ನವದೆಹಲಿ: ರಾಜಕಾರಣಿಗಳ ಬದಲು ಕ್ರೀಡಾಪಟುಗಳೇ ಕ್ರೀಡಾ ಸಂಸ್ಥೆಗಳ ಚುಕ್ಕಾಣಿ ಹಿಡಿಯಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
‘ಆಟಗಾರರನ್ನು ಬೆಂಬಲಿಸುವುದು ಮತ್ತು ರಾಜಕಾರಣಿಗಳ ಬದಲಿಗೆ ಕ್ರೀಡಾಪಟುಗಳನ್ನು ವಿವಿಧ ಕ್ರೀಡಾ ಸಂಸ್ಥೆಗಳ ಉಸ್ತುವಾರಿಗಳನ್ನಾಗಿ ನೇಮಕ ಮಾಡುವ ವ್ಯವಸ್ಥೆ ಜಾರಿಗೆ ಬರುವವರೆಗೆ ನಮ್ಮ ದೇಶವು ನಿಜವಾದ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ’ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಹರಿಯಾಣ ಸೇರಿದಂತೆ ದೇಶದಾದ್ಯಂತದ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ್ದೇನೆ. ‘ಹಣವಿಲ್ಲ... ಆಟವಿಲ್ಲ’ ಎಂಬುದು ವಾಸ್ತವ ಸಂಗತಿ. ಇದು ಬದಲಾಗಬೇಕಿದೆ ಎಂದು ರಾಹುಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹರಿಯಾಣದಲ್ಲಿ ಚುನಾವಣಾ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಆಟಗಾರರೊಂದಿಗಿನ ತಮ್ಮ ಸಂಭಾಷಣೆಯ ಏಳು ನಿಮಿಷಗಳ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
‘ನಮ್ಮ ದೇಶದಲ್ಲಿ ಹಲವರು ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ಪಾರದರ್ಶಕ, ನ್ಯಾಯಸಮ್ಮತವಾಗಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಮಾನವಾಗಿ ಪಡೆಯಬಹುದು ಎಂಬುದನ್ನು ಖಚಿತಪಡಿಸಬೇಕಿದೆ. ಆದರೆ, ಸದ್ಯದ ಪರಿಸ್ಥಿತಿಯ ಬಗ್ಗೆ ಆಟಗಾರರು ಸಂಪೂರ್ಣ ನಿರಾಶೆಗೊಂಡಿದ್ದಾರೆ. ಆಹಾರ, ವಿಶ್ರಾಂತಿ ಮತ್ತು ತರಬೇತಿಯಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹೋರಾಡುತ್ತಿದ್ದಾರೆ. ಇದರಿಂದಾಗಿ ಯುವಜನತೆ ಭರವಸೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಬ್ಯಾಟ್ ಹಿಡಿಯಲು ಸಾಧ್ಯವಿಲ್ಲ. ಆದರೆ, ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ’ ಎಂದು ಹೇಳುವ ಮೂಲಕ ಕ್ರಿಕೆಟ್, ಜುಡೊ ಸೇರಿದಂತೆ ಕ್ರೀಡಾ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಅಲಂಕರಿಸಿರುವ ರಾಜಕಾರಣಿಗಳ ವಿರುದ್ಧವೂ ರಾಹುಲ್ ಕಿಡಿಕಾರಿದ್ದಾರೆ.
'पैसा नहीं तो Game नहीं' - आज भारत में ज़्यादातर athletes की यही सच्चाई है।
— Rahul Gandhi (@RahulGandhi) October 2, 2024
हरियाणा और देश भर से आए खिलाड़ियों के एक समूह से मिलकर उनकी समस्याओं को सुना।
सिस्टम से पूरी तरह निराश, आहार, आराम और प्रशिक्षण जैसी बुनियादी सुविधाओं की कमी से जूझते ये युवा उम्मीद और आत्मविश्वास भी खो… pic.twitter.com/1LW2v7H6li
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.