ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ತರಗತಿಗೆ NCERT ಪರಿಷ್ಕೃತ ಪಠ್ಯಪುಸ್ತಕ ಪ್ರಕಟ: ಪ್ರಜಾಪ್ರಭುತ್ವ ಪಾಠಕ್ಕೆ ಕೊಕ್

Published 1 ಜೂನ್ 2023, 23:28 IST
Last Updated 1 ಜೂನ್ 2023, 23:28 IST
ಅಕ್ಷರ ಗಾತ್ರ

ನವದೆಹಲಿ: ಹತ್ತನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದಿಂದ ‘ಆವರ್ತಕ ಕೋಷ್ಟಕ’ (ಪಿರಿಯಾಡಿಕ್‌ ಟೇಬಲ್) ಹಾಗೂ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ‘ಪ್ರಜಾಪ್ರಭುತ್ವ’ ಪಾಠಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೊಕ್‌ ನೀಡಿದೆ.

ಪಠ್ಯವನ್ನು ತರ್ಕಬದ್ಧಗೊಳಿಸುವ ಜತೆಗೆ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆ ಇಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಸಿಇಆರ್‌ಟಿ ಸ್ಪಷ್ಟನೆ ನೀಡಿದೆ. ಆದರೆ, ಎನ್‌ಸಿಇಆರ್‌ಟಿ ನಡೆಗೆ ಶಿಕ್ಷಣತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಒಂದು ತಿಂಗಳ ಹಿಂದೆಯಷ್ಟೇ ಪಠ್ಯಪುಸ್ತಕದಿಂದ ಮೊಘಲ್‌ ಸಾಮ್ರಾಜ್ಯ, ಮಹಾತ್ಮ ಗಾಂಧಿ ಹತ್ಯೆ, ಗುಜರಾತ್‌ ದಂಗೆ, ಡಾರ್ವಿನ್‌ನ ವಿಕಾಸವಾದ ಸಿದ್ಧಾಂತದ ಕುರಿತ ವಿವರಗಳನ್ನು ಪಠ್ಯಪುಸ್ತಕದಿಂದ ಕೈಬಿಡಲಾಗಿತ್ತು. ಮಂಡಳಿಯ ಈ ಕ್ರಮಕ್ಕೆ ಪ್ರತಿಪಕ್ಷಗಳು ಮತ್ತು ಶಿಕ್ಷಣ ತಜ್ಞರು ಆಕ್ಷೇ‍ಪ ವ್ಯಕ್ತಪಡಿಸಿದ್ದರು. ಈಗ 10ನೇ ತರಗತಿ ಪಠ್ಯಪುಸ್ತಕದಲ್ಲೂ ಕತ್ತರಿ ಪ್ರಯೋಗ ಮಾಡಿದೆ.

‘ಮಂಡಳಿಯು ಮಾಡಿದ ಈ ಬದಲಾವಣೆಯು ತರ್ಕಬದ್ಧವೇ ಅಥವಾ ಸಮರ್ಥನೀಯವೇ’ ಎಂದು ಪ್ರಶ್ನಿಸಿರುವ ಎನ್‌ಸಿಇಆರ್‌ಟಿಯ ಮಾಜಿ ಅಧ್ಯಕ್ಷ ಪ್ರೊ.ಕೃಷ್ಣಕುಮಾರ್‌, ‘ಇಂತಹ ಬದಲಾವಣೆಗೆ ವಿವರ ನೀಡಲು ಆಗುವುದಿಲ್ಲ. ವಿಕಾಸವಾದದ ಸಿದ್ಧಾಂತ ಇಲ್ಲದೆ ಒಬ್ಬ ಶಿಕ್ಷಕ, ವಿದ್ಯಾರ್ಥಿಗಳಿಗೆ ಬೋಧಿಸಲು ಹೇಗೆ ಸಾಧ್ಯ? ಪರಿವರ್ತಕ ಕೋಷ್ಟಕ ಇಲ್ಲದೆ ರಸಾಯನ ವಿಜ್ಞಾನ ಇಲ್ಲ’ ಎಂದಿದ್ದಾರೆ. 

ಹೊಸದಾಗಿ ಮುದ್ರಿಸಲಾದ ವಿಜ್ಞಾನ ಪಠ್ಯಪುಸ್ತಕದಲ್ಲಿ ಆವರ್ತಕ ಕೋಷ್ಟಕವನ್ನು ತೆಗೆದುಹಾಕಲಾಗಿದೆ. ಇದರಡಿ ಬರುವ ಪರಿಸರ ಸುಸ್ಥಿರತೆ ಹಾಗೂ ಇಂಧನ ಮೂಲಗಳು ಅಧ್ಯಾಯಗಳನ್ನು ಕೈಬಿಡಲಾಗಿದೆ. ವಿದ್ಯುತ್‌ ಮತ್ತು ಕಾಂತೀಯತೆಗೆ ವಿಜ್ಞಾನಿ ಮೈಕಲ್‌ ಫ್ಯಾರಡೆ ಸಲ್ಲಿಸಿದ ಕೊಡುಗೆಯ ಅಧ್ಯಯನದಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ.

ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಪ್ರಜಾಪ್ರಭುತ್ವ ರಾಜಕೀಯ–1ರಡಿ ಬರುವ ಮಹತ್ವದ ಸಂಘರ್ಷಗಳು ಮತ್ತು ಚಳವಳಿಗಳು, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳನ್ನೂ ಕೈಬಿಡಲಾಗಿದೆ.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಡಿಜಿಟಲ್ ಕಲಿಕೆಯ ಮಹತ್ವದ ಅರಿವಾಗಿದೆ. ಪಠ್ಯಪುಸ್ತಕದಲ್ಲಿದ್ದ ಕಷ್ಟಕರ, ಪುನರಾವರ್ತಿತ ಹಾಗೂ ಅನಗತ್ಯ ಅಂಶಗಳನ್ನು ಕೈಬಿಡಲಾಗಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.

11 ಮತ್ತು 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಈ ವಿಷಯಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡು ಕಲಿಯುವ ಅವಕಾಶವಿದೆ. ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ರಸಾಯನ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಆವರ್ತಕ ಕೋಷ್ಟಕ ಕಲಿಯುವ ಅವಕಾಶವಿದೆ ಎಂದು ವಿವರಿಸಿದೆ.

ಈ ವರ್ಷದ ಆರಂಭದಲ್ಲಿ ಚಾರ್ಲ್ಸ್‌ ಡಾರ್ವಿನ್‌ನ ವಿಕಾಸವಾದ ಸಿದ್ಧಾಂತದ ಅಧ್ಯಾಯವನ್ನು ಹತ್ತನೇ ತರಗತಿ ಪುಠ್ಯಪುಸ್ತಕದಿಂದ ತೆಗೆದುಹಾಕಲಾಗಿತ್ತು. ಇದಕ್ಕೆ ವಿಜ್ಞಾನಿಗಳು, ವಿಜ್ಞಾನ ಶಿಕ್ಷಕರು, ಪ್ರಾಧ್ಯಾಪಕರು ಸೇರಿದಂತೆ 1800ಕ್ಕೂ ಹೆಚ್ಚು ಮಂದಿ ಎನ್‌ಸಿಇಆರ್‌ಟಿಗೆ ಬಹಿರಂಗವಾಗಿ ಪತ್ರ ಬರೆದು ವಿರೋಧಿಸಿದ್ದರು. 

ಸಚಿವರ ಸಮರ್ಥನೆ

‘ಕೋವಿಡ್‌ ಸಂದರ್ಭದಲ್ಲಿನ ಶೈಕ್ಷಣಿಕ ಸ್ಥಿತಿ ಆಧರಿಸಿ ಪಠ್ಯ ತರ್ಕಬದ್ಧಗೊಳಿಸುವಿಕೆಯ ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆ ಕಡಿಮೆ ಮಾಡುವ ಆಶಯವೂ ಇದರ ಹಿಂದಿದೆ’ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್‌ ಸರ್ಕಾರ್‌ ಸಮರ್ಥಿಸಿಕೊಂಡಿದ್ದಾರೆ.

ವಿಕಾಸವಾದ ಸಿದ್ಧಾಂತವು ಎಲ್ಲಾ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಅಧ್ಯಯನ ಮಾಡಬಹುದು. 12ನೇ ತರಗತಿಯ ಪಠ್ಯಪುಸ್ತಕದಲ್ಲೂ ವಿಕಾಸವಾದ ಸಿದ್ಧಾಂತದ ಪಠ್ಯವಿದೆ. ಸರ್ಕಾರ ವಿದ್ಯಾರ್ಥಿಗಳ ಮೇಲೆ ಯಾವುದೇ ಸಿದ್ಧಾಂತ ಹೇರುವ ಪ್ರಯತ್ನ ಮಾಡುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಎನ್‌ಇಪಿ ಜಾರಿಗೆ ಆರೆಸ್ಸೆಸ್‌ ಪಟ್ಟು

ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಶಿಫಾರಸುಗಳ ಅನ್ವಯ ಪಠ್ಯಕ್ರಮಗಳನ್ನು ಬದಲಾಯಿಸಲಾಗುತ್ತಿದೆ ಎಂದು ಮಂಡಳಿ ಹೇಳಿದೆ. ಮತ್ತೊಂಡೆದೆ ‌‌ದೇಶದ ಎಲ್ಲಾ ಶಾಲೆಗಳಲ್ಲಿ ಎನ್‌ಇಪಿ ಜಾರಿಗೊಳಿಸಬೇಕು ಎಂದು ಆರೆಸ್ಸೆಸ್‌ ಈಗಾಗಲೇ ಕೇಂದ್ರದ ಮೇಲೆ ಒತ್ತಡ ಹೇರಿದೆ.

ಎನ್‌ಸಿಇಆರ್‌ಟಿಯ ಈ ಕ್ರಮಕ್ಕೆ ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಬೆಂಬಲ ನೀಡಿದೆ. ಇದರ ರಾಷ್ಟ್ರೀಯ ಕಾರ್ಯದರ್ಶಿ ಅತುಲ್‌ ಕೊಥಾರಿ ಮಾತನಾಡಿ, ‘ಬಿಜೆಪಿ ಸಂಸದ ವಿನಯ್‌ ಸಹಸ್ರಬುದ್ಧೆ ನೇತೃತ್ವದ ಸಮಿತಿಯ ಶಿಫಾರಸುಗಳ ಅನ್ವಯ ಪಠ್ಯಪುಸ್ತಕಗಳಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ವಿಷಯಗಳನ್ನು ಒಪ್ಪಲು ಸಾಧ್ಯವಿಲ್ಲ. ಇತ್ತೀಚೆಗೆ ಖಾಲಿಸ್ತಾನ ಪದ ಕೈಬಿಟ್ಟಿದ್ದು ಇದಕ್ಕೆ ನಿದರ್ಶನ ಎಂದರು.

2022ರ ವಿಜಯದಶಮಿ ಆಚರಣೆ ಸಮಾರಂಭದ ಭಾಷಣದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ‘ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶಭಕ್ತಿಯ ಸ್ಫೂರ್ತಿ ಪಡೆಯಲು ಎನ್‌ಇಪಿ ಸಹಕಾರಿಯಾಗಿದೆ ಎಂದು ಪ್ರತಿಪಾದಿಸಿದ್ದರು.

ಪಠ್ಯದಿಂದ ಕೈಬಿಟ್ಟ ವಿಷಯಗಳು

6ನೇ ತರಗತಿ
ಗಣಿತ: ಮೂಲ ಜ್ಯಾಮಿತೀಯ ಕಲ್ಪನೆಗಳು ಅಧ್ಯಾಯದಿಂದ ತ್ರಿಕೋನಗಳು ಮತ್ತು ಚತುರ್ಭುಜಗಳು  
ವಿಜ್ಞಾನ: ಆಹಾರದ ಮೂಲ ಯಾವುದು?
ವಿಜ್ಞಾನ ಮತ್ತು ರಾಜ್ಯಶಾಸ್ತ್ರ: ಪ್ರಜಾಸತ್ತಾತ್ಮಕ ಸರ್ಕಾರದ ಮೂಲಾಂಶಗಳು

7ನೇ ತರಗತಿ
ವಿಜ್ಞಾನ: ಹವಾಮಾನ ಅಧ್ಯಾಯದಿಂದ ಪ್ರಾಣಿಗಳ ಹವಾಮಾನ ಹೊಂದಾಣಿಕೆ, ಗಾಳಿ, ಬಿರುಗಾಳಿ ಮತ್ತು ಚಂಡಮಾರುತ, ಮಣ್ಣು, ನೀರು ಅಮೂಲ್ಯ ಸಂಪತ್ತು
ನಮ್ಮ ಪರಿಸರ: ಪ್ರಾಕೃತಿಕ ಸಸ್ಯ‌ವರ್ಗ ಮತ್ತು ವನ್ಯಜೀವಿಗಳು

8ನೇ ತರಗತಿ
ಸಂಪನ್ಮೂಲ ಮತ್ತು ಅಭಿವೃದ್ಧಿ: ಖನಿಜಗಳು ಮತ್ತು ವಿದ್ಯುತ್‌ ಸಂಪನ್ಮೂಲ, ಹತ್ತಿ ಬಟ್ಟೆ ಕೈಗಾರಿಕೆ
ವಿಜ್ಞಾನ ಮತ್ತು ರಾಜ್ಯಶಾಸ್ತ್ರ: ಭಾರತದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಅಧ್ಯಯನ
ಭಾಗ 2: ಸ್ವಾತಂತ್ರ್ಯದ ನಂತರ ಭಾರತ

9ನೇ ತರಗತಿ
ಸಮಕಾಲೀನ ಭಾರತ 1: ಹವಾಮಾನ ಅಧ್ಯಾಯದಿಂದ ಭಾರತದ ಮಾನ್ಸೂನ್‌ ಮತ್ತು ಮಾನ್ಸೂನ್‌ ಆರಂಭ
ಜನಸಂಖ್ಯಾ ಅಧ್ಯಾಯದಿಂದ ಜನಸಂಖ್ಯೆ, ಲಿಂಗಾನುಪಾತ, ಸರಾಸರಿ ಸಾಕ್ಷರತೆ, ಆರೋಗ್ಯ, ಎನ್‌ಪಿಪಿ 2000 ಮತ್ತು ಹದಿಹರೆಯದವರು 

10ನೇ ತರಗತಿ
ಗಣಿತ: ತ್ರಿಕೋನಗಳು ಅಧ್ಯಾಯದಿಂದ ಪೈಥಾಗರಸ್‌ ಥಿಯರಿ
ವಿಜ್ಞಾನ: ಶಕ್ತಿಯ ಮೂಲಗಳು ಮತ್ತು ಪ್ರಾಕೃತಿಕ ಸಂಪನ್ಮೂಲದ ಸುಸ್ಥಿರ ನಿರ್ವಹಣೆ

11ನೇ ತರಗತಿ 
ರಸಾಯನ ವಿಜ್ಞಾನ
ಸ್ಟೇಟಸ್ ಆಫ್‌ ಮ್ಯಾಟರ್ ಅಧ್ಯಾಯದಿಂದ ಗ್ಯಾಸ್‌ ಮತ್ತು ಲಿಕ್ವಿಡ್ಸ್‌, ಹೈಡ್ರೋಜನ್‌, ಪಿ–ಬ್ಲಾಕ್‌ ಎಲಿಮೆಂಟ್‌, ಪರಿಸರ ರಸಾಯನ ವಿಜ್ಞಾನಭಾರತೀಯ ಆರ್ಥಿಕ ಅಭಿವೃದ್ಧಿ: ಬಡತನ ಮತ್ತು ಮೂಲ ಸೌಕರ್ಯ
ವಿಶ್ವ ಇತಿಹಾಸ: ಸೆಂಟ್ರಲ್‌ ಇಸ್ಲಾಮಿಕ್ ಲ್ಯಾಂಡ್‌ ಮತ್ತು ಕೈಗಾರಿಕಾ ಕ್ರಾಂತಿ

11ನೇ ತರಗತಿ
ರಾಜರ ಕಾಲಾನುಕ್ರಮ: ಮೊಘಲ್‌ ನ್ಯಾಯ ಪದ್ಧತಿ (16ರಿಂದ 17ನೇ ಶತಮಾನ)

12ನೇ ತರಗತಿ
ಜೀವಶಾಸ್ತ್ರ: ಜೀವಿಗಳ ಸಂತಾನೋತ್ಪತ್ತಿ
ಸಮಕಾಲೀನ ವಿಶ್ವ ರಾಜಕೀಯ: ಶಿಥಲ ಸಮರ ಮತ್ತು ವಿಶ್ವ ರಾಜಕೀಯದ ಮೇಲೆ ಅಮೆರಿಕದ ಪ್ರಾಬಲ್ಯ
ಥೀಮ್ಸ್‌ ಇನ್‌ ಇಂಡಿಯನ್‌ ಹಿಸ್ಟರಿ–ಭಾಗ 2: ‌ವಿಭಜನೆಯ ಅರ್ಥೈಸುವಿಕೆ ಅಧ್ಯಾಯದಿಂದ ‌ರಾಜಕೀಯ, ಸ್ಮರಣೆ ಮತ್ತು ಅನುಭವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT