ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿ ಗಲಭೆ: ಬಂಗಾಳ ಸಿಎಸ್‌ಗೆ ಲೋಕಸಭೆ ಸಚಿವಾಲಯ ನೀಡಿದ್ದ ನೋಟಿಸ್‌ಗೆ ತಡೆ

Published 19 ಫೆಬ್ರುವರಿ 2024, 6:59 IST
Last Updated 19 ಫೆಬ್ರುವರಿ 2024, 6:59 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸಂಸದ ಸುಕಾಂತ ಮಜುಂದರ್‌ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿ.ಜಿ.ಪಿ ಹಾಗೂ ಇತರರಿಗೆ ಲೋಕಸಭೆಯ ಹಕ್ಕುಭಾದ್ಯತಾ ಸಮಿತಿ ನೀಡಿದ್ದ ನೋಟಿಸ್‌ಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಹಿಂಸಾಚಾರ ಪೀಡಿತ ಸಂದೇಶ್‌ಖಾಲಿಗೆ ತೆರಳುವ ವೇಳೆ ಸುಕಾಂತ ಅವರನ್ನು ಪೊಲೀಸರು ತಡೆದಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿ, ಸುಕಾಂತ ಅವರಿಗೆ ಗಾಯಗಳಾಗಿದ್ದವು.

ರಾಜ್ಯ ಸರ್ಕಾರದ ಅಧಿಕಾರಿಗಳ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಆಲಿಸಿದ, ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಅವರಿದ್ದ ಪೀಠ, ಸಚಿವಾಲಯದ ನೋಟಿಸ್‌ಗೆ ತಡೆ ನೀಡಿತು.

ಹಕ್ಕುಭಾದ್ಯತಾ ಸಮಿತಿಯ ಮೊದಲ ಸಭೆಯಾಗಿರುವುದರಿಂದ, ನೋಟಿಸ್‌ಗೆ ತಡೆ ನೀಡುವ ನಿರ್ಧಾರಕ್ಕೆ ಲೋಕಸಭಾ ಸಚಿವಾಲಯದ ಪರ ಹಾಜರಿದ್ದ ವಕೀಲರು ವಿರೋಧ ವ್ಯಕ್ತಪಡಿಸಿದರು.

‘ಅವರ ಮೇಲೆ ಯಾವುದೇ ಆರೋಪ ಹೊರಿಸಲಾಗಿಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ. ಒಮ್ಮೆ ಸಂಸದರು ಸ್ಪೀಕರ್‌ ಅವರಿಗೆ ನೋಟಿಸ್ ನೀಡಿದರೆ, ಅದರಲ್ಲಿ ಏನಾದರೂ ಮಹತ್ವದ್ದು ಇದೆ ಎಂದು ಸ್ಪೀಕರ್‌ಗೆ ಅನಿಸಿದರೆ, ಬಳಿಕ ನೋಟಿಸ್‌ ಜಾರಿ ಮಾಡಲಾಗುತ್ತದೆ’ ಎಂದು ಸಚಿವಾಲಯದ ಪರ ವಕೀಲರು ವಾದಿಸಿದರು.

ಲೋಕಸಭೆ ಸಚಿವಾಲಯ ಹಾಗೂ ಇತರರಿಗೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌, ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಆವರೆಗೆ ಸಚಿವಾಲಯದ ನೋಟಿಸ್‌ಗೆ ತಡೆ ನೀಡಿದೆ.

ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಿಕಾ ಹಾಗೂ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ ಜಾರಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT