ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆಗೆ ಇಂದು ಮತದಾನ: ಹೆಚ್ಚುವರಿ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ

Last Updated 9 ಜೂನ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯ 16 ಸ್ಥಾನಗಳಿಗೆ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬಿಜೆಪಿ ಬೆಂಬಲಿಸಿರುವ ಇಬ್ಬರು ಪಕ್ಷೇತರ ಅಭ್ಯರ್ಥಿಗಳತ್ತಲೇ ಎಲ್ಲರ ಕಣ್ಣು ನೆಟ್ಟಿದೆ.

ಈ ಬಾರಿ ತೆರವಾಗಿದ್ದ 57 ಸ್ಥಾನಗಳಿಗೆ ವಿವಿಧ ರಾಜ್ಯಗಳಿಂದ 41 ಮಂದಿಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 16 ಸ್ಥಾನಗಳಿಗೆ ಈ ನಾಲ್ಕೂ ರಾಜ್ಯಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ, ಬಿಜೆಪಿಯ ಸ್ಥಾನ ಕಳೆದ ಬಾರಿಗಿಂತ ಒಂದು ಕಡಿಮೆಯಾಗಿದೆ. ಉಳಿದ ರಾಜ್ಯಗಳಲ್ಲಿ ಈ ನಷ್ಟವನ್ನು ತುಂಬಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಬೇರೆ ಪಕ್ಷಗಳ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯುವ ಸಾಧ್ಯತೆ ಇರುವ ಕಾರಣ, ಬಿಜೆಪಿಯೇತರ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಭದ್ರಪಡಿಸಿವೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಇಬ್ಬರು ಮತ್ತು ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬೇಕಾದಷ್ಟು ಮತಗಳನ್ನು ಹೊಂದಿವೆ. ಆದರೆ, ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡ ಬಳಿಕವೂ ಬಿಜೆಪಿ ಬಳಿ 30 ಹೆಚ್ಚುವರಿ ಮತಗಳು ಉಳಿಯಲಿವೆ.ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪತ್ರಿಕೋದ್ಯಮಿ ಸುಭಾಷ್‌ ಚಂದ್ರ ಅವರಿಗೆ ಈ ಹೆಚ್ಚುವರಿ ಮತಗಳನ್ನು ನೀಡುವುದಾಗಿ ಬಿಜೆಪಿ ಬೆಂಬಲ ಘೋಷಿಸಿದೆ. ಆದರೆ, ಚಂದ್ರ ಅವರನ್ನು ಗೆಲ್ಲಿಸಿಕೊಳ್ಳಲು ಬಿಜೆಪಿಗೆ ಮತ್ತಷ್ಟು ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳ ಶಾಸಕರನ್ನು ಬಿಜೆಪಿಯು ತನ್ನತ್ತ ಸೆಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಒಡಕು ಎದ್ದು ಕಾಣಿಸುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಒಂದೆಡೆಯಾದರೆ, ಸಚಿನ್ ಪೈಲಟ್‌ ಅವರದ್ದು ಮತ್ತೊಂದು ಬಣ. ಇಬ್ಬರು ನಾಯಕರು ಒಗ್ಗಟ್ಟಿನಿಂದ ರಾಜ್ಯಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಅಡ್ಡಮತದಾನವಾದರೆ ಬಿಜೆಪಿಗೆ ಲಾಭವಾಗಲಿದೆ.

ಹರಿಯಾಣದಲ್ಲಿ ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆ ಬಳಿಕವೂ ಎನ್‌ಡಿಎ ಮೈತ್ರಿಕೂಟದ ಬಳಿ 21 ಮತಗಳು ಉಳಿಯಲಿವೆ. ಈ ಮತಗಳನ್ನುಹೆಚ್ಚುವರಿಯಾಗಿ ಕಣಕ್ಕೆ ಇಳಿದಿರುವ ಪಕ್ಷೇತರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ನೀಡುವುದಾಗಿ ಬಿಜೆಪಿ ಹೇಳಿದೆ. ತನ್ನ ಶಾಸಕರನ್ನು ಬಿಜೆಪಿ ಸೆಳೆಯುವ ಸಾಧ್ಯತೆ ಇದೆ ಎಂದಿರುವ ಕಾಂಗ್ರೆಸ್‌, ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‌ ಒಂದರಲ್ಲಿ ಭದ್ರಪಡಿಸಿದೆ.

ಆದರೆ ‍ಪಕ್ಷದ ರಾಜ್ಯ ಘಟಕದಲ್ಲಿ ಒಡಕು ಇದ್ದೇ ಇದೆ. ರಾಜ್ಯ ಘಟಕದ ಅಧ್ಯಕ್ಷಭೂಪಿಂದರ್ ಸಿಂಗ್ ಹೂಡಾ ಮತ್ತು ಬಿಷ್ಣೋಯಿ ನಾಯಕ ಕುಲದೀಪ್‌ ಸಿಂಗ್ ಬಿಷ್ಣೋಯಿ ಮಧ್ಯೆ ಒಡಕು ಮೂಡಿದೆ. ಈ ಒಡಕಿನ ಲಾಭ ಪಡೆಯಲು ಬಿಜೆಪಿ ಯತ್ನಿಸಬಹುದು ಎಂದು ಕಾಂಗ್ರೆಸ್‌ ಎಚ್ಚರ ವಹಿಸಿದೆ.

ಮಹಾರಾಷ್ಟ್ರದಿಂದ ಆರು ಸ್ಥಾನಗಳಿಗೆ ಸಂಸದರು ಆಯ್ಕೆಯಾಗಲಿದ್ದಾರೆ. ಆದರೆ ಶಿವಸೇನಾ ಮತ್ತು ಬಿಜೆಪಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಒಟ್ಟು ಏಳು ಮಂದಿ ಕಣದಲ್ಲಿದ್ದಾರೆ. ಆರು ಸ್ಥಾನಗಳಿಗೆ ಅಗತ್ಯವಿರುವಷ್ಟು ಮತಗಳು ಮುಗಿದು, ಹೆಚ್ಚುವರಿಯಾಗಿಇನ್ನೂ 25 ಮತಗಳು ಸಣ್ಣ–ಪುಟ್ಟ ಪಕ್ಷಗಳ ಬಳಿ ಉಳಿಯಲಿವೆ. ಇವುಗಳ ಜತೆಗೆ, ಆಡಳಿತ ಮೈತ್ರಿಕೂಟದ ಕೆಲವು ಮತಗಳನ್ನು ಸೆಳೆದರೆ ಬಿಜೆಪಿ ತನ್ನ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು. ಆದರೆ, ಇದನ್ನು ತಪ್ಪಿಸುವ ಸಲುವಾಗಿ ಆಡಳಿತಾರೂಢ ಮೈತ್ರಿಕೂಟವು ತನ್ನ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಭದ್ರಪಡಿಸಿವೆ.

ನಾಲ್ಕೂ ರಾಜ್ಯಗಳಲ್ಲಿ ಒಂದಾದರೂ ಹೆಚ್ಚುವರಿ ಸ್ಥಾನವನ್ನು ಗೆದ್ದುಕೊಳ್ಳಲೇಬೇಕು ಎಂದು ಬಿಜೆಪಿ ಯತ್ನಿಸುತ್ತಿದೆ. ಹೀಗಾಗಿ ಕಣದಲ್ಲಿರುವ ಹೆಚ್ಚುವರಿ ಮತ್ತು ಪಕ್ಷೇತರ ಅಭ್ಯರ್ಥಿಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

ದೇಶಮುಖ್‌, ಮಲಿಕ್‌ಗೆ ಜಾಮೀನು ಇಲ್ಲ
ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಆಘಾಡಿಗೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಹಿನ್ನಡೆಯಾಗಿದೆ. ಎನ್‌ಸಿಪಿ ಮುಖಂಡರಾದ ಅನಿಲ್‌ ದೇಶಮುಖ್‌ ಮತ್ತು ನವಾಬ್‌ ಮಲಿಕ್‌ ಅವರಿಗೆ ಮತ ಹಾಕುವುದಕ್ಕಾಗಿ ಒಂದು ದಿನದ ಜಾಮೀನು ನೀಡಲು ವಿಶೇಷ ನ್ಯಾಯಾಲಯ ಗುರುವಾರ ನಿರಾಕರಿಸಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಈ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ದೇಶಮುಖ್‌ ಮತ್ತು ಮಲಿಕ್‌ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಬೆಳಿಗ್ಗೆ ಇದರ ವಿಚಾರಣೆ ನಡೆಯಲಿದೆ.

ಜನ ಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಈ ಇಬ್ಬರಿಗೂ ಮತದಾನದ ಹಕ್ಕು ಇಲ್ಲ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು.

ರಾಜ್ಯಸಭೆಯ ನಾಲ್ಕು ಸ್ಥಾನಗಳನ್ನು ಗೆಲ್ಲಲು ಬೇಕಾದಷ್ಟು ಸದಸ್ಯ ಬಲ ತನಗೆ ಇದೆ ಎಂದು ಮಹಾ ವಿಕಾಸ ಆಘಾಡಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT