ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾಗೆ ಪ್ರಧಾನಿಯಾಗಬೇಡ ಎಂದಿದ್ದು ರಾಹುಲ್‌! ನೀರಜಾ ಚೌಧರಿ ಪುಸ್ತಕದಲ್ಲಿ

ಪತ್ರಕರ್ತೆ ನೀರಜಾ ಚೌಧರಿ ಪುಸ್ತಕದಲ್ಲಿ 2004ರ ಘಟನೆ ಮೆಲುಕು
Published 31 ಜುಲೈ 2023, 16:29 IST
Last Updated 31 ಜುಲೈ 2023, 16:29 IST
ಅಕ್ಷರ ಗಾತ್ರ

ನವದೆಹಲಿ: ‘ನೀವು ಪ್ರಧಾನಿಯಾಗಲು ನಾನು ಬಿಡುವುದಿಲ್ಲ. ನನ್ನ ತಂದೆಯವರ ಹತ್ಯೆಯಾಯಿತು, ‘ದಾದಿ’ಯನ್ನೂ (ಇಂದಿರಾ ಗಾಂಧಿ) ಕೊಲೆ ಮಾಡಿದರು. ಇನ್ನು ಆರು ತಿಂಗಳಲ್ಲಿ ನಿಮ್ಮನ್ನೂ ಸಾಯಿಸುತ್ತಾರೆ’ 

– ಅಂದು 2004ರ ಮೇ 17. ಸೋನಿಯಾ ಗಾಂಧಿ ಅವರು ಮನಮೋಹನ ಸಿಂಗ್‌ ಮತ್ತಿತರರೊಂದಿಗೆ ತಮ್ಮ ನಿವಾಸದಲ್ಲಿ ಬಹುಮುಖ್ಯ ಸಭೆಯನ್ನು ನಡೆಸುತ್ತಿದ್ದರು. ದಾಪುಗಾಲಿಡುತ್ತ ಬಂದ ರಾಹುಲ್‌ ಗಾಂಧಿ ಎಲ್ಲರೆದುರೇ ಕೋಪ, ಪ್ರೀತಿ, ಆತಂಕ ಬೆರೆತ ಧ್ವನಿಯಲ್ಲಿ ಎಚ್ಚರಿಕೆ ನೀಡಿದ ಪರಿ ಇದಾಗಿತ್ತು.

ಇದಾದ ಕೆಲವೇ ಗಂಟೆಗಳಲ್ಲಿ  ಪ್ರಧಾನಿ ಹುದ್ದೆ ತ್ಯಜಿಸುವ  ನಿರ್ಧಾರವನ್ನು ಸೋನಿಯಾ  ಪ್ರಕಟಿಸಿದರು.

ಹಿರಿಯ ಪತ್ರಕರ್ತೆ ನೀರಜಾ ಚೌಧರಿ ಅವರು ಬರೆದಿರುವ ‘ಹೌ ಪ್ರೈಮ್‌ ಮಿನಿಸ್ಟರ್‌ ಡಿಸೈಡ್‌’ ಕೃತಿಯಲ್ಲಿ ಅಂದಿನ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. 

ಅಂದು ಸೋನಿಯಾಗಾಂಧಿ ಅವರು ಪ್ರಿಯಾಂಕಾ ಗಾಂಧಿ, ಮನಮೋಹನ್‌ ಸಿಂಗ್‌, ನಟವರ್‌ ಸಿಂಗ್‌ ಅವರೊಡನೆ ಸಭೆ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಆ ಕೋಣೆಗೆ ನುಗ್ಗಿದ ರಾಹುಲ್‌, ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯದಿದ್ದಲ್ಲಿ ತಾವು ಎಂಥದ್ದೇ ಅತಿರೇಕದ ನಿರ್ಧಾರ ಕೈಗೊಳ್ಳಲೂ ಸಿದ್ಧ ಎಂದು ಬೆದರಿಕೆಯ ಧ್ವನಿಯಲ್ಲಿಯೇ ಮಾತನಾಡಿದ್ದರು ಎಂದು ಅಂದಿನ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. 

ಸಭೆಗೆ ಸಿಂಗ್‌ ಬಂದಿದ್ದೂ ಅಚ್ಚರಿ:

ಆ ಮಹತ್ವದ ಸಭೆಯಲ್ಲಿ ಕುಟುಂಬಸ್ಥರು ಮತ್ತು ಸುಮನ್‌ ದುಬೆ ಹೊರತಾಗಿ ಮನಮೋಹನ್‌ ಸಿಂಗ್‌ ಭಾಗಿಯಾಗಿದ್ದು ಗಮನಾರ್ಹವಾಗಿತ್ತು. ಸಿಂಗ್‌ ಅವರನ್ನು ಅರಸುತ್ತಾ ನಟವರ್‌ ಸಿಂಗ್‌ ಅಚಾನಕ್‌ ಆಗಿ ಅಲ್ಲಿಗೆ ಬಂದಿದ್ದರು. ಸಭೆಯಲ್ಲಿ ಭಾಗಿಯಾದವರಿಗೆ ತಮ್ಮ ನಿರ್ಧಾರವನ್ನು ಸೋನಿಯಾ ತಿಳಿಸಬೇಕಿತ್ತು. ಪ್ರಧಾನಿ ಮಾಡಲೆಂದೇ  ಮನಮೋಹನ್ ಸಿಂಗ್ ಅವರನ್ನು ಸಭೆಗೆ ಆಹ್ವಾನಿಸಿದಂತಿತ್ತು ಎಂದು ಪುಸ್ತಕದಲ್ಲಿ ಚೌಧರಿ ಆ ರಾತ್ರಿಯ ಸಭೆ ಕುರಿತು ವಿವರಿಸಿದ್ದಾರೆ.

‘ಸೋನಿಯಾ ಗೊಂದಲದಲ್ಲಿ ಇದ್ದಂತೆ ಕಾಣುತ್ತಿತ್ತು. ರಾಹುಲ್‌ ಒಳಬಂದವರೇ ಉದ್ವಿಗ್ನ ಧ್ವನಿಯಲ್ಲಿ ಪ್ರಧಾನಿಯಾಗಬಾರದು ಎಂದು ಹೇಳಿದ್ದಲ್ಲದೆ,  ನಿರ್ಧಾರ ಕೈಗೊಳ್ಳಲು 24 ಗಂಟೆ ಕಾಲಾವಕಾಶ ನೀಡಿದರು. ಸೋನಿಯಾ ಕಣ್ಣಲ್ಲಿ ನೀರು ತುಂಬಿತ್ತು. ಸಿಂಗ್‌ ಮೌನದ ಮೊರೆ ಹೋಗಿದ್ದರು. ಸಾಮಾನ್ಯವಾಗಿ ಸೋನಿಯಾ ಅವರ ವಿಷಯಗಳ ಬಗ್ಗೆ ರಾಹುಲ್‌ ನಿರ್ಧಾರ ಕೈಗೊಳ್ಳುತ್ತಾರೆ. ತಾಯಿಯಾಗಿ, ರಾಹುಲ್‌ ಮಾತನ್ನು ಮೀರುವುದು ಅವರಿಗೆ ಅಸಾಧ್ಯ’  ಎಂದು ನಟವರ್‌ ತಿಳಿಸಿದ್ದರು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.

ಬಳಿಕ, ಮಕ್ಕಳಿಂದಾಗಿ ಸೋನಿಯಾ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದಿದ್ದಾರೆ ಎಂದು ವಿ.ಪಿ.ಸಿಂಗ್‌ ಮತ್ತು ಸೋಮನಾಥ ಚಟರ್ಜಿ ಹೇಳಿದ್ದರು.

ಸೋನಿಯಾ, ಮೈತ್ರಿಕೂಟಕ್ಕೆ ತಮ್ಮ ನಿರ್ಧಾರ ತಿಳಿಸಿದಾಗ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌, ‘ಮುಂಚೆ ಏಕೆ ಹೇಳಿರಲಿಲ್ಲ? ಈ ಬಗ್ಗೆ ಟಿ.ವಿ ವರದಿ ಮೂಲಕ ತಿಳಿದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾರ್ಕ್ಸ್‌ವಾದಿ ಹರ್‌ಕಿಶನ್‌ ಸಿಂಗ್‌ ಸುರ್ಜಿತ್ ಸೇರಿ ಅನೇಕರು ಸೋನಿಯಾ ಮನವೊಲಿಸಲು ಯತ್ನಿಸಿದ್ದರು.  ಆದರೆ ಅವರೊಳಗಿನ ‘ತಾಯ್ತನ’ ರಾಜಕಾರಣಿಗಿಂತ ಪ್ರಬಲವಾಗಿತ್ತು ಎಂದು ಪುಸ್ತಕದಲ್ಲಿ ಚೌಧರಿ ವಿವರಿಸಿದ್ದಾರೆ.

ಸೋನಿಯಾ ಹೆಸರು ಶಿಫಾರಸು:

ಇದಕ್ಕೂ ಮುನ್ನಾ ದಿನ ಸೋನಿಯಾ, ಚುನಾವಣಾ ಪೂರ್ವ ಮೈತ್ರಿ ಕೂಟ ಮತ್ತು ಎಡ ಪಕ್ಷಗಳ ನಾಯಕರಿಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಪ್ರಧಾನಿ ಹುದ್ದೆಗೆ ಸೋನಿಯಾ  ಹೆಸರನ್ನು ಶಿಫಾರಸು ಮಾಡಲಾಗಿತ್ತು. 

ಸಾಮಾನ್ಯವಾಗಿ ಜನರೊಂದಿಗೆ ಬೆರೆಯುವ ಗುಣವಿರುವ ಸೋನಿಯಾ, ಅಂದು ಮಾತ್ರ ಒಂದು ಮೂಲೆಯಲ್ಲಿ ಒಬ್ಬರೇ ಕುಳಿತಿದ್ದರು. ಅಚ್ಚರಿ ಎಂಬಂತೆ ಬಹುಶಃ  ವಿ. ಪಿ. ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದರು (ಪತಿ ರಾಜೀವ್ ಗಾಂಧಿ ಅವರಿಗೆ ರಾಜಕೀಯವಾಗಿ ಅತಿ ಹೆಚ್ಚು ನೋವುಂಟು ಮಾಡಿದವರು ವಿ.ಪಿ ಸಿಂಗ್‌).  ಅದಕ್ಕೂ ಮುನ್ನ ಸೋನಿಯಾ ಪ್ರಧಾನಿಯಾಗುವುದನ್ನು ಬೆಂಬಲಿಸುವಂತೆ ಸಿಂಗ್‌ ಅವರನ್ನು ಅಹ್ಮದ್ ಪಟೇಲ್ ಕೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT