ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕಿಯನ್ನು ಬೆತ್ತಲುಗೊಳಿಸಿದ ಕೃತ್ಯ ಅತ್ಯಾಚಾರ ಯತ್ನವಲ್ಲ: ರಾಜಸ್ಥಾನ ಹೈಕೋರ್ಟ್

33 ವರ್ಷಗಳ ಹಿಂದಿನ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ ತೀರ್ಪು
Published 13 ಜೂನ್ 2024, 15:38 IST
Last Updated 13 ಜೂನ್ 2024, 15:38 IST
ಅಕ್ಷರ ಗಾತ್ರ

ಜೈಪುರ: ಬಾಲಕಿಯ ಒಳಉಡುಪನ್ನು ತೆಗೆದು ಬೆತ್ತಲುಗೊಳಿಸಿದ ಕೃತ್ಯವು ‘ಅತ್ಯಾಚಾರ ಎಸಗುವ ಯತ್ನ’ದ ಅಪರಾಧವಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್, 33 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. 

ನ್ಯಾಯಮೂರ್ತಿ ಅನುಪ್ ಕುಮಾರ್ ಧಂಡ್ ಅವರಿದ್ದ ಏಕ ಸದಸ್ಯ ಪೀಠವು, ‘ಬಾಲಕಿಯ  ಒಳಉಡುಪುಗಳನ್ನು ತೆಗೆದು ಸಂಪೂರ್ಣವಾಗಿ ಬೆತ್ತಲಾಗಿಸುವುದು ಐಪಿಸಿಯ ಸೆಕ್ಷನ್ 376 ಮತ್ತು ಸೆಕ್ಷನ್ 511ರ ಅಡಿಯಲ್ಲಿ ಬರುವುದಿಲ್ಲ ಮತ್ತು ‘ಅತ್ಯಾಚಾರಕ್ಕೆ ಯತ್ನಿಸುವ ಪ್ರಯತ್ನ’ದ  ಅಪರಾಧ ಆಗುವುದಿಲ್ಲ’ ಎಂದು ಅಭಿಪ್ರಾಯ ನೀಡಿದೆ. ಈ ಪ್ರಕರಣದಲ್ಲಿನ ತೀರ್ಪನ್ನು ಮೇ 13ರಂದು ನ್ಯಾಯಪೀಠ ನೀಡಿದೆ. 

‘ನನ್ನ ಅಭಿಪ್ರಾಯದಲ್ಲಿ, ಈ ಸಂಗತಿಗಳಿಂದ ಸೆಕ್ಷನ್ 376/511 ಐಪಿಸಿ ಅಡಿಯಲ್ಲಿ ಈ ಪ್ರಕರಣವನ್ನು ಅತ್ಯಾಚಾರ ಯತ್ನದ ಅಪರಾಧವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರೋಪಿ ಮೇಲ್ಮನವಿದಾರನು ಅತ್ಯಾಚಾರ ಎಸಗುವ ಪ್ರಯತ್ನದಲ್ಲಿ ತಪ್ಪಿತಸ್ಥನೆಂದು ಪರಿಗಣಿಸಲಾಗುವುದಿಲ್ಲ. ಆದರೆ, ಆರೋಪಿಯ ಕೃತ್ಯವು ಐಪಿಸಿಯ ಸೆಕ್ಷನ್ 354ರಡಿ (ಮಹಿಳೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ, ಹಲ್ಲೆ ನಡೆಸಿದ ಅಪರಾಧ) ಬರುವ ಸ್ಪಷ್ಟ ಪ್ರಕರಣ’ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಬರೆದಿದ್ದಾರೆ. 

1991ರ ಮಾರ್ಚ್ 9ರಲ್ಲಿ ನಡೆದ ಈ ಪ್ರಕರಣ ಸಂಬಂಧ ಟೊಂಕ್‌ ಜಿಲ್ಲೆಯ ತೋಡರೈಸಿಂಗ್‌ನ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದರು. ದೂರುದಾರರು ತಮ್ಮ ಆರು ವರ್ಷದ ಮೊಮ್ಮಗಳು ರಾತ್ರಿ 8 ಗಂಟೆಯ ಸುಮಾರಿಗೆ ಬನಿಯಾ ಕುಟುಂಬದ ಮದುವೆಯ ಮೆರವಣಿಗೆ ನೋಡಿಕೊಂಡು, ನೀರು ಕುಡಿಯಲು ಹೋದಾಗ ಆರೋಪಿ ಸುವಾಲಾಲ್ ಎಂಬಾತ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ, ಆಕೆಯನ್ನು ಬಲವಂತವಾಗಿ ಹತ್ತಿರದ ಧರ್ಮಶಾಲೆಗೆ ಕರೆದೊಯ್ದು, ಆಕೆಯ ಒಳಉಡುಪುಗಳನ್ನು ತೆಗೆದು ವಿವಸ್ತ್ರಗೊಳಿಸಿದ್ದಾನೆ. ಮಗು ಸಹಾಯಕ್ಕಾಗಿ ಕೂಗಿಕೊಂಡಾಗ ಗ್ರಾಮಸ್ಥರು ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.  

ವಿಚಾರಣೆಯ ಸಂದರ್ಭದಲ್ಲಿ, ಪ್ರಾಸಿಕ್ಯೂಷನ್ ಏಳು ಸಾಕ್ಷಿಗಳನ್ನು ವಿಚಾರಣೆ ನಡೆಸಿ, ಐದು ದಾಖಲೆಗಳನ್ನು ಹಾಜರುಪಡಿಸಿತ್ತು. ನಂತರ ಮೇಲ್ಮನವಿದಾರರ ಹೇಳಿಕೆಗಳನ್ನು ಸೆಕ್ಷನ್ 313 ಸಿಆರ್‌ಪಿಸಿ ಅಡಿಯಲ್ಲಿ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT