ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಅಥವಾ ಭಾರತ ಎಂದು ಕರೆಯಲು ಪ್ರಜೆಗಳಿಗೆ ಮುಕ್ತ ಅವಕಾಶ: ಸುಪ್ರೀಂ ಕೋರ್ಟ್‌

Published 5 ಸೆಪ್ಟೆಂಬರ್ 2023, 15:50 IST
Last Updated 5 ಸೆಪ್ಟೆಂಬರ್ 2023, 15:50 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯರು ಸ್ವಇಚ್ಛೆಗೆ ಅನುಸಾರವಾಗಿ ದೇಶವನ್ನು ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶ ಹೊಂದಿದ್ದಾರೆ’ ಎಂದು 2016ರಲ್ಲಿಯೇ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದೆ.

ಇಂಡಿಯಾವನ್ನು ‘ಭಾರತ’ ಎಂದು ಕರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹಾರಾಷ್ಟ್ರದ ನಿರಂಜನ್ ಭಟ್ವಾಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿತ್ತು.

‘ಭಾರತ ಅಥವಾ ಇಂಡಿಯಾ? ನೀವು ಭಾರತ ಎಂದು ಪರಿಗಣಿಸಿದರೆ ಹಾಗೆಂದು ಕರೆಯಲು ಅಡ್ಡಿಯಿಲ್ಲ. ಬೇರೆಯವರು ಇಂಡಿಯಾ ಎಂದು ಸಂಬೋಧಿಸಲು ಇಚ್ಛಿಸಿದರೆ ಅವರಿಗೆ ಅಡ್ಡಿಪಡಿಸಬಾರದು’ ಎಂದು ಹೇಳಿದ್ದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್‌. ಠಾಕೂರ್‌ ಹಾಗೂ ನ್ಯಾಯಮೂರ್ತಿ ಯು.ಯು. ಲಲಿತ್‌ (ಈಗ ಇಬ್ಬರು ನಿವೃತ್ತರಾಗಿದ್ದಾರೆ) ಅವರಿದ್ದ ವಿಭಾಗೀಯ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಿತ್ತು.

2015ರ ನವೆಂಬರ್‌ನಲ್ಲಿ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್‌, ‘ದೇಶವನ್ನು ಇಂಡಿಯಾ ಬದಲಾಗಿ ‘ಭಾರತ’ ಎಂದು ಕರೆಯಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿತ್ತು.  

‘ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿದೆ’ ಎಂದು ಸಂವಿಧಾನದ 1ನೇ ವಿಧಿಯಲ್ಲಿ ಹೇಳಲಾಗಿದೆ. ಈ ವಿಧಿಯನ್ನು ಬದಲಾವಣೆಯ ಸಂದರ್ಭ ಎದುರಾಗಿಲ್ಲ’ ಎಂದು ಹೇಳಿತ್ತು. 

ಅಲ್ಲದೇ, ಈ ಪಿಐಎಲ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯವು, ‘ಸಂವಿಧಾನದ ಕರಡು ಸಿದ್ಧಪಡಿಸುವ ವೇಳೆ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ದೇಶದ ಹೆಸರಿಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಚರ್ಚಿಸಲಾಗಿದೆ. ಸಂವಿಧಾನದ 1ನೇ ವಿಧಿಯಡಿ ಸರ್ವಾನುಮತದಿಂದ ಈ ಅಂಶವನ್ನು ಸೇರಿಸಲಾಗಿದೆ’ ಎಂದು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿತ್ತು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ‘ಪಿಐಎಲ್‌ ಬಡವರ ಪರವಾಗಿರಬೇಕು. ನೀವು ನಮಗೆ ಬೇರೆ ಯಾವುದೇ ಕೆಲಸ ಇಲ್ಲವೆಂದು ಭಾವಿಸಿದಂತಿದೆ’ ಎಂದು ಅರ್ಜಿದಾರರಿಗೆ ಚಾಟಿ ಬೀಸಿತ್ತು.

ಎನ್‌ಜಿಒಗಳು ಮತ್ತು ಕಾರ್ಪೊರೇಟ್‌ ಕಂಪನಿಗಳ ಎಲ್ಲಾ ಅಧಿಕೃತ ಹಾಗೂ ಅಧಿಕಾರಯುತವಲ್ಲದ ಉದ್ದೇಶಗಳಿಗೆ ಭಾರತ ಎಂದು ಬಳಸಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ದೇಶಕ್ಕೆ ಹೆಸರು ಸೂಚಿಸುವುದಕ್ಕೆ ಸಂಬಂಧಿಸಿದಂತೆ ಸಂವಿಧಾನ ರಚನಾ ಸಭೆಯ ಮುಂದೆ ಹಲವು ಸಲಹೆಗಳು ಸಲ್ಲಿಕೆಯಾಗಿದ್ದವು. ‘ಭಾರತ, ಹಿಂದೂಸ್ತಾನ, ಹಿಂದ್‌ ಮತ್ತು ಭರತಭೂಮಿ ಅಥವಾ ಭರತವರ್ಷ ಸೇರಿದಂತೆ ಹಲವು ಹೆಸರುಗಳನ್ನು ಪರಿಗಣಿಸುವಂತೆ ಸಲಹೆ ನೀಡಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT