ಮುಂಬೈ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿರುವುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ವಾಗತಿಸಿದ್ದು, ‘ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಎಲ್ಲರನ್ನೂ ಒಳಗೊಳ್ಳುತ್ತದೆ’ ಎಂದು ಹೇಳಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಅಮೃತ ಕಾಲದ ಜತೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹತ್ವದ ಮಸೂದೆ ಅಂಗೀಕಾರವಾಗಿರುವುದನ್ನು ಸ್ವಾಗತಿಸಿ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂಕ್ಷಿಪ್ತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಮಹಿಳಾ ಸಬಲೀಕರಣ ಮತ್ತು ಸಮಾನ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ‘ನಾರಿ ಶಕ್ತಿ ವಂದನ್ ಅಧಿನಿಯಮ 2023’ ಅನ್ನು ಅಂಗೀಕರಿಸುವ ಮೂಲಕ ಭಾರತದ ಸಂಸತ್ತು ಹೊಸ ಇತಿಹಾಸ ಸೃಷ್ಟಿಸಿದೆ. ಮಹತ್ವದ ಈ ನಿರ್ಧಾರವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ. ಅಲ್ಲದೆ, ಹೆಚ್ಚು ಒಳಗೊಳ್ಳುವಂತೆ ಮಾಡುತ್ತದೆ’ ಎಂದು ಈ ಇಬ್ಬರೂ ನಾಯಕರು ಜಂಟಿ ಹೇಳಿಯಲ್ಲಿ ತಿಳಿಸಿದ್ದಾರೆ.
‘ಆರ್‌ಎಸ್ಎಸ್ ಇದನ್ನು ಸ್ವಾಗತಾರ್ಹ ಮತ್ತು ಶ್ಲಾಘನೀಯ ಹೆಜ್ಜೆ ಎಂದೇ ಪರಿಗಣಿಸುತ್ತದೆ. ಮಹಿಳೆಯರ ಸಹಭಾಗಿತ್ವವು ದೇಶದ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ನೀಡುವ ವಿಶ್ವಾಸ ನಮಗಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.