ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತದಲ್ಲಿ ನೌಕರ ಸಾವು: ಪರಿಹಾರಕ್ಕೆ ಹಿಂದುಸ್ತಾನ್ ಮೋಟರ್ಸ್ ಹೊಣೆ ಎಂದ ಕೋರ್ಟ್

Published 4 ಸೆಪ್ಟೆಂಬರ್ 2024, 14:36 IST
Last Updated 4 ಸೆಪ್ಟೆಂಬರ್ 2024, 14:36 IST
ಅಕ್ಷರ ಗಾತ್ರ

ನವದೆಹಲಿ: ವಾಹನದ ಪರೀಕ್ಷಾರ್ಥ ಚಾಲನೆಯ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ನೌಕರನೊಬ್ಬ ಮೃತಪಟ್ಟಿದ್ದಕ್ಕೆ ಪರಿಹಾರ ಕೊಡಬೇಕಿರುವುದು ಹಿಂದುಸ್ತಾನ್ ಮೋಟರ್ಸ್ ಪ್ರೈ.ಲಿ. ಕಂಪನಿಯೇ ವಿನಾ ಅದರ ಡೀಲರ್ ಅಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ವಾಹನದ ‘ಮಾಲೀಕ’ ಎಂಬ ಪದದ ಅರ್ಥವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 2(30)ರಲ್ಲಿ ಉಲ್ಲೇಖವಾಗಿರುವ ವರ್ಗಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

‘ಸಂದರ್ಭವೊಂದರಲ್ಲಿ ಅಗತ್ಯವಿದೆ ಎಂದಾದರೆ, ವಾಹನದ ಮೇಲೆ ನಿಯಂತ್ರಣ ಹೊಂದಿರುವ ವ್ಯಕ್ತಿಯನ್ನು ಕೂಡ ಅದರ ಮಾಲೀಕ ಎಂದು ಪರಿಗಣಿಸಲು, ಕರ್ತವ್ಯಲೋಪದಿಂದ ಇತರರಿಗೆ ಉಂಟಾಗುವ ನಷ್ಟಕ್ಕೆ ಆತ ಹೊಣೆಗಾರ, ಆತನೇ ಪರಿಹಾರ ಕೊಡಬೇಕು ಎಂದು ಹೇಳಲು ಅವಕಾಶ ಇದೆ’ ಎಂದು ಪೀಠವು ವಿವರಿಸಿದೆ.

ಮಂಗಳವಾರ ನೀಡಿರುವ ತೀರ್ಪಿನಲ್ಲಿ ಪೀಠವು, ವೈಭವ್ ಮೋಟ‌ರ್‌ನ ಮಾಲೀಕ ವೈಭವ್ ಜೈನ್ ಎನ್ನುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದೆ. ಇವರು ಹಿಂದುಸ್ತಾನ್ ಮೋಟರ್ಸ್‌ನ ಡೀಲರ್ ಮಾತ್ರ ಆಗಿರುವ ಕಾರಣಕ್ಕೆ, ವಾಹನದ ಮಾಲೀಕನ ಸ್ಥಾನದಿಂದ ಪರಿಹಾರ ನೀಡಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.

ವಾಹನವನ್ನು ಡೀಲರ್‌ಗೆ ಮಾರಾಟ ಮಾಡಲಾಗಿತ್ತು. ಹೀಗಾಗಿ, ಪರಿಹಾರ ನೀಡುವ ಹೊಣೆಯು ವಾಹನದ ಚಾಲಕ ಮತ್ತು ಡೀಲರ್‌ ಮೇಲೆ ಮಾತ್ರವೇ ಇರುತ್ತದೆ ಎಂದು ಹಿಂದುಸ್ತಾನ್ ಮೋಟರ್ಸ್ ಕಂಪನಿ ಮಂಡಿಸಿದ್ದ ವಾದವನ್ನು ಪೀಠವು ಒಪ್ಪಿಲ್ಲ. ಅಪಘಾತ ನಡೆದ ಸಂದರ್ಭದಲ್ಲಿ ಚಾಲಕ ಮತ್ತು ಪ್ರಯಾಣಿಕ ಹಿಂದುಸ್ತಾನ್ ಮೋಟರ್ಸ್ ಕಂಪನಿಯ ನೌಕರರಾಗಿದ್ದರು ಎಂದು ಪೀಠ ಹೇಳಿದೆ.

ಅಪಘಾತ ನಡೆದ ಸಂದರ್ಭದಲ್ಲಿ ವಾಹನವು ಹಿಂದುಸ್ತಾನ್ ಮೋಟರ್ಸ್ ಕಂಪನಿಯ ಮಾಲೀಕತ್ವದಲ್ಲಿ ಇತ್ತು. ಅಲ್ಲದೆ, ಅದರ ನೌಕರರೇ ಆ ವಾಹನವನ್ನು ನಿಯಂತ್ರಿಸುತ್ತಿದ್ದರು. ಹೀಗಾಗಿ, ಪರಿಹಾರ ಒದಗಿಸಬೇಕಾದ ಹೊಣೆಯು ಡೀಲರ್‌ ಮೇಲೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT