ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಕ್ಕಟ್ಟು ನಿವಾರಿಸಲು ಸಿ.ಎಂ ಜತೆ ಚರ್ಚಿಸಿ: ರಾಜ್ಯಪಾಲರಿಗೆ ಸುಪ್ರೀಂಕೋರ್ಟ್‌

ತಮಿಳುನಾಡು ಮಸೂದೆಗಳ ಕುರಿತ ವಿವಾದ
Published 1 ಡಿಸೆಂಬರ್ 2023, 16:09 IST
Last Updated 1 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ನವದೆಹಲಿ:  ರಾಜ್ಯಪಾಲರ ಕಚೇರಿಯಿಂದ ವಾಪಸ್‌ ಕಳುಹಿಸಿದ ಮಸೂದೆಗಳನ್ನು ವಿಧಾನಸಭೆಯು ಮರು ಅಂಗೀಕರಿಸಿ ಕಳುಹಿಸಿದ ಬಳಿಕ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

ಮಸೂದೆಗಳಿಗೆ ಅಂಕಿತ ನೀಡಲು ರಾಜ್ಯಪಾಲ ರವಿ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು  ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್‌ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. 

ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು, ಸರ್ಕಾರ ಮತ್ತೊಮ್ಮೆ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿ ಪರಿಗಣನೆಗಾಗಿ ರಾಜ್ಯಪಾಲರು ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಆಗ ಸಂವಿಧಾನದ 200ನೇ ವಿಧಿಯನ್ನು ಪ್ರಸ್ತಾಪಿಸಿದ ಪೀಠವು,  ರಾಜ್ಯಪಾಲರ ಕಚೇರಿಯಿಂದ ವಾಪಸ್‌ ಕಳುಹಿಸಿದ ಮಸೂದೆಗಳನ್ನು ವಿಧಾನಸಭೆಯು ಮರು ಅಂಗೀಕರಿಸಿ ಕಳುಹಿಸಿದ ನಂತರ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಬರುವುದಿಲ್ಲ ಎಂದು ಹೇಳಿತು.

 ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಇರುವುದರಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ರಾಜ್ಯಪಾಲ ಆರ್‌.ಎನ್‌. ರವಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು ಎಂದು ಪೀಠ ಸೂಚಿಸಿತು.

‘ಬಿಕ್ಕಟ್ಟನ್ನು ರಾಜ್ಯಪಾಲರು ಬಗೆಹರಿಸಬೇಕು ಎಂದು ನಾವು ಬಯಸುತ್ತೇವೆ. ರಾಜ್ಯಪಾಲರು ಮುಖ್ಯಮಂತ್ರಿ ಜತೆ ಮಾತನಾಡಿ, ಬಿಕ್ಕಟ್ಟನ್ನು ಪರಿಹರಿಸಿಕೊಂಡರೆ ನಾವು ಅದನ್ನು ಶ್ಲಾಘಿಸುತ್ತೇವೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ಮಾತುಕತೆಗೆ ಆಹ್ವಾನಿಸಿ ಚರ್ಚೆ ನಡೆಸಲಿ’ ಎಂದು ಹೇಳಿತು. ಅರ್ಜಿ ವಿಚಾರಣೆಯನ್ನು ಇದೇ ತಿಂಗಳ 11ಕ್ಕೆ ನಿಗದಿಪಡಿಸಿತು.

ಇದಕ್ಕೂ ಮುನ್ನ ಪೀಠವು,  ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿರುವ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿತು. ಅಹವಾಲುಗಳೊಂದಿಗೆ ಕಕ್ಷಿದಾರರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವವರೆಗೆ ರಾಜ್ಯಪಾಲರು ಏಕೆ ಕಾಯಬೇಕು ಎಂದೂ ಪ್ರಶ್ನಿಸಿತು.

ಮಸೂದೆಗಳು 2020ರ ಜನವರಿಯಿಂದ ಅಂಕಿತಕ್ಕೆ ಬಾಕಿ ಇವೆ ಎಂದರೆ, ರಾಜ್ಯಪಾಲರು ಮೂರು ವರ್ಷಗಳವರೆಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT