ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ: ಐಎಸ್‌ಎಫ್‌ ಶಾಸಕ ಬಂಧನ, ಕಾಂಗ್ರೆಸ್‌ ನಿಯೋಗಕ್ಕೆ ತಡೆ

ಸಂದೇಶ್‌ಖಾಲಿ ಭೇಟಿಗೆ ಹೊರಟಿದ್ದ ವಿರೋಧ ಪಕ್ಷದ ನಾಯಕರು
Published 27 ಫೆಬ್ರುವರಿ 2024, 15:41 IST
Last Updated 27 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಗ್ರಾಮಕ್ಕೆ ಭೇಟಿ ನೀಡಲು ಹೊರಟಿದ್ದ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್‌) ಶಾಸಕ ನೌಸಾದ್‌ ಸಿದ್ದಿಕ್‌ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದರು.

ಇನ್ನೊಂದೆಡೆ, ಇದೇ ಪ್ರದೇಶಕ್ಕೆ ಹೋರಟಿದ್ದ ರಾಜ್ಯ ಕಾಂಗ್ರೆಸ್‌ ನಾಯಕರ ತಂಡವನ್ನೂ ಪೊಲೀಸರು ತಡೆದಿದ್ದಾರೆ. ಆದರೆ ಎಡಪಕ್ಷಗಳ ಪರ ಬುದ್ಧಿಜೀವಿಗಳ ನಿಯೋಗವು ಸಂದೇಶ್‌ಖಾಲಿ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗಾರ್‌ ಕ್ಷೇತ್ರದ ಶಾಸಕರಾದ ನೌಸಾದ್‌ ಸಿದ್ಧಿಕ್‌ ಅವರನ್ನು ಸೈನ್ಸ್‌ ಸಿಟಿ ಬಳಿ ಬಂಧಿಸಿದ ಪೊಲೀಸರು, ಅವರನ್ನು ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತ ಪೊಲೀಸ್‌ ಪ್ರಧಾನ ಕಚೇರಿಗೆ ಕರೆದೊಯ್ದರು. 

‘ನನ್ನನ್ನು ಏಕೆ ಬಂಧಿಸಲಾಗಿದೆ ಎಂಬುದು ಗೊತ್ತಿಲ್ಲ. ನಾನು ಸಂದೇಶ್‌ಖಾಲಿಯ ಗ್ರಾಮಸ್ಥರನ್ನು ಭೇಟಿ ಮಾಡಲು ಹೊರಟಿದ್ದೆ. ಆದರೆ ಹಲವಾರು ಕಿ.ಮೀ ದೂರದಲ್ಲಿಯೇ  ಬಂಧಿಸಲಾಗಿದೆ. ನಿಷೇಧಾಜ್ಞೆ ಇರುವುದು ಸಂದೇಶ್‌ಖಾಲಿಯಲ್ಲಿ. ಇಲ್ಲಿ ಏಕೆ ನನ್ನನ್ನು ತಡೆದರು’ ಎಂದು ಸಿದ್ದಿಕ್‌ ಪ್ರಶ್ನಿಸಿದರು.

ಟಿಎಂಸಿ ನಾಯಕ ಮತ್ತು ಆತನ ಸಹಚರರ ವಿರುದ್ಧ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪಗಳು ವ್ಯಕ್ತವಾದ ಬಳಿಕ ಸಂದೇಶ್‌ಖಾಲಿಯಲ್ಲಿ ಹಿಂಸಾಚಾರ ಉಂಟಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದ ಆರೋಪದ ಮೇರೆಗೆ ಐಎಸ್ಎಫ್‌ ನಾಯಕಿಯನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು.

‘ಸಂದೇಶ್‌ಖಾಲಿಯ ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಇದೆ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗಲು ಬಿಡುವುದಿಲ್ಲ. ಅದಕ್ಕಾಗಿಯೇ ಮುಂಜಾಗ್ರತಾ ಕ್ರಮವಾಗಿ ಸಿದ್ಧಿಕ್‌ ಅವರನ್ನು ಬಂಧಿಸಲಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ನಿಯೋಗಕ್ಕೆ ತಡೆ:

ಈ ಪ್ರದೇಶಕ್ಕೆ ಭೇಟಿ ನೀಡಲು ಹೊರಟಿದ್ದ ಪಶ್ಚಿಮ ಬಂಗಾಳ ಕಾಂಗ್ರೆಸ್‌ನ ವಕ್ತಾರರಾದ ಸೌಮ್ಯಾ ಐಚ್‌ ರಾಯ್‌ ನೇತೃತ್ವದ ನಿಯೋಗವನ್ನೂ ಪೊಲೀಸರು ತಡೆದರು. ಅವರನ್ನು ನಜತ್‌ ಠಾಣೆಗೆ ಕರೆದೊಯ್ಯವ ಮೊದಲು ಧಮಖಾಲಿಯಲ್ಲಿ ಬಂಧಿಸಲಾಯಿತು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸೌಮ್ಯಾ ಅವರು, ‘ಸರ್ಕಾರ ಅಲ್ಲಿ ಏನನ್ನು ಮರೆ ಮಾರೆಮಾಚುತ್ತಿದೆ? ಸ್ಥಳೀಯರಿಗೆ ಮಾತನಾಡಲು ಏಕೆ ಅವಕಾಶ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು. 

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಕುನಾಲ್‌ ಘೋಷ್‌, ‘ಸಂದೇಶ್‌ಖಾಲಿಯಲ್ಲಿ ಶಾಂತಿ ಸ್ಥಾಪಿಸಲು ಸರ್ಕಾರ ಶ್ರಮಿಸುತ್ತಿದ್ದು, ಸಾಕಷ್ಟು ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಾದ ಸಿಪಿಎಂ, ಬಿಜೆಪಿ, ಐಎಸ್ಎಫ್‌ ಶಾಂತಿ ಕದಡಲು ಪ್ರಯತ್ನಿಸುತ್ತಿವೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT