ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ವರ್ಗ ಪ್ರಮಾಣಪತ್ರ: ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆಗೆ ‘ಸುಪ್ರೀಂ‘ ತಡೆ

Published 27 ಜನವರಿ 2024, 15:36 IST
Last Updated 27 ಜನವರಿ 2024, 15:36 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮೀಸಲು ವರ್ಗ ಪ್ರಮಾಣಪತ್ರ ನೀಡುವಿಕೆಯಲ್ಲಿ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನಲ್ಲಿರುವ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶನಿವಾರ ತಡೆಯಾಜ್ಞೆ ನೀಡಿದೆ. 

ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಐದು ಸದಸ್ಯರ ಪೀಠವು, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮೂಲ ಅರ್ಜಿದಾರರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ನೀಡಿದ್ದ ಆದೇಶಗಳಿಗೆ ಕೂಡ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಶನಿವಾರ ಕೋರ್ಟ್‌ ಕಲಾಪ ಇಲ್ಲದಿದ್ದರೂ, ಈ ಪ್ರಕರಣದ ವಿಚಾರಣೆಗಾಗಿ ಪೀಠವು ವಿಶೇಷ ಕಲಾಪ ನಡೆಸಿತು.

‘ನಾವು ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡುತ್ತಿದ್ದೇವೆ. ವಿಚಾರಣೆಯನ್ನು ಮತ್ತೆ ಸೋಮವಾರ ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯ ಕಾಂತ್ ಮತ್ತು ಅನಿರುದ್ಧ ಬೋಸ್ ಅವರೂ ಈ ಪೀಠದಲ್ಲಿದ್ದಾರೆ. ಸೂರ್ಯ ಕಾಂತ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

ಸಿಬಿಐ ತನಿಖೆಗೆ ಆದೇಶಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದರು. 

ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇದ್ದ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು, ನ್ಯಾಯಮೂರ್ತಿಗಳಾದ ಸೌಮೆನ್ ಸೆನ್ ಮತ್ತು ಉದಯಕುಮಾರ್ ಅವರು ಇದ್ದ ವಿಭಾಗೀಯ ಪೀಠದ ನೀಡಿದ್ದ ಆದೇಶವು ಸಂಪೂರ್ಣ ಕಾನೂನುಬಾಹಿರ ಎಂದೂ ಅದನ್ನು ನಿರ್ಲಕ್ಷಿಸಬೇಕು ಎಂದೂ ಗುರುವಾರ ಹೇಳಿತ್ತು.

ಇದಕ್ಕೂ ಮೊದಲು, ಬುಧವಾರ ಇದೇ ಏಕಸದಸ್ಯ ಪೀಠವು, ಮೀಸಲಾತಿ ಪ್ರವರ್ಗಗಳ ಅಡಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ದೂರಿ ಎಂಬಿಬಿಎಸ್‌ ಅಭ್ಯರ್ಥಿ ಇತಿಶಾ ಸೊರೇನ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಸಿಬಿಐ ತನಿಖೆಗೆ ಆದೇಶಿಸಿತ್ತು. ರಾಜ್ಯದ ‍‍ಪೊಲೀಸರಲ್ಲಿ ತನಗೆ ನಂಬಿಕೆ ಇಲ್ಲ ಎಂದೂ ಹೇಳಿತ್ತು.

ಪಶ್ಚಿಮ ಬಂಗಾಳ ಸರ್ಕಾರವು ಗುರುವಾರ ದ್ವಿಸದಸ್ಯ ಪೀಠದ ಎದುರು ಮೇಲ್ಮನವಿ ಸಲ್ಲಿಸಿತ್ತು. ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದಾದ ನಂತರ, ಅದೇ ದಿನ ಮತ್ತೆ ವಿಚಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು, ಮೇಲ್ಮನವಿ ಮೆಮೊ ಇಲ್ಲದಿದ್ದಾಗ ವಿಭಾಗೀಯ ಪೀಠವು ಆದೇಶ ಹೊರಡಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದರು.

‘ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸದೆ ನನಗೆ ಬೇರೆ ಮಾರ್ಗ ಇಲ್ಲ...’ ಎಂದು ಕೂಡ ಗಂಗೋಪಾಧ್ಯಾಯ ಅವರು ಹೇಳಿದ್ದರು. ‘ನ್ಯಾಯಮೂರ್ತಿ ಸೆನ್ ಅವರು ರಾಜ್ಯದ ಕೆಲವು ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟ. ಹೀಗಾಗಿ, ಸುಪ್ರೀಂ ಕೋರ್ಟ್‌ ಬಯಸಿದರೆ, ರಾಜ್ಯ ಸರ್ಕಾರವೂ‍ ಪಾಲುದಾರ ಆಗಿರುವ ಪ್ರಕರಣಗಳಲ್ಲಿ ನೀಡಿರುವ ಆದೇಶಗಳನ್ನು ಪುನರವಲೋಕಿಸಬೇಕಿದೆ’ ಎಂದು ಗಂಗೋಪಾಧ್ಯಾಯ ಹೇಳಿದ್ದರು. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ಪಕ್ಷವನ್ನು ಪಾರುಮಾಡಲು ನ್ಯಾಯಮೂರ್ತಿ ಸೆನ್ ಅವರು ತಮ್ಮ ಹಿತಾಸಕ್ತಿಯನ್ನು ಮುಂದಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು.

ಹೀಗಾಗಿ ಅವರ ನಡೆ ದುರ್ನಡತೆಗೆ ಸಮ ಎಂದಿದ್ದರು. ‘ಎರಡು ವರ್ಷಗಳಿಗೂ ಹಿಂದೆಯೇ ಈ ಕೋರ್ಟ್‌ನಿಂದ ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಆದೇಶ ಪಡೆದಿರುವ ನ್ಯಾಯಮೂರ್ತಿ ಸೆನ್ ಅವರು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು (2021ರ ಸೆಪ್ಟೆಂಬರ್‌ 16ರದ್ದು) ಉಲ್ಲಂಘಿಸಿ ಇಲ್ಲಿ ನ್ಯಾಯಮೂರ್ತಿಯಾಗಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರ ಹಿಂದೆ ಯಾರಿದ್ದಾರೆ, ಅವರನ್ನು ವರ್ಗಾವಣೆಯಿಂದ ಪಾರು ಮಾಡುತ್ತಿರುವುದು ಯಾರು’ ಎಂದು ಗಂಗೋಪಾಧ್ಯಾಯ ಅವರು ಆದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT