ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್‌ಕೋಟ್‌ ಗೇಮ್‌ಜೋನ್‌ ಅಗ್ನಿದುರಂತ: ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಕೆ

Published 21 ಜೂನ್ 2024, 15:01 IST
Last Updated 21 ಜೂನ್ 2024, 15:01 IST
ಅಕ್ಷರ ಗಾತ್ರ

ಅಹಮದಾಬಾದ್‌: 27 ಜನರ ಜೀವ ಬಲಿತೆಗೆದುಕೊಂಡ ರಾಜ್‌ಕೋಟ್‌ನ ಟಿಆರ್‌ಪಿ ಗೇಮ್‌ಜೋನ್‌ ಅಗ್ನಿ ದುರಂತದ ತನಿಖೆಗೆ ಗುಜರಾತ್‌ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನ್ನ ಮಧ್ಯಂತರ ವರದಿಯನ್ನು ಶುಕ್ರವಾರ ಗೃಹಖಾತೆ ರಾಜ್ಯ ಸಚಿವ ಹರ್ಷ್‌ ಸಾಂಘ್ವಿ ಅವರಿಗೆ ಸಲ್ಲಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಸುಭಾಷ್‌ ತ್ರಿವೇದಿ ಅವರ ನೇತೃತ್ವದ ಎಸ್‌ಐಟಿ ಸಲ್ಲಿಸಿರುವ ಈ ಮಧ್ಯಂತರ ವರದಿಯು 100 ಪುಟಗಳ ವಿವರಗಳನ್ನು ಒಳಗೊಂಡಿದೆ. 

‘ಸರ್ಕಾರಕ್ಕೆ ನಾವು ಇಂದು ಮಧ್ಯಂತರ ವರದಿ’ ಸಲ್ಲಿಸಿದ್ದೇವೆ ಎಂದು ತಿಳಿಸಿದ ತ್ರಿವೇದಿ ಅವರು, ಗುಜರಾತ್ ಪೊಲೀಸ್ ಕಾಯ್ದೆಯ (ಜಿಪಿ ಆ್ಯಕ್ಟ್‌) ಸೆಕ್ಷನ್ 33ಕ್ಕೆ ಕೆಲವು ಬದಲಾವಣೆಗಳನ್ನು ತರಲು ಸೂಚಿಸಲಾಗಿದೆ. ಇದು ಅಂತಹ ಗೇಮ್‌ ಜೋನ್‌ಗಳಿಗೆ ವಿವಿಧ ಪರವಾನಗಿಗಳನ್ನು ನೀಡಲು ಸ್ಥಳೀಯ ಪೊಲೀಸರಿಗೆ ಅಧಿಕಾರ ಕಲ್ಪಿಸುತ್ತದೆ ಎಂದರು.

‘ಪೊಲೀಸ್, ಅಗ್ನಿಶಾಮಕ ಇಲಾಖೆ, ಟೌನ್ ಪ್ಲಾನಿಂಗ್, ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಗಳ ಲೋಪಗಳನ್ನು ನಾವು ಪತ್ತೆ ಮಾಡಿದ್ದೇವೆ.  ನಾವು ಅವರ ನಿರ್ಲಕ್ಷ್ಯದ ಬಗ್ಗೆ ಸೂಕ್ತ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ವರದಿಯ ಮೂಲಕ ಸರ್ಕಾರದ ಗಮನವನ್ನು ಸೆಳೆದಿದ್ದೇವೆ’ ಎಂದು ತ್ರಿವೇದಿ ಹೇಳಿದರು.

‘ನಾವು ತಪ್ಪಿತಸ್ಥರನ್ನು ಬಿಡುವುದಿಲ್ಲ. ಎಸ್‌ಐಟಿ ತನಿಖೆ ಇನ್ನೂ ಮುಂದುವರಿದಿದೆ. ಈ ದುರಂತದಲ್ಲಿ ಹಿರಿಯ ಪೊಲೀಸರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತನಿಖೆ ಮುಗಿಸುವ ಮೊದಲು ಎಸ್‌ಐಟಿಯು ಅಗತ್ಯವಿದ್ದಲ್ಲಿ ಈ ದುರಂತಕ್ಕೆ ಸಂಬಂಧಿಸಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದೆ ಎಂದು ತ್ರಿವೇದಿ ಹೇಳಿದ್ದಾರೆ. 

ಟಿಆರ್‌ಪಿ ಗೇಮ್ ಜೋನ್‌ ಅಗ್ನಿ ದುರಂತದ ಕುರಿತು ಗುಜರಾತ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಜೂನ್ 13ರಂದು ವಿಚಾರಣೆಗೆ ಸ್ವೀಕರಿಸಿದಾಗ, ಹಿರಿಯ ವಕೀಲ ಅಮಿತ್ ಪಾಂಚಾಲ್ ಅವರು, ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ಫೋಟೊಗಳನ್ನು ಉಲ್ಲೇಖಿಸಿ, ಟಿಆರ್‌ಪಿ ಗೇಮ್ ಜೋನ್‌ ಉದ್ಘಾಟನಾ ಸಮಾರಂಭದಲ್ಲಿ ರಾಜ್‌ಕೋಟ್‌ನ ಅಂದಿನ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿ, ರಾಜ್‌ಕೋಟ್‌ನ ಮುನ್ಸಿಪಲ್ ಕಮಿಷನರ್ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಭಾಗವಹಿಸಿದ್ದರು ಎಂದು ಪೀಠಕ್ಕೆ ತಿಳಿಸಿದ್ದರು.    

ಆಗ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಅವರು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಟಿಆರ್‌ಪಿ ಗೇಮ್ ಜೋನ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಈ ಹಿರಿಯ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು.

ಈ ದುರಂತದ ನಂತರ, ರಾಜ್ಯ ಸರ್ಕಾರವು ಅಗ್ನಿಅವಘಡದ ಕಾರಣಗಳು, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಅಂತಹ ಘಟನೆಗಳು ನಡೆಯದಂತೆ ತಡೆಯಲು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಸೂಚಿಸಲು ಸುಭಾಷ್‌ ತ್ರಿವೇದಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿತ್ತು. ಜೂನ್ 20ರೊಳಗೆ ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸಲಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಗುಜರಾತ್ ಹೈಕೋರ್ಟ್‌ಗೆ ತಿಳಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಪೊಲೀಸರು ಟಿಆರ್‌ಪಿ ಗೇಮ್‌ಜೋನ್‌ನ ಐವರು ಮಾಲೀಕರು ಮತ್ತು ಆರು ಮಂದಿ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT