ನವದೆಹಲಿ: ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳ ತೀವ್ರ ವಿರೋಧದ ನಂತರವು, ವಿವಾದಾತ್ಮಕ ‘ದೆಹಲಿ ಸೇವೆಗಳ ನಿಯಂತ್ರಣ ಮಸೂದೆ’ಯು ರಾಜ್ಯಸಭೆಯಲ್ಲಿ 131–102 ಮತಗಳಿಂದ ಅಂಗೀಕಾರಗೊಂಡಿತು.
ಮಸೂದೆಯನ್ನು ಈಗಾಗಲೇ ಲೋಕಸಭೆಯು ಅಂಗೀಕರಿಸಿದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾಯ್ದೆಯಾಗಿ ಜಾರಿಗೆ ಬರಲಿದೆ. ಈಗಾಗಲೇ ಹೊರಡಿಸಿರುವ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪವನ್ನು ನೀಡಲು ಸರ್ಕಾರ ಮಸೂದೆಯನ್ನು ಮಂಡಿಸಿತ್ತು.
ವಿಸ್ತೃತ, ಬಿಸಿ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆಯ ಪರವಾಗಿ 131 ಮತ್ತು ವಿರುದ್ಧವಾಗಿ 102 ಸದಸ್ಯರು ಮತ ಚಲಾಯಿಸಿದರು. ಮಸೂದೆಯು ಅಂಗೀಕಾರಗೊಂಡಿತು.
ಇದಕ್ಕೂ ಮೊದಲು ಮಸೂದೆ ಮಂಡಿಸಿದ ಗೃಹ ಸಚಿವ ಅಮಿತ್ ಶಾ ಅವರು, ‘ರಾಷ್ಟ್ರ ರಾಜಧಾನಿಯಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪರಿಣಾಮಕಾರಿಯಾದ ಆಡಳಿತ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ’ ಎಂದು ಸಮರ್ಥಿಸಿಕೊಂಡರು.
ಟಿಎಂಸಿಯ ಸುಕೇಂದು ಶೇಖರ್ ರಾಯ್, ಡಿಎಂಕೆಯ ತಿರುಚಿ ಶಿವ ಅವರು ಮಸೂದೆ ವಿರೋಧಿಸಿ ಮಾತನಾಡಿದರು. ಬಿಜೆಡಿಯ ಸಸ್ಮಿತ್ ಪಾತ್ರಾ ಮತ್ತು
ವೈಎಸ್‌ಆರ್‌ಸಿಪಿಯ ವಿ.ವಿಜಯಸಾಯಿ ರೆಡ್ಡಿ ಅವರು ಮಸೂದೆಯನ್ನು ಬೆಂಬಲಿಸಿ ಮಾತನಾಡಿದರು.
ಇದಕ್ಕೂ ಮುನ್ನ ಚರ್ಚೆಯಲ್ಲಿ ಭಾಗವಹಿಸಿದ್ದ ಎಎಪಿ ಸದಸ್ಯ ರಾಘವ್ ಛಡ್ಡಾ ಅವರು, ‘ಇದು ‘ರಾಜಕೀಯ ವಂಚನೆ’, ‘ಸಾಂವಿಧಾನಿಕ ಅಪರಾಧ’ವಾಗಿದೆ. ಮಸೂದೆ ಚುನಾಯಿತ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವ ಉದ್ದೇಶ ಹೊಂದಿದೆ’ ಎಂದು ಟೀಕಿಸಿದರು.
‘ನಾನು ದೆಹಲಿಯ ಎರಡು ಕೋಟಿ ಜನರ ಪ್ರತಿನಿಧಿಯಾಗಿ ಅಲ್ಲ, ದೇಶದ 135 ಕೋಟಿ ಜನರನ್ನು ಪ್ರತಿನಿಧಿಸಿ ಈ ಮಾತು ಹೇಳುತ್ತಿದ್ದೇನೆ. ಎಎಪಿ ಈ ಸದನದಲ್ಲಿ ನ್ಯಾಯವನ್ನು ಬಯಸುತ್ತಿದೆ’ ಎಂದರು.
‘ಬಿಜೆಪಿ ಕಳೆದ 25 ವರ್ಷಗಳಲ್ಲಿ ದೆಹಲಿಯಲ್ಲಿ ಆರು ಚುನಾವಣೆಗಳಲ್ಲಿ ಸೋತಿದೆ. ಮುಂದಿನ 25 ವರ್ಷವು ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿಗೆ ತಿಳಿಸಿದೆ. ಹೀಗಾಗಿ, ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ‘ಸುಪ್ರೀಂ’ ಆದೇಶಕ್ಕೆ ವಿರುದ್ಧವಾಗಿ ಎಂಟು ದಿನದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಬಿಜೆಪಿಗೆ ಇದ್ದ ಬಲವಾದ ಕಾರಣವಾದರೂ ಏನು?’ ಎಂದು ಪ್ರಶ್ನಿಸಿದರು.
ಎಲ್ಲ ಪ್ರತಿಪಕ್ಷಗಳು ವಿರೋಧಿಸಲಿ –ಸಿಂಘ್ವಿ: ‘ದೆಹಲಿ ಸೇವಾ ನಿಯಂತ್ರಣ ಕುರಿತ ಮಸೂದೆಯ ಅಸಾಂವಿಧಾನಿಕವಾದುದು. ಮುಂದೊಂದು ದಿನ ಈ ಒಕ್ಕೂಟ ವಿರೋಧಿ ಧೋರಣೆಯು ನಿಮ್ಮ ಕದವನ್ನೂ ತಟ್ಟಬಹುದು. ಹೀಗಾಗಿ, ಎಲ್ಲ ವಿರೋಧಪಕ್ಷಗಳು ಈಗ ಮಸೂದೆಯನ್ನು ವಿರೋಧಿಸಬೇಕಾಗಿದೆ’ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಮನವಿ ಮಾಡಿದರು.
‘ದುರುದ್ದೇಶದಿಂದ ಕೇಂದ್ರ ಸರ್ಕಾರವು ಈ ಮಸೂದೆ ತಂದಿದೆ. ಇದು, ಸುಪ್ರೀಂ ಕೋರ್ಟ್ ನ್ಯಾಯಪೀಠದ ಎರಡು ಆದೇಶಗಳಿಗೆ ಇದು ವಿರುದ್ಧವಾಗಿದೆ’ ಎಂದು ರಾಜ್ಯಸಭೆಯಲ್ಲಿ ಮಸೂದೆಯ ಮೇಲೆ ಚರ್ಚೆಯನ್ನು ಆರಂಭಿಸಿ ಹೇಳಿದರು.
ಕೇಂದ್ರೀಯ ವಿದ್ಯಾಲಯ– ಸಂಸದರ ಕೋಟಾ ಜಾರಿ ಪ್ರಸ್ತಾವ ಇಲ್ಲ: ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದ ‘ಸಂಸದರ ವಿವೇಚನಾ ಕೋಟಾ’ವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.