ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಗಿಂಗ್‌: 150 ವೈದ್ಯ ವಿದ್ಯಾರ್ಥಿಗಳ ತಲೆ ಬೋಳಿಸಿ ಮೆರವಣಿಗೆ

ತಲೆತಗ್ಗಿಸಿ ನಡೆಯಲು, ಹಿರಿಯರಿಗೆ ಸೆಲ್ಯೂಟ್‌ ಹೊಡೆಯಲು ತಾಕೀತು
Last Updated 21 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಲಖನೌ: ಸೈಫಾಯ್‌ಯಲ್ಲಿರುವ ಉತ್ತರಪ್ರದೇಶ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ವೈದ್ಯಕೀಯ ಶಿಕ್ಷಣಕ್ಕೆ (ಎಂಬಿಬಿಎಸ್‌) ದಾಖಲಾಗಿದ್ದ 150 ವಿದ್ಯಾರ್ಥಿಗಳ ರ್‍ಯಾಗಿಂಗ್‌ ನಡೆಸಿದ ಹಿರಿಯ ವಿದ್ಯಾರ್ಥಿಗಳು, ಒತ್ತಾಯಪೂರ್ವಕ ಅವರ ತಲೆ ಬೋಳಿಸಿರುವ ಪ್ರಕರಣ ನಡೆದಿದೆ.

ಅಷ್ಟೇ ಅಲ್ಲದೆ ಹಿರಿಯ ವಿದ್ಯಾರ್ಥಿಗಳ ಹಾಸ್ಟೆಲ್‌ ಮುಂದಿನಿಂದ ಹೋಗುವಾಗ ತಲೆ ತಗ್ಗಿಸಿಕೊಂಡು ಹೋಗಬೇಕು, ಹಿರಿಯರು ಕಾಣಿಸಿದಾಗ ಸಲಾಂ ಹೊಡೆಯಬೇಕು ಎಂದು ಹೊಸ ವಿದ್ಯಾರ್ಥಿಗಳಿಗೆ ಹಿರಿಯರು ತಾಕೀತು ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ಮೊದಲ ವರ್ಷದ ಎಲ್ಲಾ ವಿದ್ಯಾರ್ಥಿಗಳು ಮಂಗಳವಾರ ತಲೆ ಬೋಳಿಸಿಕೊಂಡು ತರಗತಿಗೆ ಹಾಜರಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆಗಾಗಿ ಕುಲಪತಿ ಡಾ. ರಾಜ್‌ಕುಮಾರ್‌ ಅವರು ಒಂದು ಸಮಿತಿಯನ್ನು ರಚಿಸಿದ್ದು ಎರಡು ದಿನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ‘ರ್‍ಯಾಗಿಂಗ್‌ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈವರೆಗೆ ಯಾವ ವಿದ್ಯಾರ್ಥಿಯೂ ದೂರು ನೀಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಇಂಥ ಚಟುವಟಿಕೆಗಳ ಮೇಲೆ ನಾವು ಕಟ್ಟುನಿಟ್ಟಿನ ನಿಗಾ ಇಟ್ಟಿರುತ್ತೇವೆ. ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ವಿ.ವಿ.ಯಲ್ಲಿ ಒಬ್ಬ ಪ್ರತ್ಯೇಕ ಡೀನ್‌ ಇದ್ದಾರೆ. ವಿದ್ಯಾರ್ಥಿಗಳ ದೂರುಗಳ ತನಿಖೆ ನಡೆಸಲು ರ್‍ಯಾಗಿಂಗ್‌ ವಿರೋಧಿ ಸಮಿತಿ ಇದೆ. ಅಷ್ಟೇ ಅಲ್ಲದೆ ವಿ.ವಿ.ಯಲ್ಲಿ ವಿಶೇಷ ದಳವೊಂದಿದ್ದು ಅದು ಎಲ್ಲಾ ವಿಭಾಗಗಳಿಗೂ ಭೇಟಿನೀಡಿ ಪರಿಶೀಲನೆ ನಡೆಸುತ್ತಿರುತ್ತದೆ. ವಿದ್ಯಾರ್ಥಿಗಳು ರ್‍ಯಾಗಿಂಗ್‌ ವಿರೋಧಿ ಸಮಿತಿಗೆ ಅಥವಾ ವಾರ್ಡನ್‌ಗೆ ದೂರು ನೀಡಬಹುದು’ ಎಂದು ಕುಲಪತಿ ಹೇಳಿದ್ದಾರೆ.

ಘಟನೆ ಕುರಿತಂತೆ ಕೆಲವು ವಿಡಿಯೊಗಳು ವೈರಲ್‌ ಆಗಿದ್ದು, ಒಂದರಲ್ಲಿ ವಿ.ವಿ.ಯ ಆವರಣದಲ್ಲಿ ಬಿಳಿ ಬಣ್ಣದ ಕೋಟ್‌ಗಳನ್ನು ಧರಿಸಿರುವ, ತಲೆ ಬೋಳಿಸಿದ ಕಿರಿಯ ವಿದ್ಯಾರ್ಥಿಗಳು ತಲೆ ತಗ್ಗಿಸಿಕೊಂಡು ಸಾಲಾಗಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತಿದೆ. ಇನ್ನೊಂದು ವಿಡಿಯೊದಲ್ಲಿ ಕಿರಿಯ ವಿದ್ಯಾರ್ಥಿಗಳ ತಂಡವು ಜಾಗಿಂಗ್‌ ಮಾಡುತ್ತಾ ಹಿರಿಯ ವಿದ್ಯಾರ್ಥಿಗಳಿಗೆ ಸಲಾಂ ಮಾಡುತ್ತಿರುವುದು ಕಾಣಿಸಿದೆ. ಇಂಥ ಒಂದು ವಿಡಿಯೊದಲ್ಲಿ ವಿ.ವಿ.ಯ ಭದ್ರತಾ ಸಿಬ್ಬಂದಿಯೂ ಕಾಣಿಸಿದ್ದು, ಅವರು ರ್‍ಯಾಗಿಂಗ್‌ ತಡೆಯುವ ಯಾವ ಪ್ರಯತ್ನವನ್ನೂ ಮಾಡಿಲ್ಲ.

ರ್‍ಯಾಗಿಂಗ್‌ ನಡೆದಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಕ್ಯಾಂಪಸ್‌ ಒಳಗೆ ಪ್ರವೇಶಿಸಿ ತನಿಖೆ ಆರಂಭಿಸಿದ್ದಾರೆ. ‘ನಾವು ಅನೇಕ ಹೊಸ ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದೇವೆ. ರ್‍ಯಾಗಿಂಗ್‌ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೂ ಯಾರೊಬ್ಬರೂ ಆ ಬಗ್ಗೆ ದೂರು ನೀಡಲಿಲ್ಲ. ದೂರು ನೀಡಲು ಅವರು ಹೆದರುತ್ತಿರಬಹುದು’ ಎಂದು ಸೈಫಾಯ್‌ಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯ ಸರ್ಕಾರವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಕಾಲೇಜಿಗೆ ಸೂಚನೆ ನೀಡಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಆದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT