ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ನಲ್ಲಿ ಕೃಪಾಂಕ: ಪರಿಶೀಲನೆಗೆ ಸಮಿತಿ ರಚಿಸಿದ ಶಿಕ್ಷಣ ಸಚಿವಾಲಯ

Published 8 ಜೂನ್ 2024, 16:07 IST
Last Updated 8 ಜೂನ್ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಪ್ರಸಕ್ತ ವರ್ಷ ನಡೆದಿದ್ದ ‘ನೀಟ್‌’ (ಯುಜಿ) ಪರೀಕ್ಷೆಯಲ್ಲಿ 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಲಾಗಿರುವ ಕೃಪಾಂಕಗಳನ್ನು ಪರಿಶೀಲಿಸಲು ಶಿಕ್ಷಣ ಸಚಿವಾಲಯ ನಾಲ್ಕು ಸದಸ್ಯರ ಸಮಿತಿ ರಚಿಸಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶನಿವಾರ ತಿಳಿಸಿದೆ.

ಈ ಬಾರಿಯ ಪರೀಕ್ಷೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 67 ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಇವರೂ ಸೇರಿದಂತೆ ಕೆಲ ಅಭ್ಯರ್ಥಿಗಳಿಗೆ ಹೆಚ್ಚು ಅಂಕಗಳು ಬಂದಿರುವುದಕ್ಕೆ ನೀಟ್‌ ಆಕಾಂಕ್ಷಿಗಳು ಅನುಮಾನ ವ್ಯಕ್ತಪಡಿಸಿ, ಆರೋಪಗಳನ್ನು ಮಾಡಿದ ಬೆನ್ನಲ್ಲೇ ಶಿಕ್ಷಣ ಸಚಿವಾಲಯ ಈ ಕ್ರಮ ತೆಗೆದುಕೊಂಡಿದೆ. 

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮಾಜಿ ಅಧ್ಯಕ್ಷರ ನೇತೃತ್ವದ ಸಮಿತಿಯು ಆರೋಪಗಳನ್ನು ಪರಿಶೀಲಿಸಿ, ವಾರದೊಳಗೆ ತನ್ನ ಶಿಫಾರಸುಗಳ ವರದಿಯನ್ನು ಸಲ್ಲಿಸಲಿದೆ. ಆ ಬಳಿಕ ಅಭ್ಯರ್ಥಿಗಳ ಫಲಿತಾಂಶ ಪರಿಷ್ಕರಿಸಬಹುದು ಎಂದು ಎನ್‌ಟಿಎ ಮಹಾನಿರ್ದೇಶಕ ಸುಬೋಧ್
ಕುಮಾರ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕೃಪಾಂಕ ನೀಡುವಿಕೆಯು ಪರೀಕ್ಷಾ ಅರ್ಹತಾ ಮಾನದಂಡಗಳ ಮೇಲಾಗಲಿ, ಪ್ರವೇಶ ಪ್ರಕ್ರಿಯೆಯ ಮೇಲಾಗಲಿ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಆದಾಗ್ಯೂ, ಈ ಸಂಬಂಧ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ ಅವರು, ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳಲ್ಲಿ ಆದ ಬದಲಾವಣೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯ ನಷ್ಟವಾದ ಅಭ್ಯರ್ಥಿಗಳಿಗೆ ಕೃಪಾಂಕಗಳನ್ನು ನೀಡಲಾಗಿದೆ. ಈ ಕಾರಣದಿಂದ ಕೆಲವರಿಗೆ ಹೆಚ್ಚಿನ ಅಂಕಗಳು ದೊರೆತಿವೆ ಎಂದು ವಿವರಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳನ್ನೂ ಅವರು ನಿರಾಕರಿಸಿದರು.

ಮರು ಪರೀಕ್ಷೆಗೆ ಆಗ್ರಹ: ‘ಮೇಘಾಲಯ, ಹರಿಯಾಣದ ಬಹದ್ದೂರ್‌ಗಢ, ಛತ್ತೀಸಗಢದ ದಂತೇವಾಡ, ಬಲೋಧ್‌, ಗುಜರಾತ್‌ನ ಸೂರತ್‌ ಮತ್ತು ಚಂಡೀಗಢದ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಆದ ಪರೀಕ್ಷಾ ಸಮಯ ನಷ್ಟವನ್ನು ಸರಿದೂಗಿಸಲು ನೀಡಲಾಗಿರುವ ‘ಕೃಪಾಂಕ’ಗಳಿಂದ ಕೆಲವರಿಗೆ ಹೆಚ್ಚು ಅಂಕಗಳು ದೊರೆತಿವೆ. ಇದು ಇತರ ಅಭ್ಯರ್ಥಿಗಳ ಅವಕಾಶವನ್ನು ಕಸಿದಿದೆ. ಹೀಗಾಗಿ ಆ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಬೇಕು’ ಎಂಬ ಆಗ್ರಹ ಅಭ್ಯರ್ಥಿಗಳು ಮತ್ತು ಅವರ ಪೋಷಕರಿಂದ ವ್ಯಕ್ತವಾಗಿದೆ.

ಕೆಲ ಕೇಂದ್ರಗಳ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್‌, ‘ಸಮಿತಿಯ ಶಿಫಾರಸುಗಳನ್ನು ಆಧರಿಸಿ ನಿರ್ಧರಿಸಲಾಗುವುದು’ ಎಂದರು.

‘ಸಮಯ ನಷ್ಟವಾಗಿರುವ ಅಭ್ಯರ್ಥಿಗಳು ಅಥವಾ ಇತರ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸಮಿತಿ ರಚನೆಯ ಹಿಂದಿನ ಉದ್ದೇಶವಾಗಿದೆ’ ಎಂದು ಅವರು ತಿಳಿಸಿದರು.

ಪರೀಕ್ಷೆ ರದ್ದಿಗೆ ಮಹಾರಾಷ್ಟ್ರ ಆಗ್ರಹ: ‘ನೀಟ್‌’ ಫಲಿತಾಂಶದಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಈ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಬಿಜೆಪಿ ಮೈತ್ರಿಕೂಟ ಎನ್‌ಡಿಎಗೆ ಸೇರಿರುವ ಪಕ್ಷದ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರವನ್ನು ಕೋರಿದೆ.

ಫೆಡರಲ್‌ ವ್ಯವಸ್ಥೆಗೆ ವಿರುದ್ಧ– ಡಿಎಂಕೆ: ಇತ್ತೀಚಿಗೆ ಪ್ರಕಟವಾದ ನೀಟ್‌ ಫಲಿತಾಂಶಗಳು ಸಾಕಷ್ಟು ಗೊಂದಲ ಮೂಡಿಸಿದ್ದು, ನೀಟ್‌ ವಿರೋಧಿಸುವ ಡಿಎಂಕೆ ನಿಲುವನ್ನು ಸಮರ್ಥಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ‘ಎಕ್ಸ್‌’ನಲ್ಲಿ ಹೇಳಿದ್ದಾರೆ. ಅಲ್ಲದೆ ‘ನೀಟ್‌’ ಸಾಮಾಜಿಕ ನ್ಯಾಯ ಮತ್ತು ದೇಶದ ಫೆಡರಲ್‌ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ

ಇದು ದೊಡ್ಡ ಹಗರಣವಾಗಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್, ಎಎಪಿ ಮತ್ತು ಎಸ್‌ಪಿ ಆಗ್ರಹಿಸಿವೆ.

‘ಬಿಜೆಪಿ ಆಡಳಿತದಲ್ಲಿ ಪರೀಕ್ಷಾ ಅಕ್ರಮಗಳು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಅಭ್ಯರ್ಥಿ ಪ್ರಕರಣಗಳು ನಡೆದಿವೆ. ಪರೀಕ್ಷಾ ಕೇಂದ್ರಗಳ ಸ್ಥಾಪನೆ ಮತ್ತು ಫಲಿತಾಂಶ ನಿರ್ವಹಣೆಯು ದಂಧೆಯಾಗಿ ಬದಲಾಗುತ್ತಿದೆ’ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ‘ಎಕ್ಸ್‌’ನಲ್ಲಿ ಆರೋಪಿಸಿದ್ದಾರೆ.

‘ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ ಅವರಿಗೆ ಪ್ರವೇಶ ಪರೀಕ್ಷೆಗಳನ್ನೇ ಸರಿಯಾಗಿ ನಡೆಸಲು ಬರುತ್ತಿಲ್ಲ’ ಎಂದು ಎಎಪಿ ನಾಯಕ ಜಾಸ್ಮಿನ್‌ ಶಾ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಕಳೆದ 11 ವರ್ಷಗಳಲ್ಲಿ 11 ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಮತ್ತು ‌ಶಿಕ್ಷಕರ ನೇಮಕಾತಿಯ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ. ಈ ಮೂಲಕ ಬಿಜೆಪಿ ಲಕ್ಷಾಂತರ ಯುವ ಜನರ ಭವಿಷ್ಯವನ್ನು ಅನಿಶ್ಚಿತಗೊಳಿಸಿದೆ’ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT