ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ನಂ.2 ಅಸ್ತಾನಾಗೆ ಸೆರೆ ಭೀತಿ

ಅಧಿಕಾರಿಗಳ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್‌
Last Updated 11 ಜನವರಿ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ಅಧಿಕಾರಿಗಳ ಜಗಳದಿಂದ ಸುದ್ದಿಯಲ್ಲಿರುವ ಸಿಬಿಐ ಶುಕ್ರವಾರ ಮತ್ತಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು.

ಸಿಬಿಐ ನಿರ್ದೇಶಕ ಹುದ್ದೆಯಿಂದ ಎತ್ತಂಗಡಿಯಾಗಿದ್ದ ಅಲೋಕ್‌ ವರ್ಮಾ ಶುಕ್ರವಾರ ಕೆಲಸಕ್ಕೆ ಹಠಾತ್‌ ರಾಜೀನಾಮೆ ಸಲ್ಲಿಸಿದರು. ಮತ್ತೊಂದೆಡೆ, ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರಿಗೆ ಬಂಧನ ಭೀತಿ ಎದುರಾಗಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಅಸ್ತಾನಾ, ಸಿಬಿಐ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಮತ್ತು ಶಂಕಿತ ಮಧ್ಯವರ್ತಿ ಮನೋಜ್‌ ಪ್ರಸಾದ್‌ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು ಪಡಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.

ಅಸ್ತಾನಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಕೂಡ ರದ್ದುಗೊಳಿಸಿದೆ. ಇದರಿಂದ ಅಸ್ತಾನಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹತ್ತು ವಾರಗಳ ಒಳಗಾಗಿ ತನಿಖೆಪೂರ್ಣಗೊಳಿಸುವಂತೆ ಹೈಕೋರ್ಟ್, ತಾಕೀತು ಮಾಡಿದೆ. ಎಫ್‌ಐಆರ್ ಕೈಬಿಡುವಂತೆ ಆಸ್ತಾನಾ ಹೈಕೋರ್ಟ್ ಮೊರೆ ಹೋಗಿದ್ದರು.

ವರ್ಮಾ ರಾಜೀನಾಮೆ:ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯು ಅಲೋಕ್‌ ಅವರನ್ನು ನಿರ್ದೇಶಕ ಹುದ್ದೆಯಿಂದ ಎತ್ತಂಗಡಿ ಮಾಡಿದ ಮರುದಿನವೇ ರಾಜೀನಾಮೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದ ಮೂಲಕ 77 ದಿನಗಳ ಬಳಿಕ ಮಂಗಳವಾರವಷ್ಟೇ ಸಿಬಿಐ ನಿರ್ದೇಶಕ ಹುದ್ದೆಗೆ ಮರಳಿದ್ದ ಅವರನ್ನು ಪ್ರಧಾನಿ ನೇತೃತ್ವದ ಸಮಿತಿ ವರ್ಗಾವಣೆ ಮಾಡಿತ್ತು.

ವರ್ಮಾ ಜುಲೈ 31, 2017ರಲ್ಲಿಯೇ ನಿವೃತ್ತರಾಗಿದ್ದರು. ಸಿಬಿಐ ನಿರ್ದೇಶಕರಾಗಿ ನೇಮಕವಾದ ಕಾರಣ ಸೇವೆಯಲ್ಲಿ ಮುಂದುವರಿದಿದ್ದರು. ಸಿಬಿಐ ನಿರ್ದೇಶಕರಿಗೆ ಕನಿಷ್ಠ ಎರಡು ವರ್ಷ ಸೇವಾವಧಿ ಇರಬೇಕು ಎಂಬ ನಿಯಮ ಇದೆ. ಸಿಬಿಐ ನಿರ್ದೇಶಕರಾಗಿ ಅವರ ಸೇವಾವಧಿ 2019ರ ಜನವರಿ 31ರ ವರೆಗೆ ಇತ್ತು.

ಸಂಸ್ಥೆಯ ಘನತೆ ಎತ್ತಿ ಹಿಡಿದಿದ್ದೇನೆ
ವೃತ್ತಿ ಮತ್ಸರ ಹೊಂದಿದ್ದ ವ್ಯಕ್ತಿಯೊಬ್ಬ ಮಾಡಿದ ‘ಸುಳ್ಳು, ನಿರಾಧಾರ ಮತ್ತು ಕ್ಷುಲ್ಲಕ’ ಆರೋಪಗಳ ಮೇಲೆ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಲೋಕ್ ವರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಎದುರು ಹಾಜರಾಗಲು ತಮಗೆ ಅವಕಾಶ ನಿರಾಕರಿಸುವ ಮೂಲಕ ಸಹಜ ನ್ಯಾಯವನ್ನು ಹತ್ತಿಕ್ಕಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಸಿಬಿಐ ನಿರ್ದೇಶಕ ಸ್ಥಾನದಿಂದ ತಮ್ಮನ್ನು ವರ್ಗ ಮಾಡಲು ಇಡೀ ಪ್ರಕ್ರಿಯೆಯನ್ನು ತಿರುವು–ಮುರುವುಗೊಳಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.

‘ಸಿಬಿಐ ಒಂದು ಸ್ವಾಯತ್ತ ಸಂಸ್ಥೆ. ಅದರ ಸ್ವಾತಂತ್ರ್ಯ ರಕ್ಷಿಸಬೇಕು. ಮುಕ್ತವಾಗಿ ಕೆಲಸ ನಿರ್ವಹಿಸಲು ಬಿಡಬೇಕು. ಬಾಹ್ಯ ಶಕ್ತಿಗಳು ಮತ್ತು ಒತ್ತಡಗಳ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡಬಾರದು’ ಎಂದು ಪ್ರತಿಕ್ರಿಯಿಸಿದ್ದಾರೆ.

***

ವರ್ಗಾವಣೆ ರದ್ದು
ಗುರುವಾರ ರಾತ್ರಿ ಸಿಬಿಐ ಮಧ್ಯಂತರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಾಗೇಶ್ವರ ರಾವ್‌ ಅವರು ವರ್ಮಾ ತೆಗೆದುಕೊಂಡಿದ್ದ ಎಲ್ಲ ನಿರ್ಧಾರಗಳನ್ನು ರದ್ದುಪಡಿಸಿದ್ದಾರೆ.

ಸಿಬಿಐ ಪಂಜರದ ಗಿಳಿ
ಪಂಜರದಿಂದ ಗಿಳಿಯನ್ನು ಹೊರಗೆ ಹಾರಲು ಬಿಟ್ಟರೆ ತಮ್ಮ ಗುಟ್ಟನ್ನು ರಟ್ಟು ಮಾಡಬಹುದೆಂಬ ಭೀತಿ ಇದೆ. ಆದರೂ, ಪಂಜರದ ಗಿಳಿ ಬಹಳ ದೂರ ಹಾರಲಾರದು ಎಂಬುದನ್ನು ಖಚಿತ ಮಾಡಿಕೊಂಡ ನಂತರ ಆಯ್ಕೆ ಸಮಿತಿಗೆ ಈ ನಿರ್ಧಾರ ಕೈಗೊಂಡಿದೆ
-ಕಪಿಲ್‌ ಸಿಬಲ್‌,ಕಾಂಗ್ರೆಸ್ ಮುಖಂಡ

*
ರಾಜಕೀಯಕ್ಕಾಗಿ ದುರ್ಬಳಕೆ
ರಾಜಕೀಯ ಲಾಭಕ್ಕಾಗಿ ಸಿಬಿಐ, ಆರ್‌ಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಒಬ್ಬ ವ್ಯಕ್ತಿಯ ಮಾತು ಮಾತ್ರ ನಡೆಯುತ್ತಿದೆ.
-ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

*
ಸಿಬಿಐ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಮೆಟ್ಟಿ ನಿಂತು ಸಂಸ್ಥೆಯ ಘನತೆ ಎತ್ತಿ ಹಿಡಿಯುವ ಕೆಲಸ ಮಾಡಿರುವ ತೃಪ್ತಿ ಇದೆ
ಅಲೋಕ್‌ ವರ್ಮಾ,ಸಿಬಿಐ ಮಾಜಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT