ಮುಂಬೈ: ಮುಂಬೈನಲ್ಲಿ ಬುಧವಾರ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಈ ಮೊದಲು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ, ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಸಂಜೆ 5.30ಕ್ಕೆ ಹೊಸ ಪ್ರಕಟಣೆ ಹೊರಡಿಸಿದೆ. ಗುರುವಾರ ಬೆಳಿಗ್ಗೆ 8.30ರವರೆಗೂ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಳೆಯಿಂದಾಗಿ ಮುಂಬೈಗೆ ಬರಬೇಕಿದ್ದ ಕೆಲ ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ. ರಸ್ತೆಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಮುಂಬೈ ಲೋಕಲ್ ರೈಲುಗಳ ವೇಳಾಪಟ್ಟಿಯೂ ಬದಲಾಗಿದೆ ಎಂದು ವರದಿಯಾಗಿದೆ.
ಮುಂಬೈ ಮಾತ್ರವಲ್ಲದೇ, ಸುತ್ತಮುತ್ತಲಿನ ಪ್ರದೇಶಗಳಲ್ಲೂ ಬುಧವಾರ ಮಧ್ಯಾಹ್ನದಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಿರುಗಾಳಿ, ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿದೆ. ಠಾಣೆ, ರಾಯಗಡ ಹಾಗೂ ರತ್ನಗಿರಿ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಚಂಡಮಾರುತದ ಪರಿಚಲನೆಯು ಉತ್ತರ ಕೊಂಕಣ ಭಾಗದಿಂದ ಬಾಂಗ್ಲಾದೇಶದ ದಕ್ಷಿಣ ಭಾಗದತ್ತ ಸಾಗುತ್ತಿದ್ದು, ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಂಕಣದ ಪೂರ್ಣ ಭಾಗ ಹಾಗೂ ಗೋವಾವನ್ನು ಈ ವಾರದೊಳಗೆ ಆವರಿಸಿಕೊಳ್ಳಲಿದೆ. ದಕ್ಷಿಣದತ್ತ ಮುಂದೆ ಸಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ತಿಳಿಸಿದ್ದಾರೆ.