ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಭಾರತ ಇತಿಹಾಸದ ಅತಿ ದೊಡ್ಡ ಹಗರಣ- ಕಾಂಗ್ರೆಸ್‌

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದೂ ಒತ್ತಿಹೇಳಿದೆ.
Published 16 ಮಾರ್ಚ್ 2024, 14:17 IST
Last Updated 16 ಮಾರ್ಚ್ 2024, 14:17 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ವಿತರಣೆ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ಮುಂದುವರಿಸಿದ್ದು, ‘ಯೋಜನೆಯು ಭಾರತದ ಇತಿಹಾದಲ್ಲಿಯೇ ಅತಿದೊಡ್ಡ ಹಗರಣವಾಗಿದೆ’ ಎಂದು ಶನಿವಾರ ಆರೋಪಿಸಿದೆ. ಹಗರಣದ ಆಳ–ಅಗಲ ಬಹಿರಂಗವಾಗಬೇಕಾದರೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದೂ ಒತ್ತಿಹೇಳಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುಳ್ಳು ಹೇಳುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

‘ವಿರೋಧ ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ₹14,000 ಕೋಟಿ ಪಡೆದಿವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಸರ್ಕಾರ ಅಂಕಿ–ಅಂಶಗಳನ್ನು ತಿರುಚುತ್ತದೆ ಎಂದು ನಮಗೆ ಗೊತ್ತಿದೆ. ವಾಸ್ತವ ಏನೆಂದರೆ, ಬಿಜೆಪಿಯೇತರ ಪಕ್ಷಗಳು ಪಡೆದಿರುವುದು ₹6,000 ಕೋಟಿ ಮಾತ್ರ. ಈ ಪೈಕಿ ₹2,700 ಕೋಟಿ ಬಿಜೆಪಿಯ ‘ಬಿ’ ಟೀಮ್‌ ಅಥವಾ ಎನ್‌ಡಿಎಯ ಮಿತ್ರ ಪಕ್ಷಗಳ ಪಾಲಿಗೆ ಹೋಗಿದೆ’ ಎಂದು ಹೇಳಿದರು.

‘ಬಿಜೆಪಿ ಎಷ್ಟು ದೇಣಿಗೆ ಪಡೆದಿದೆ ಎಂಬುದು ವಿಷಯ ಅಲ್ಲ; ಹೇಗೆ ಪಡೆದಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಪಕ್ಷದ ಭ್ರಷ್ಟಾಚಾರ ಅನಾವರಣವಾಗಿದೆ’ ಎಂದರು.

‘ಶೇ 50ರಷ್ಟು ಚುನಾವಣಾ ಬಾಂಡ್‌ಗಳನ್ನುಬಿಜೆಪಿ ಸ್ವೀಕರಿಸಿದೆ. ಇದೇ ಸಂದರ್ಭದಲ್ಲಿ ಅದು ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳ ಮೇಲೆ ಶೇ 100ರಷ್ಟು ನಿಯಂತ್ರಣ ಹೊಂದಿದೆ. ಜೊತೆಗೆ ರಕ್ಷಣೆ, ಹೆದ್ದಾರಿ, ರೈಲ್ವೆ ಗುತ್ತಿಗೆಗಳ ಮೇಲೂ ನಿಯಂತ್ರಣ ಹೊಂದಿದೆ. ಈ ಸಂಸ್ಥೆಗಳ ಮೂಲಕ  ನಾಲ್ಕು ರೀತಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ. ‘ದೇಣಿಗೆ ನೀಡಿ, ವ್ಯವಹಾರ ಮಾಡಿ’ ಎನ್ನುವುದು ಒಂದು ಬಗೆ. ‘ಹಫ್ತಾ ವಸೂಲಿ’ ಇನ್ನೊಂದು ರೀತಿ. ‘ಲಂಚ ನೀಡಿ ಗುತ್ತಿಗೆ ಪಡೆಯಿರಿ’ ಎಂದು ಒಂದು ಕಡೆ ಹೇಳಿದರೆ, ‘ಶೆಲ್‌ ಕಂಪನಿ’ಗಳ ಮೂಲಕ ಇನ್ನೊಂದೆಡೆ ಭ್ರಷ್ಟ ವ್ಯವಹಾರ ನಡೆಸುತ್ತಿದೆ’ ಎಂದು ವಾಗ್ದಾಳಿ ಮಾಡಿದರು.

‘ಸರ್ಕಾರ ಉರುಳಿಸಲು ಬಳಕೆ’

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ‘ಸರ್ಕಾರಗಳನ್ನು ಉರುಳಿಸಲು ಮತ್ತು ರಾಜಕೀಯ ಪಕ್ಷಗಳನ್ನು ಮುಳುಗಿಸಲು ಸುಲಿಗೆ ದಂಧೆಯನ್ನು ಬಳಸಲಾಗಿತ್ತು’ ಎಂದು ಕಿಡಿಕಾರಿದರು.

ಮಹಾರಾಷ್ಟ್ರದ ಠಾಣೆಯಲ್ಲಿ ಭಾರತ ಜೋಡೊ ನ್ಯಾಯಯಾತ್ರೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚುನಾವಣಾ ಬಾಂಡ್ ಯೋಜನೆಯು ಅಂತರರಾಷ್ಟ್ರೀಯ ಮಟ್ಟದ ಸುಲಿಗೆ ದಂಧೆ. ಯಾರು ಪ್ರತಿಭಟಿಸುತ್ತಾರೋ ಅವರ ಮೇಲೆ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತವೆ’ ಎಂದು ಆರೋಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT