ಸೋನಮ್ ಹಾಗೂ ರಾಜಾ ರಘುವಂಶಿ
ಶಿಲ್ಲಾಂಗ್: ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಅವರ ಹತ್ಯೆಗೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡವು (ಎಸ್‌ಐಟಿ) ಭಾನುವಾರ ಮಧ್ಯಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಬಲ್ಲಾ ಅಹಿರ್ವರ್‌ನನ್ನು ಬಂಧಿಸಿದೆ.
ರಾಜಾ ರಘುವಂಶಿ ಅವರ ಪತ್ನಿ ಸೋನಮ್ ಅವರ ಬ್ಯಾಗ್ ಅನ್ನು ಬಚ್ಚಿಟ್ಟಿದ್ದಕ್ಕಾಗಿ ಬಲ್ಲಾ ಅಹಿರ್ವರ್‌ನನ್ನು ಬಂಧಿಸಲಾಗಿದೆ. ರಘುವಂಶಿ ಹತ್ಯೆ ಬಳಿಕ ಸೋನಮ್ ಬ್ಯಾಗ್ ಅನ್ನು ಅಹಿರ್ವರ್, ಸಿಲೋಮ್ ಜೇಮ್ಸ್ ಎಂಬುವರಿಗೆ ಸೇರಿದ ಇಂದೋರ್‌ನ ಫ್ಲಾಟ್‌ವೊಂದರಲ್ಲಿ ಬಚ್ಚಿಟ್ಟಿದ್ದ ಎಂದು ಹೇಳಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿಸಲ್ಪಟ ಆರೋಪಿಗಳ ಸಂಖ್ಯೆ ಏಳಕ್ಕೇರಿದೆ.
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಭೋನ್ರಾಸಾ ಟೋಲ್‌ಗೇಟ್ ಬಳಿ ಶನಿವಾರ ರಾತ್ರಿ ಭೋಪಾಲ್‌ಗೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಬಲ್ಲಾ ಅಹಿರ್ವರ್‌ನನ್ನು ಬಂಧಿಸಲಾಗಿದೆ. ಸಿಲೋಮ್ ಇಂದೋರ್‌ನ ಹೀರಾಬಾಗ್ ಕಾಲೋನಿಯಲ್ಲಿ ಫ್ಲಾಟ್‌ವೊಂದನ್ನು ಗುತ್ತಿಗೆ ಪಡೆದಿದ್ದರು. ಇದೇ ಫ್ಲಾಟ್‌ನಲ್ಲಿ ಸೋನಮ್ ತಂಗಿದ್ದರು ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಎಸ್‌ಪಿ ವಿವೇಕ್ ಸೈಮ್ ತಿಳಿಸಿದ್ದಾರೆ.
ಸಿಲೋಮ್ ಜೇಮ್ಸ್ ಮತ್ತು ಬಲ್ಲಾ ಅಹಿರ್ವರ್ ಇಬ್ಬರನ್ನೂ ಇಂದೋರ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆಗಾಗಿ ಶಿಲ್ಲಾಂಗ್‌ಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಾ ರಘುವಂಶಿ–ಸೋನಮ್ ಮೇ 1ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ಮೇಘಾಲಯಕ್ಕೆ ತೆರಳಿದ್ದಾಗ ಮೇ 23ರಿಂದ ದಂಪತಿ ನಾಪತ್ತೆಯಾಗಿದ್ದರು. ಜೂನ್ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್ ಸಮೀಪದ ಜಲಪಾತದ ಕಮರಿಯಲ್ಲಿ ಸಿಕ್ಕಿತ್ತು.
ರಘುವಂಶಿ ಅವರ ಹತ್ಯೆ ನಡೆದಿದ್ದು, ಹತ್ಯೆಗೆ ಸಂಚು ನಡೆಸಿದ ಆರೋಪದ ಮೇಲೆ ಸೋನಮ್, ಆಕೆಯ ಪ್ರಿಯಕರ ರಾಜ್, ವಿಶಾಲ್, ಆಕಾಶ್, ಆನಂದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.