ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಐಸಿ ಮೂಲಧನ ವಿನಿಯೋಗಿಸದಿರುವುದು ಅನೈತಿಕ’

ಸಂಸದೀಯ ಸ್ಥಾಯಿ ಸಮಿತಿ ಕಟು ಟೀಕೆ
Last Updated 5 ಆಗಸ್ಟ್ 2018, 18:27 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ನೌಕರರ ವೈದ್ಯಕೀಯ ಅವಶ್ಯಕತೆಗಳಿಗೆ ವಿನಿಯೋಗಿಸಬೇಕಾದ ಮೂಲ ನಿಧಿಯಲ್ಲಿ (ಕಾರ್ಪಸ್‌ ಫಂಡ್‌) ₹73,303 ಕೋಟಿಯನ್ನು ವಿನಿಯೋಗಿಸದೇ ಕೂಡಿಟ್ಟುಕೊಂಡಿರುವುದು ‘ಅಕ್ರಮ ಮತ್ತು ಅನೈತಿಕ’ ಎಂದು ಸಂಸದೀಯ ಸ್ಥಾಯಿ ಸಮಿತಿ ಕಟುವಾಗಿ ಟೀಕಿಸಿದೆ.

ಕಾರ್ಮಿಕರ ವೈದ್ಯಕೀಯ ಸೌಲಭ್ಯಕ್ಕಾಗಿ ಕಾರ್ಮಿಕರು ಮತ್ತು ಉದ್ಯೋಗದಾತರು ಇಎಸ್ಐಸಿಗೆ ಒಂದಿಷ್ಟು ಹಣ ತುಂಬುತ್ತಾರೆ. ಆದರೆ, ಹೀಗೆ ಸಂಗ್ರಹಿಸಲ್ಪಡುವ ಹಣದಲ್ಲಿ ಅರ್ಧದಷ್ಟು ಮಾತ್ರ ವಿನಿಯೋಗವಾಗುತ್ತಿದೆ. ವಿಮಾದಾರ ನೌಕರರು ಈ ಸೌಲಭ್ಯದ ಅರಿವಿನ ಕೊರತೆ ಮತ್ತು ಆಸ್ಪತ್ರೆಗಳ ಕಳಪೆ ಕಾರ್ಯನಿರ್ವಹಣೆಯಿಂದಾಗಿ ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ ಎಂದು ಸಮಿತಿಯು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿರುವ ವರದಿಯಲ್ಲಿ ಹೇಳಿದೆ.

ವೈದ್ಯಕೀಯ ವೆಚ್ಚಕ್ಕಾಗಿ ಇಎಸ್‌ಐಸಿ ಕಾರ್ಮಿಕರು ಮತ್ತು ಉದ್ಯೋಗಿಗಳ ಮೇಲೆ ಹೆಚ್ಚು ಸೆಸ್ ವಿಧಿಸಲಾಗುತ್ತಿದೆ. ನೌಕರರು ಮತ್ತು ಉದ್ಯೋಗದಾತರಿಂದ ಪ್ರಸ್ತುತ ಕ್ರಮವಾಗಿ ಶೇ 1.75 ಮತ್ತು ಶೇ 4.75 ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

‘ವೈದ್ಯಕೀಯ ಸೌಲಭ್ಯ ಒದಗಿಸಲು ಇಎಸ್ಐಸಿ ನೌಕರರು ಮತ್ತು ಉದ್ಯೋಗದಾತರಿಂದ ಕಡ್ಡಾಯವಾಗಿ ಹಣ ಸಂಗ್ರಹಿಸುತ್ತಿದೆ. ಆದರೆ, ಈ ಹಣವನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಖರ್ಚು ಮಾಡಿಲ್ಲ. ಇದು ಶಾಸಕಾಂಗದ ಉದ್ದೇಶಕ್ಕೆ ವಿರುದ್ಧವಾಗಿದೆ’ ಎಂದು ಬಿಜೆಪಿ ಸಂಸದ ಕಿರಿ ಸೋಮಯ್ಯ ನೇತೃತ್ವದ ಸಮಿತಿ ತಿಳಿಸಿದೆ.

2016-17ರ ಮಾರ್ಚ್ ವೇಳೆಗೆ ಕಾರ್ಪಸ್‌ ಫಂಡ್‌ ₹59,383 ಕೋಟಿಗೆ ಸಂಗ್ರಹವಾಗಿತ್ತು. ಈಗ ಕೇವಲ ಒಂದು ವರ್ಷದಲ್ಲಿ ₹13,920 ಕೋಟಿ ಹೆಚ್ಚಿಗೆ ಸಂಗ್ರಹವಾಗಿದೆ. 2012ರಿಂದ 2017ರವರೆಗೆ ಬಡ್ಡಿಯೇ ₹19,993.74 ಕೋಟಿ ಆಗಿದೆ. ವರ್ಷದಿಂದ ವರ್ಷಕ್ಕೆ ಮೂಲ ನಿಧಿ ಹೆಚ್ಚು ಸಂಗ್ರಹವಾಗುತ್ತಿದೆ. ಆದರೆ, ವಿನಿಯೋಗ ಮಾತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಇಎಸ್ಐಸಿ ದೇಶದಾದ್ಯಂತ 154 ಇಎಸ್ಐ ಆಸ್ಪತ್ರೆಗಳು ಮತ್ತು 1,485 ಔಷಧಾಲಯಗಳನ್ನು ಹೊಂದಿದೆ. 3.19 ಕೋಟಿ ವಿಮೆದಾರ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡುತ್ತಿದೆ. ಇಎಸ್ಐ ಕಾಯ್ದೆ ಪ್ರಕಾರ ಹತ್ತು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಕಾರ್ಖಾನೆಗಳಿಗೆ ವೈದ್ಯಕೀಯ ಸೌಲಭ್ಯ ಅನ್ವಯವಾಗುತ್ತದೆ. ವಾಣಿಜ್ಯ, ಕೃಷಿ ಅಥವಾ ಇತರ ಉದ್ಯಮಗಳಿಗೂ ಈ ಸೌಲಭ್ಯ ವಿಸ್ತರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT