ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಗೆ ಮಹಿಳೆ: ಸೆಕ್ಷನ್‌ 144 ಜಾರಿ, ವಿಮಾನ ನಿಲ್ದಾಣದಲ್ಲೇ ಉಳಿದ ದೇಸಾಯಿ

Last Updated 16 ನವೆಂಬರ್ 2018, 7:59 IST
ಅಕ್ಷರ ಗಾತ್ರ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಶುಕ್ರವಾರ ಸಂಜೆ ತೆರೆಯಲಿರುವ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆಯಾಗಿ ನಿಲಕ್ಕಳ್‌, ಪಂಬಾ ಹಾಗೂ ಸನ್ನಿಧಾನಂ ಪಟ್ಟಣಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ಅಪರಾಧ ಪ್ರಕ್ರಿಯೆ ಸಂಹಿತೆ(ಸಿಪಿಸಿ) ಪ್ರಕಾರ ನಾಲ್ಕಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

ದೇಗುಲ ಪ್ರವೇಶಿಸುವ ಸಲುವಾಗಿ ಸಾಮಾಜಿಕ ಹೋರಾಟಗಾರ್ತಿ ಹಾಗು ಭೂಮಾತಾ ಸಂಘಟನೆಯ ಸಂಸ್ಥಾಪಕಿ ತೃಪ್ತಿ ದೇಸಾಯಿ ಶುಕ್ರವಾರ ಬೆಳಿಗ್ಗೆಯೇ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.ದೇಸಾಯಿ ಹಾಗೂ ಸಹಚರರು ದೇವಾಲಯ ಪ್ರವೇಶಿಸದಂತೆ ತಡೆಯಲು ಪ್ರತಿಭಟನಾಕಾರರು ವಿಮಾನ ನಿಲ್ದಾಣದ ಬಳಿ ಸೇರಿದ್ದು, ದೇಸಾಯಿ ಅವರು ಇದುವರೆಗೆ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗಿಲ್ಲ.

‘ನಾವು ಬೆಳಿಗ್ಗೆ 4.30ರ ವೇಳೆಗೆ ವಿಮಾನ ನಿಲ್ದಾಣ ತಲುಪಿದೆವು. ಹೊರಗಡೆ ಪ್ರತಿಭಟನೆ ನಡೆಸಲಾಗುತ್ತಿದೆ. 2–3 ಬಾರಿ ಟ್ಯಾಕ್ಸಿ ನೋಂದಣಿ ಮಾಡಿಕೊಂಡೆವು. ಆದರೆ, ಟ್ಯಾಕ್ಸಿ ಚಾಲಕರು ನಮ್ಮನ್ನು ಕರೆದೊಯ್ಯಲು ಹೆದರುತ್ತಿದ್ದಾರೆ. ನಾವು ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರೂ ಹೇಳುತ್ತಿದ್ದಾರೆ’ ಎಂದು ದೇಸಾಯಿ ಹೇಳಿಕೊಂಡಿದ್ದಾರೆ.

‘ಪೊಲೀಸರು ಮತ್ತೊಂದು ದ್ವಾರದ ಮೂಲಕ ನಮ್ಮನ್ನು ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಅಲ್ಲಿಯೂ ಪ್ರತಿಭಟನಾಕಾರರು ಇದ್ದಾರೆ. ಇದರ ಅರ್ಥ ನಾವು ಇಲ್ಲಿಂದ ತೆರಳಿದರೆ ನಾವು ಶಬರಿಮಲೆ ತಲುಪುತ್ತೇವೆ ಎಂದು ಪ್ರತಿಭಟನಾಕಾರರು ಹೆದರಿದ್ದಾರೆ ಎಂತಲೇ? ಅಥವಾ ಅವರು ನಮ್ಮನ್ನು ಹೆದುರಿಸುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.

ದೇವಾಲಯ ಪ್ರವೇಶಿಸದೆ ಹಿಂದಿರುಗುವ ಮಾತೇ ಇಲ್ಲಎಂದು ಹೇಳಿದ್ದ ಅವರ ಮೇಲೆ ಕಟ್ಟೆಚ್ಚರ ಪೊಲೀಸರು ವಹಿಸಿದ್ದಾರೆ.

ಬುಧವಾರವೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ದೇಸಾಯಿ, ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸೂಕ್ತ ರಕ್ಷಣೆ ನೀಡುಂತೆ ಮನವಿ ಮಾಡಿದ್ದರು.

ಎರಡು ತಿಂಗಳ ಅವಧಿಯ ಮಂಡಲ ಮಕರವಿಲಕ್ಕುವಾರ್ಷಿಕ ಯಾತ್ರಾ ಋತು ನವೆಂಬರ್‌ 17ರಿಂದ ಆರಂಭವಾಗಲಿದೆ. ಈ ವೇಳೆ ಯಾತ್ರಿಗಳಿಗೆ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಾಗೂ ಸುಪ್ರೀಂ ತೀರ್ಪಿನ ಸಂಬಂಧ ಒಮ್ಮತ ಮೂಡಿಸುವ ಸಲುವಾಗಿ ಪಿಣರಾಯಿ ವಿಜಯನ್‌ ಅವರು ನವೆಂಬರ್‌ 15ರಂದು ಸರ್ವ ಪಕ್ಷ ಸಭೆ ಕರೆದಿದ್ದರು.ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌(ಯುಡಿಎಫ್‌) ಹಾಗೂ ಬಿಜೆಪಿ ಸಭೆಯಿಂದ ಹೊರನಡೆಯುವುದರೊಂದಿಗೆ ವಿಫಲವಾಗಿತ್ತು.

ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವಂತೆ ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದಾದ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆಗಳು ಜರುಗಿದ್ದವು. ಈ ವೇಳೆ ಒಟ್ಟು 3,505 ಜನರನ್ನು ಬಂಧಿಸಿದ್ದ ಪೊಲೀಸರು, 529 ಜನರ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT