ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಮೇಲೆ ಸಿಬಿಐ ದಾಳಿ: ಕೇಜ್ರಿವಾಲ್ ಕಿಡಿ

Last Updated 26 ಆಗಸ್ಟ್ 2022, 13:15 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್‌,ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

'ಗುಜರಾತ್‌ನಲ್ಲಿ ಬಿಜೆಪಿಯ ಕೋಟೆ ಚೂರುಚೂರಾಗುತ್ತಿದೆ. ಆ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಮ್ಮ ಮೇಲೆ ದಾಳಿ ನಡೆಸುತ್ತಿದೆ' ಎಂದು ಕುಟುಕಿದ್ದಾರೆ.

ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿದಾಖಲೆಯಿಲ್ಲದ ಒಂದೇಒಂದು ರೂಪಾಯಿ ಸಿಬಿಐಗೆ ಸಿಕ್ಕಿಲ್ಲ ಎಂದಿರುವ ದೆಹಲಿ ಮುಖ್ಯಮಂತ್ರಿ, 'ನಮ್ಮ ಸರ್ಕಾರವನ್ನು ಉರುಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಅವು ಮಣಿಪುರ, ಗೋವಾ, ಮಧ್ಯ ಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಹಾರಾಷ್ಟ್ರದಲ್ಲಿ ಸರ್ಕಾರಗಳನ್ನು ಉರುಳಿಸಿವೆ. ಇದೀಗ ಆ ಸರಣಿ ಹಂತಕ ನಗರದಲ್ಲಿ (ದೆಹಲಿಯಲ್ಲಿ) ಅಲೆಯುತ್ತಿದ್ದಾನೆ' ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಜಿಎಸ್‌ಟಿ ಹಾಗೂ ಇಂಧನ ದರ ಏರಿಕೆಯಿಂದ ಸಂಗ್ರಹಿಸಿದ ಹಣವನ್ನು ಬಿಜೆಪಿಯು ಶಾಸಕರ ಖರೀದಿಗೆ ಬಳಸುತ್ತಿದೆ ಎಂದು ದೂರಿರುವ ಕೇಜ್ರಿವಾಲ್‌, ದೇಶದಾದ್ಯಂತ ಇದುವರೆಗೆ 277 ಶಾಸಕರನ್ನು ಖರೀದಿ ಮಾಡಿದೆ ಎಂದು ಗುಡುಗಿದ್ದಾರೆ.

ಮುಂದುವರಿದು, ದೆಹಲಿ ಲೆಫ್ಟಿನಂಟ್‌ ಗವರ್ನರ್‌ ಅವರು ನಮ್ಮ ಶಾಲೆಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆ ಮೂಲಕ ಅವರು (ಬಿಜೆಪಿಯವರು) ಶಾಲೆ ಮತ್ತು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು ನಿಲ್ಲಿಸಲು ಬಯಸುತ್ತಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯು ದೆಹಲಿ ಸರ್ಕಾರವನ್ನು ಕೆಡವಲು 'ಆಪರೇಷನ್‌ ಕಮಲ' ನಡೆಸುತ್ತಿದೆ. ಬಿಜೆಪಿ ಸೇರಿದರೆ ತಲಾ ₹ 20 ಕೋಟಿ ನೀಡುವುದಾಗಿ ನಮ್ಮ 40 ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಎಎಪಿ ಇತ್ತೀಚೆಗೆ ಆರೋಪಿಸಿತ್ತು. ಈ ಬೆಳವಣಿಗೆಗಳ ನಡುವೆ, ತಮ್ಮ ಪಕ್ಷದಲ್ಲಿ ಭಿನ್ನಮತವಿಲ್ಲ ಎಂಬುದನ್ನು ಸಾಬೀತು ಮಾಡಲು ಆಗಸ್ಟ್‌ 29 (ಸೋಮವಾರ) ವಿಶ್ವಾಸಮತ ಯಾಚಿಸಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT