ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Uttarkashi Tunnel Rescue: ನೆರವಿಗೆ ಬಂದ ರ್‍ಯಾಟ್‌–ಹೋಲ್ ಮೈನಿಂಗ್ ತಂತ್ರ

Published 28 ನವೆಂಬರ್ 2023, 13:48 IST
Last Updated 28 ನವೆಂಬರ್ 2023, 13:48 IST
ಅಕ್ಷರ ಗಾತ್ರ

ಉತ್ತರಕಾಶಿ/ ನವದೆಹಲಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರ ರಕ್ಷಣೆಗೆ ಅಂತಿಮ ಹಂತದಲ್ಲಿ ನೆರವಿಗೆ ಬಂದಿದ್ದು ಯಂತ್ರಗಳ ನೆರವಿಲ್ಲದೆ ಸುರಂಗ ಕೊರೆಯುವ ತಂತ್ರ. ಇದನ್ನು ರ್‍ಯಾಟ್‌–ಹೋಲ್ ಮೈನಿಂಗ್ ಎಂದು ಕರೆಯಲಾಗುತ್ತದೆ. ಈ ತಂತ್ರದಲ್ಲಿ ನಿಪುಣರಾಗಿರುವ 12 ಮಂದಿ, ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ರಕ್ಷಣಾ ಸುರಂಗ ಕೊರೆಯಲು ಬಳಸುತ್ತಿದ್ದ ಯಂತ್ರಗಳಿಗೆ ಮತ್ತೆ ಮತ್ತೆ ಅಡ್ಡಿ ಎದುರಾದ ನಂತರದಲ್ಲಿ, ರ್‍ಯಾಟ್‌–ಹೋಲ್ ಮೈನಿಂಗ್ ತಂತ್ರದಲ್ಲಿ ನಿಪುಣರಾದವರನ್ನು ರಕ್ಷಣಾ ಕಾರ್ಯಕ್ಕೆ ಕರೆಸಿಕೊಳ್ಳಲಾಯಿತು. ಈ ಕೆಲಸದಲ್ಲಿ ಪರಿಣತಿ ಹೊಂದಿರುವ ಭಾರತೀಯ ಸೇನೆಯ ತಂಡವೊಂದು ಇವರಿಗೆ ನೆರವು ನೀಡಿತು. ಇವರು ಸೋಮವಾರ ತಮ್ಮ ಕೆಲಸ ಆರಂಭಿಸಿದರು.

ಕಾರ್ಮಿಕರನ್ನು ರಕ್ಷಿಸಲು ಅಡ್ಡವಾಗಿ ಸುರಂಗ ಕೊರೆಯಲು ಯಂತ್ರವನ್ನು ಅವಲಂಬಿಸಲಾಗಿತ್ತು. ಆದರೆ, ಅದು ಕುಸಿದುಬಿದ್ದ ಮಣ್ಣು, ಕಲ್ಲುಗಳಲ್ಲಿ ಸಿಲುಕಿಕೊಂಡಿತು. ಆಗ ರಕ್ಷಣಾ ಕಾರ್ಯದ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಪರ್ಯಾಯ ತಂತ್ರದ ಮೊರೆ ಹೋಗಬೇಕಾಯಿತು.

ಈ ಮೈನಿಂಗ್ ತಂತ್ರದಲ್ಲಿ ನಿಪುಣರಾದವರು ಕಿರಿದಾದ ಸುರಂಗವನ್ನು ಸಣ್ಣ–ಪುಟ್ಟ ಸಲಕರಣೆಗಳನ್ನು ಬಳಸಿ ಕೊರೆಯುತ್ತಾರೆ. ಇಂತಹ ಸುರಂಗವು ಸಾಮಾನ್ಯವಾಗಿ 3–4 ಅಡಿಗಳಷ್ಟು ಎತ್ತರ ಇರುತ್ತದೆ. ಇಂತಹ ಸುರಂಗ ಒಬ್ಬ ವ್ಯಕ್ತಿ ನುಸುಳಬಹುದಾದಷ್ಟು ದೊಡ್ಡದಾಗಿರುತ್ತದೆ.

ಯಂತ್ರದಿಂದ ಆಗದೆ ಇದ್ದ ಜಾಗದಲ್ಲಿ ಸುರಂಗ ಕೊರೆಯುವ ಕೆಲಸವನ್ನು, ಯಂತ್ರ ಬಳಸದ ರ್‍ಯಾಟ್–ಹೋಲ್ ಮೈನಿಂಗ್ ನಿಪುಣರಿಂದ ಮಾಡಿಸಲು ಸಿಲ್ಕ್ಯಾರಾದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ತೀರ್ಮಾನಿಸಿದರು. ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲು ಅಳವಡಿಸಿರುವ ಪೈಪ್‌ನ ಮೂಲಕ ಒಳಗೆ ಹೋದ ರ್‍ಯಾಟ್‌–ಹೋಲ್ ಮೈನಿಂಗ್ ನಿಪುಣರು ತಮ್ಮೊಂದಿಗೆ ಡ್ರಿಲ್‌ ಹಾಗೂ ಗ್ಯಾಸ್‌ ಕಟರ್‌ಗಳನ್ನು ಒಯ್ದಿದ್ದರು.‌

ರ್‍ಯಾಟ್‌–ಹೋಲ್‌ ಮೈನಿಂಗ್‌ ತಂತ್ರವು ಮೇಘಾಲಯದಲ್ಲಿ ವಿವಾದಾತ್ಮಕವೂ ಅಪಾಯಕಾರಿಯೂ ಆಗಿತ್ತು. ಅಲ್ಲಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಈ ತಂತ್ರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಕಿರಿದಾಗ ಸುರಂಗವನ್ನು ಲಂಬವಾಗಿ ಕೊರೆದು, ಹಗ್ಗ ಅಥವಾ ಬಿದಿರಿನ ಏಣಿಯನ್ನು ಬಳಸಿ, ಕಲ್ಲಿದ್ದಲು ಹಾಸು ಇರುವಲ್ಲಿಗೆ ಕಾರ್ಮಿಕರು ತಲುಪುತ್ತಿದ್ದರು. ಅಲ್ಲಿ ಯಂತ್ರ ಬಳಸದೆಯೇ ಕಲ್ಲಿದ್ದಲು ತೆಗೆಯುತ್ತಿದ್ದರು. ಆದರೆ, ಮೇಘಾಲಯದಲ್ಲಿ ಈ ತಂತ್ರವನ್ನು ಕಲ್ಲಿದ್ದಲು ಗಣಿಗಾರಿಕೆಯ ಕೆಲಸಗಳಲ್ಲಿ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2014ರಲ್ಲಿ ಆದೇಶಿಸಿದೆ.

ಸಿಲ್ಕ್ಯಾರಾದಲ್ಲಿ ಭಾರಿ ಯಂತ್ರದ ನೆರವಿಲ್ಲದೆ (ರ್‍ಯಾಟ್ ಹೋಲ್) ಸುರಂಗ ಕೊರೆಯಲು ಬಂದಿರುವವರು ಈಗಾಗಲೇ ಅಳವಡಿಸಲಾಗಿರುವ ಪೈಪ್‌ನಲ್ಲಿ ಒಳಗೆ ಹೋಗಿ ಸುರಂಗ ಕೊರೆದಿದ್ದಾರೆ.

ಒಬ್ಬ ವ್ಯಕ್ತಿ ಕೊರೆಯುವ ಕೆಲಸ ಮಾಡುತ್ತಾನೆ, ಇನ್ನೊಬ್ಬ ಕಲ್ಲು–ಮಣ್ಣನ್ನು ಎತ್ತಿ ಗುಪ್ಪೆ ಮಾಡುತ್ತಾನೆ. ಮೂರನೆಯ ವ್ಯಕ್ತಿಯು ಅದನ್ನು ಟ್ರಾಲಿಗೆ ಹಾಕಿ ಹೊರಕ್ಕೆ ಕಳುಹಿಸುತ್ತಾನೆ ಎಂದು ರ್‍ಯಾಟ್–ಹೋಲ್ ನಿಪುಣ ರಜಪೂತ್ ರಾಯ್ ತಿಳಿಸಿದ್ದಾರೆ. ಉತ್ತರಕಾಶಿಯಲ್ಲಿ ರ್‍ಯಾಟ್–ಹೋಲ್ ಮೈನರ್‌ಗಳು 24 ತಾಸುಗಳಲ್ಲಿ 10 ಮೀಟರ್‌ನಷ್ಟು ಸುರಂಗ ಕೊರೆದಿದ್ದರು.

ಕಲ್ಲಿದ್ದಲು ಗಣಿಗಾರಿಕೆಯನ್ನು ಈ ತಂತ್ರವನ್ನು ಎನ್‌ಜಿಟಿ ನಿಷೇಧಿಸಿದೆಯಾದರೂ, ನಿರ್ಮಾಣ ಚಟುವಟಿಕೆಗಳಲ್ಲಿಈ ತಂತ್ರದ ಬಳಕೆ ಈಗಲೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀರೊಗಳಾದ ರ್‍ಯಾಟ್ ಮೈನರ್ಸ್‌
ಯಂತ್ರದ ನೆರವಿಲ್ಲದೆ ಸುರಂಗ ಕೊರೆದವರು (ರ್‍ಯಾಟ್‌ ಮೈನರ್ಸ್‌) ಹೀರೊಗಳಾಗಿ ಹೊರಹೊಮ್ಮಿದರು. ಉಸಿರಾಟ ಕೂಡ ಸವಾಲಾಗಿದ್ದ ಸುರಂಗವನ್ನು ಕೊರೆದು ದಣಿದಿದ್ದರೂ ಅವರ ಮೊಗದಲ್ಲಿನ ನಗು ಬಳಲಿಕೆಯನ್ನು ಮರೆಮಾಚಿತು. ‘ನಮ್ಮನ್ನು ನೋಡಿದ ಮೇಲೆ ಕಾರ್ಮಿಕರು ಸಂತಸಗೊಂಡರು. ನಮ್ಮನ್ನು ಬಿಗಿದಪ್ಪಿದ ಅವರು ನಮಗೆ ಬಾದಾಮಿ ತಿನ್ನುವಂತೆ ಹೇಳಿದರು’ ಎಂದು ಸುರಂಗ ಕೊರೆದ ತಂಡದಲ್ಲಿದ್ದ ದೇವೇಂದ್ರ ‘ಎನ್‌ಡಿಟಿವಿ’ಗೆ ಹೇಳಿದರು. ‘ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಹೊರತರುವ ಬಗ್ಗೆ ಅವರಿಗೆ ಮನವರಿಕೆ ಆಗಿತ್ತು. ಕಾರ್ಮಿಕರನ್ನು ಹೊರತರಲು ಅವರು 24 ಗಂಟೆ ಕೆಲಸ ಮಾಡಿದರು’ ಎಂದು ಅವರ ತಂಡದ ನಾಯಕ ಸ್ಮರಿಸಿದರು.
ರ್‍ಯಾಟ್‌–ಹೋಲ್ ಮೈನಿಂಗ್ ಅಕ್ರಮವಾಗಿರಬಹುದು. ಆದರೆ ಇಲ್ಲಿ ಬಳಕೆಯಾಗುತ್ತಿರುವುದು ರ್‍ಯಾಟ್–ಹೋಲ್ ಮೈನಿಂಗ್‌ ನಿಪುಣರ ಸಾಮರ್ಥ್ಯ.
–ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತ್ತಾ ಹಸ್ನೈನ್, ಎನ್‌ಡಿಎಂಎ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT