ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿ ನೀಡದಂತೆ ಪತಂಜಲಿ ಆಯುರ್ವೇದ್ ಕಂಪನಿಗೆ ಸುಪ್ರೀಂ ಕೋರ್ಟ್‌ ತಾಕೀತು

Published 21 ನವೆಂಬರ್ 2023, 16:02 IST
Last Updated 21 ನವೆಂಬರ್ 2023, 16:02 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಆಯುರ್ವೇದ್ ಕಂಪನಿಯು ತಾನು ತಯಾರಿಸುವ ಔಷಧಗಳು ಹಲವು ಕಾಯಿಲೆಗಳನ್ನು ವಾಸಿ ಮಾಡುತ್ತವೆ ಎಂದು ಹೇಳುವ ಜಾಹೀರಾತುಗಳಲ್ಲಿ ‘ತಪ್ಪು ದಾರಿಗೆ ಎಳೆಯುವ’ ಮತ್ತು ‘ಸತ್ಯಕ್ಕೆ ದೂರವಾದ’ ಸಂದೇಶಗಳು ಇರದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

‘ಪತಂಜಲಿ ಆಯುರ್ವೇದ್ ಕಂಪನಿಯ, ತಪ್ಪುದಾರಿಗೆ ಎಳೆಯುವ ಹಾಗೂ ಸತ್ಯಕ್ಕೆ ದೂರವಾದ ಎಲ್ಲ ಜಾಹೀರಾತುಗಳು ತಕ್ಷಣಕ್ಕೆ ಸ್ಥಗಿತವಾಗಬೇಕು. ಈ ವಿಚಾರವಾಗಿ ಕಂಪನಿಯು ಕಾನೂನು ಉಲ್ಲಂಘಿಸುವುದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸುತ್ತದೆ...’ ಎಂದು ನ್ಯಾಯಮೂರ್ತಿಗಳಾದ ಅಹ್ಸನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ನ್ಯಾಯಪೀಠವು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಲಸಿಕೆ ಅಭಿಯಾನ ಹಾಗೂ ಆಧುನಿಕ ಔಷಧಗಳ ವಿರುದ್ಧ ಬಾಬಾ ರಾಮದೇವ್ ಅವರು ಸುಳ್ಳು ಅಭಿಯಾನ ನಡೆಸಿದ್ದಾರೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2022ರಲ್ಲಿ ಪತಂಜಲಿ ಆಯುರ್ವೇದ್‌ ಕಂಪನಿಗೆ, ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಕೇಂದ್ರ ಆಯುಷ್ ಸಚಿವಾಲಯಕ್ಕೆ ನೋಟಿಸ್ ಜಾರಿಗೆ ಆದೇಶಿಸಿತ್ತು.

ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸುತ್ತದೆ ಎಂದು ಯಾವುದೇ ಉತ್ಪನ್ನದ ವಿಚಾರದಲ್ಲಿ ತಪ್ಪಾಗಿ ಮಾಹಿತಿ ನೀಡಿದರೆ, ಪ್ರತಿ ಉತ್ಪನ್ನಕ್ಕೆ ₹1 ಕೋಟಿಯಷ್ಟು ದಂಡ ವಿಧಿಸುವುದನ್ನು ಪರಿಶೀಲಿಸಬೇಕಾಗಬಹುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ. 

ಔಷಧಗಳ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಸಮಸ್ಯೆಯನ್ನು ನಿವಾರಿಸಲು ಮಾರ್ಗೋಪಾಯ ಹುಡುಕುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ. ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT