕೆ ಮಾಡುವ ಅವಕಾಶ ಅದಕ್ಕಿತ್ತು.

2ಜಿ ತರಂಗಗುಚ್ಛ ಹಗರಣಕ್ಕೆ ಸಂಬಂಧಿಸಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು ಎಂದು ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಸಿಂಗ್ ಅವರು 2ಜಿ ತರಂಗಗುಚ್ಛ ಹಂಚಿಕೆ ವೇಳೆ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಏನು ಮಾಡಿದ್ದರು ಎಂಬುದನ್ನು ತಿಳಿಯುವ ಗೋಜಿಗೇ ಹೋಗಿರಲಿಲ್ಲ ಎನ್ನಲಾಗಿತ್ತು. ಡಾಸೋ–ರಿಲಯನ್ಸ್‌ ಪ್ರಕರಣದಲ್ಲಿ ಮೋದಿ ಸರ್ಕಾರವೂ ಹಾಗೆಯೇ ನಡೆದುಕೊಂಡಿತ್ತು ಎನ್ನಬಹುದಲ್ಲವೇ? ಸರ್ಕಾರವು ನಿಯಮವನ್ನು ಉಲ್ಲಂಘಿಸಿದ್ದು ಮಾತ್ರವಲ್ಲದೆ ಕಾನೂನನ್ನೇ ಬದಲಾಯಿಸಿತಲ್ಲವೇ?

ರಫೇಲ್‌ ಒಪ್ಪಂದದಲ್ಲಿ ಅನಿಲ್ ಅಂಬಾನಿಯವರು ₹30,000 ಕೋಟಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಅಂಬಾನಿಯವರು ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಪಡೆದಿದ್ದಾರೆ ಎಂದು ಸರ್ಕಾರ ದೇಶಕ್ಕೆ ಮಾಹಿತಿ ನೀಡಿತು. ಸಂಸತ್‌ ಮತ್ತು ಸುಪ್ರೀಂ ಕೋರ್ಟ್‌ಗೂ ಅದನ್ನೇ ತಿಳಿಸಲಾಯಿತು. ದೇಶಿ ಗುತ್ತಿಗೆವಿಚಾರದಲ್ಲಿ ಡಾಸೊಗೆ ಒಟ್ಟು 72 ಪಾಲುದಾರರಿದ್ದು, ಅವುಗಳಲ್ಲಿ ರಿಲಯನ್ಸ್‌ ಕೂಡ ಒಂದು ಎಂದು ಕೆಲವು ಸಚಿವರು ಸಮರ್ಥನೆ ನೀಡಿದರು.

ಸತ್ಯ ಏನೆಂದರೆ, ಆಫ್‌ಸೆಟ್ ಪೈಕಿ ಡಾಸೊ ಅತಿ ಹೆಚ್ಚಿನ; ಅಂದರೆ ₹30,000 ಕೋಟಿ ಪೈಕಿ ₹15,000ಕೋಟಿಯಷ್ಟು ಪಾಲು ಹೊಂದಿದೆ. ರಫೇಲ್ ಒಪ್ಪಂದದಲ್ಲಿರುವ ಫ್ರಾನ್ಸ್‌ನ ‘ಥೇಲ್ಸ್‌’ ಮತ್ತು ‘ಎಂಡಿಬಿಎ’ ಕಂಪನಿ ಜತೆಯೂ ಅನಿಲ್ ಅಂಬಾನಿ ಕಂಪನಿಆಫ್‌ಸೆಟ್ ಗುತ್ತಿಗೆ ಹೊಂದಿದೆ.₹30,000 ಕೋಟಿ ಪೈಕಿ ಸುಮಾರು ₹21,000 ಕೋಟಿಗೆ ಅಂಬಾನಿ ಗಾಳಹಾಕಿರುವ ಸಾಧ್ಯತೆ ಇದೆ. ರಫೇಲ್ ಒಪ್ಪಂದದಲ್ಲಿ ಭಾಗಿಯಾಗಿರುವ ‘ಸಾಫ್ರಾನ್’ ಕಂಪನಿ ಮಾತ್ರ ಅಂಬಾನಿಯವರನ್ನು ಆಫ್‌ಸೆಟ್‌ ಪಾಲುದಾರನನ್ನಾಗಿ ಸ್ವೀಕರಿಸಲಿಲ್ಲ.ರಫೇಲ್‌ನ ಎಂಜಿನ್ ತಯಾರಿಸುವ ‘ಸ್ನೆಕ್ಮಾ’ವು‘ಸಾಫ್ರಾನ್’ ಒಡೆತನದ್ದಾಗಿದೆ.

ರಫೇಲ್‌ ನಂತರ...?

ರಫೇಲ್‌ನದ್ದು ಕೇವಲ ಅರ್ಧ ಕಥೆಯಷ್ಟೆ. ಇನ್ನರ್ಧ ಮುಂದೆ ತಿಳಿಯಬೇಕಿದೆ. ಅದಕ್ಕೂ ಮುನ್ನ ಸ್ವಲ್ಪ ಹಿಂದಕ್ಕೆ ಹೋಗೋಣ. 36 ಯುದ್ಧವಿಮಾನ ಖರೀದಿಸುವುದಾಗಿ ಮೋದಿ ಘೋಷಿಸುವುದಕ್ಕೂ ಎರಡು ತಿಂಗಳು ಮುನ್ನ, ಸರ್ಕಾರದ ಆಪ್ತವಲಯದಲ್ಲಿದ್ದ ನಿವೃತ್ತ ಏರ್‌ಮಾರ್ಷಲ್ ಒಬ್ಬರು ನನ್ನ ಬಳಿ ಮಾತನಾಡಿದ್ದರು. ‘126 ಯುದ್ಧವಿಮಾನ ಖರೀದಿ ಯೋಜನೆ ಕೊನೆಗೊಂಡಿತು. ಸರ್ಕಾರ ಪ್ರತ್ಯೇಕ ಒಪ್ಪಂದದಲ್ಲಿ ಎರಡು ಸ್ಕ್ವಾಡ್ರನ್ ರಫೇಲ್‌ ಅಥವಾ ಬೇರೆ ವಿಮಾನಗಳನ್ನು ಖರೀದಿಸಬಹುದು. ಅದು ‘ಗ್ರಿಪೆನ್’ ಆಗಿದ್ದರೂ ಇರಬಹುದು’ ಎಂದು ಅವರು ಹೇಳಿದ್ದರು. ದೌರ್ಭಾಗ್ಯವಶಾತ್ ನಾನದನ್ನು ಬರೆಯಲೇ ಇಲ್ಲ. ಯಾಕೆಂದರೆ ಅವರ ಮಾತುಗಳನ್ನು ನಂಬಿರಲಿಲ್ಲ. ಆ ಸಂದರ್ಭದಲ್ಲಿ ಅವರು ‘ಏರೋ ಇಂಡಿಯಾ 2015’ರ ವಿಚಾರ ಸಂಕಿರಣವೊಂದರಲ್ಲಿ ಸ್ವೀಡನ್‌ನ ರಕ್ಷಣಾ ಕಂಪನಿ ‘ಎಸ್‌ಎಎಬಿ’ ಅಧಿಕಾರಿಗಳ ಮತ್ತು ಸ್ವೀಡನ್‌ನ ವಾಯುಪಡೆ ಪೈಲಟ್‌ಗಳ ಜತೆ ಮಾತುಕತೆ ನಡೆಸುತ್ತಿದ್ದರು. ಸ್ವೀಡನ್‌ನವರಿಗಾಗಿ ಒಪ್ಪಂದ ಕುದುರಿಸಲು ಪ್ರಯತ್ನಿಸುತ್ತಿದ್ದೇನೆ ಎಂಬುದನ್ನು ಬಿಂಬಿಸುವುದಕ್ಕಾಗಿನಿವೃತ್ತ ಏರ್‌ಮಾರ್ಷಲ್ ಹಾಗೆ ಹೇಳಿರಬಹುದು ಎಂದಷ್ಟೇ ನಾನು ಭಾವಿಸಿದ್ದೆ.

ಹಿಂದೆ ನಿರ್ಧಾರವಾಗಿದ್ದ ಬೆಲೆಗೆ ಭವಿಷ್ಯದಲ್ಲಿ ಹೆಚ್ಚು ರಫೇಲ್ ಖರೀದಿಸಲು ಆಯ್ಕೆಗಳಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಭಾರತೀಯ ವಾಯುಪಡೆಗೆ ಇನ್ನಷ್ಟು ರಫೇಲ್ ಬೇಕು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ? ಭವಿಷ್ಯದ ಖರೀದಿಗೆ ಈಗಿನ ದರವನ್ನೇ ಉಳಿಸಿಕೊಳ್ಳುವುದಾದರೂ ಉತ್ತಮವಲ್ಲವೇ?

ರಫೇಲ್ ಯುದ್ಧವಿಮಾನಗಳನ್ನು ದೇಶದಲ್ಲೇ ತಯಾರಿಸುವುದಕ್ಕಾಗಿ ತಂತ್ರಜ್ಞಾನ ಹಸ್ತಾಂತರಿಸುವುದು ‘ಭಾರತದಲ್ಲೇ ತಯಾರಿಸಿ’ ಯೋಜನೆಯ ರೂವಾರಿ ಮೋದಿಗೆ ಬೇಕಿಲ್ಲವೇ? ವಾಯುಪಡೆಯ 126 ಮಲ್ಟಿ ರೋಲ್ ಯುದ್ಧವಿಮಾನಗಳ ಅವಶ್ಯಕತೆಗಳನ್ನು ಪೂರೈಸಲು ಬೇರೆ ಯುದ್ಧವಿಮಾನಗಳ ಖರೀದಿಗೆ ನಿರ್ಧರಿಸುವುದಾದಲ್ಲಿ ಹೆಚ್ಚು ರಫೇಲ್‌ ವಿಮಾನಗಳನ್ನೇ ಖರೀದಿಸಲು ಯಾಕೆ ಅವರು ಮುಂದಾಗಲಿಲ್ಲ?

ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ತಿಂಗಳುಗಳಲ್ಲಿ ಸರ್ಕಾರವು 110 ಯುದ್ಧವಿಮಾನಗಳಿಗಾಗಿ ಮಾಹಿತಿ ಸಂಗ್ರಹಿಸುವ ಅಧಿಕೃತ ಪ್ರಕ್ರಿಯೆ ‘ಆರ್‌ಎಫ್‌ಐ (ರಿಕ್ವೆಸ್ಟ್‌ ಫಾರ್ ಇನ್‌ಫಾರ್ಮೇಷನ್)’ ಆರಂಭಿಸಿತು. ‘ಸಿಂಗಲ್ ಎಂಜಿನ್ ಯುದ್ಧವಿಮಾನ’ಗಳಿಗೇ ನಮ್ಮ ಆದ್ಯತೆ ಎಂದೂ ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಹೇಳಿದ್ದರು.‘ಸಿಂಗಲ್ ಎಂಜಿನ್ ಯುದ್ಧವಿಮಾನ’ಗಳ ಸಂಭಾವ್ಯ ಪೂರೈಕೆದಾರರು ಯಾರು? ಎಸ್‌ಎಎಬಿ (ಗ್ರಿಪೆನ್) ಮತ್ತುಲಾಕ್ಹೀಡ್ ಮಾರ್ಟಿನ್ (ಎಫ್‌–16, ಈಗ ಎಫ್‌–21 ಎಂದು ಬದಲಾಗಿದೆ).ಎಸ್‌ಎಎಬಿಯು ಭಾರತೀಯ ಪಾಲುದಾರನನ್ನಾಗಿ ಯಾವ ಕಂಪನಿಯನ್ನು ಹೊಂದಿದೆ? ಗೌತಮ್ ಅದಾನಿಯವರ ಅದಾನಿ ಗ್ರೂಪ್‌. ಈಗ ಮೋದಿ ಅವರು ಯಾರ ಜತೆ ಪಾಲುದಾರಿಕೆ ಹೊಂದಿರಬೇಕು ಎಂದುಎಸ್‌ಎಎಬಿಗೆ ಹೇಳಬೇಕಿಲ್ಲವಲ್ಲ. ರಫೇಲ್ ಒಪ್ಪಂದದ ಬಳಿಕಎಸ್‌ಎಎಬಿಗೂ ಸಂದೇಶ ದೊರೆತಿದೆ.

ಯಾರಿಗೂ ತಿಳಿಯದಂತೆ ಹಣ ಕಳುಹಿಸುವ ಮತ್ತು ಸ್ವೀಕರಿಸುವಚುನಾವಣಾ ಬಾಂಡ್‌ನಂತಹ ಚಾಣಾಕ್ಷ ಮಾರ್ಗಗಳು ಇಂದು ಜಗತ್ತಿನಲ್ಲಿ ಹಲವಿವೆ. ಅದು ಚುನಾವಣಾ ಬಾಂಡ್ ಮೂಲಕವೂ ಇರಬಹುದು. ‘ರಫೇಲ್ ಹಗರಣ’ವು ನಮ್ಮ ಕಣ್ಣ ಮುಂದೆ ಸರಿಯಾದ ಒಪ್ಪಂದದಂತೆಯೇ ಕಾಣುವಂತಿದೆ. ಆದರೆ ಅದರ ಒಳಗಣ ಅನಿಯಂತ್ರಿತ ಕ್ರಮಗಳನ್ನು ನಾವು ಒಳಹೊಕ್ಕು ನೋಡಿದರೆ ಮಾತ್ರವೇ ಕಾಣಿಸಬಹುದು. ಪ್ರಧಾನಿಯವರನ್ನು ಅನುಮಾನದಿಂದ ನೋಡಲು ಮತ್ತು ದೇಶಕ್ಕಾಗಿ ಅವರು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಸೂಚಿಸುವಂತಾಗಬೇಕು. ಪ್ರಧಾನಿಯವರನ್ನೇ ವಿಚಾರಣೆ ನಡೆಸಬಲ್ಲ ಲೋಕಪಾಲವನ್ನು ನೇಮಕ ಮಾಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಹೀಗಾಗಿ ರಫೇಲ್‌ ಬಗ್ಗೆ ನ್ಯಾಯಾಲಯದ ನೇತೃತ್ವದಲ್ಲಿ ಸಿಬಿಐ ತನಿಖೆಯಾಗದಿದ್ದರೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವುದೇ ಸೂಕ್ತ. ಅದೂ ಆಗದಿದ್ದಲ್ಲಿ, ಅನುಮಾನಾಸ್ಪದವಾಗಿ ಕಾಣುವ ಎಲ್ಲ ವಿಷಯಗಳ ಬಗ್ಗೆ ಮತ್ತು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಅಮಿಕಸ್‌ ಕ್ಯೂರಿಯನ್ನು ನೇಮಿಸುವುದು ಸೂಕ್ತ.

ಅನುವಾದ: ಗಣಪತಿ ಶರ್ಮಾ ಎಸ್‌.

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT