ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍NewsClick ಪ್ರಬೀರ್ ಪುರಕಾಯಸ್ಥ ಬಂಧನ ಸರಿಯಾದ ಕ್ರಮವಲ್ಲ ಎಂದ ಸುಪ್ರೀಂ ಕೋರ್ಟ್‌

Published 15 ಮೇ 2024, 6:30 IST
Last Updated 15 ಮೇ 2024, 6:30 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌ನ ಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಅವರನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಿರುವುದು ಅಸಿಂಧು. ಅವರನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ  ಕೋರ್ಟ್‌ ಬುಧವಾರ ಆದೇಶ ನೀಡಿದೆ.  

ವಶಕ್ಕೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನು ಪುರಕಾಯಸ್ಥ ಅಥವಾ ಅವರ ವಕೀಲರಿಗೆ ಪೊಲೀಸರು ನೀಡಿಲ್ಲ. ವಶಕ್ಕೆ ಪಡೆಯಲು ಇರುವ ಕಾರಣಗಳನ್ನು ಅವರಿಗೆ ತಿಳಿಸಿಲ್ಲ. ಹಾಗಾಗಿ ಅವರ ಬಂಧನ ಮತ್ತು ನಂತರ ವಶಕ್ಕೆ ಪಡೆದಿರುವುದು ಅಸಿಂಧುವಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠ ಹೇಳಿದೆ. 

ವಶಕ್ಕೆ ಕೋರಿ ಸಲ್ಲಿಸಿದ ಅರ್ಜಿಗೆ 2023ರ ಅಕ್ಟೋಬರ್‌ 4ರಂದು ಅನುಮೋದನೆ ದೊರೆಯುತ್ತದೆ. ಆದರೆ, ಅದಕ್ಕೂ ಮೊದಲು ಅರ್ಜಿಯ ಪ್ರತಿಯನ್ನು ಪುರಕಾಯಸ್ಥ ಅವರಿಗೆ ನೀಡಿಲ್ಲ. 

ತಮ್ಮ ಬಂಧನ ಪ್ರಶ್ನಿಸಿ ಪುರಕಾಯಸ್ಥ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌,  ಕಳೆದ ಅಕ್ಟೋಬರ್‌ 13ರಂದು ಅರ್ಜಿಯನ್ನು ವಜಾ ಮಾಡಿ ಆದೇಶ ಕೊಟ್ಟಿತ್ತು. ಈ ಆದೇಶ ಕೂಡ ಈಗ ರದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಕಳೆದ ವರ್ಷ ಅಕ್ಟೋಬರ್‌ 3ರಂದು ಪುರಕಾಯಸ್ಥ ಅವರನ್ನು ಬಂಧಿಸಲಾಗಿತ್ತು.  

‘ಅರ್ಜಿದಾರರು ನ್ಯಾಯಾಲಯಯಕ್ಕೆ ಯಾವುದೇ ಭದ್ರತಾ ಬಾಂಡ್‌ ನೀಡುವ ಅಗತ್ಯ ಇಲ್ಲ. ಆದರೆ, ಈ ಪ್ರಕರಣದಲ್ಲಿ ಆರೋಪಪಟ್ಟಿ ಈಗಾಗಲೇ ಸಲ್ಲಿಕೆ ಆಗಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯ ಸೂಚಿಸುವ ಸುರಕ್ಷಾ ಬಾಂಡ್‌ ನೀಡುವುದು ಸೂಕ್ತ ಎನಿಸುತ್ತದೆ ಎಂದು ಪೀಠವು ಹೇಳಿದೆ. 

ಇಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಪ್ರಕರಣದ ಕುರಿತ ನ್ಯಾಯಾಲಯದ ಅಭಿ‍ಪ್ರಾಯ ಎಂದು ಪರಿಗಣಿಸಬಾರದು. ಸರಿಯಾದ ಪ್ರಕ್ರಿಯೆ ಮೂಲಕ ಬಂಧಿಸುವ ಪೊಲೀಸರ ಅಧಿಕಾರಕ್ಕೆ ಯಾವುದೇ ತಡೆ ಇಲ್ಲ. ಕಾನೂನು ಪ್ರಕಾರ ಇರುವ ಅವಕಾಶಗಳನ್ನು ಪೊಲೀಸರು ಬಳಸಿಕೊಳ್ಳಬಹುದು ಎಂದು ಪೀಠವು ಹೇಳಿದೆ. 

‘ನ್ಯೂಸ್‌ಕ್ಲಿಕ್‌’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿ ಅವರನ್ನು ಕೂಡ ಪುರಕಾಯಸ್ಥ ಜೊತೆ ಬಂಧಿಸಲಾಗಿತ್ತು. ಚಕ್ರವರ್ತಿ ಅವರು ಮಾಫಿ ಸಾಕ್ಷಿ ಆಗುವುದಕ್ಕೆ ದೆಹಲಿಯ ನ್ಯಾಯಾಲಯವು ಒಪ್ಪಿಗೆ ನೀಡಿತ್ತು. 

ಪುರಕಾಯಸ್ಥ ಅವರ ಬಂಧನವನ್ನು ಮಾಧ್ಯಮ ಸಂಘಟನೆಗಳು  ಮತ್ತು ವಿರೋಧ ಪಕ್ಷಗಳು ಖಂಡಿಸಿದ್ದವು. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದಿದ್ದವು. ಆದರೆ, ಆ ಆರೋಪವನ್ನು ಕೇಂದ್ರ ಸರ್ಕಾರವು  ಅಲ್ಲಗಳೆದಿತ್ತು.

ಸಾಕ್ಷ್ಯನಾಶ ಮಾಡುವಂತಿಲ್ಲ: ನ್ಯಾಯಾಲಯ ನಿರ್ದೇಶನ

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಕೂಡದು ಮತ್ತು ಸಾಕ್ಷ್ಯವನ್ನು ನಾಶ ಮಾಡಕೂಡದು ಎಂದು ದೆಹಲಿ ನ್ಯಾಯಾಲಯವು ಪ್ರಬೀರ್‌ ಪುರಕಾಯಸ್ಥ ಅವರಿಗೆ ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ (ಎಎಸ್‌ಜೆ) ಹರದೀಪ್‌ ಕೌರ್‌ ಅವರು ಪುರಕಾಯಸ್ಥ ಅವರ ಬಿಡುಗಡೆಗೆ ಆದೇಶ ಹೊರಡಿಸಿದರು.

ಆದೇಶದಲ್ಲಿ ಅವರು ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಅಥವಾ ಮಾಫಿ ಸಾಕ್ಷಿಯಾಗಿರುವ ಅಮಿತ್‌ ಚಕ್ರವರ್ತಿ ಅವರನ್ನು ಸಂಪರ್ಕಿಸುವಂತಿಲ್ಲ. ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ದೇಶ ಬಿಟ್ಟು ಹೋಗುವಂತಿಲ್ಲ ಎಂದೂ ಸೂಚಿಸಿದ್ದಾರೆ.

ಆರೋಪ ಏನು?

1. ಚೀನಾದ ಪರವಾಗಿ ಪ್ರಚಾರ ಮಾಡಲು ‘ನ್ಯೂಸ್‌ಕ್ಲಿಕ್‌’ ಆ ದೇಶದಿಂದ ಭಾರಿ ಮೊತ್ತದ ಹಣವನ್ನು ಪಡೆದುಕೊಂಡಿದೆ

2. ಭಾರತದ ಸಾರ್ವಬೌಮತೆಯನ್ನು ಹಾಳುಗೆಡವಲು ಸಂಚು ಮಾಡಿದೆ

3. ದೇಶದ ಬಗ್ಗೆ ಜನರಲ್ಲಿ ಆಕ್ರೋಶ ಮೂಡಿಸಲು ಯತ್ನಿಸಿದೆ

4. ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಪೀಪಲ್ಸ್‌ ಅಲಯೆನ್ಸ್‌ ಫಾರ್‌ ಡೆಮಾಕ್ರಸಿ ಆ್ಯಂಡ್‌ ಸೆಕ್ಯುಲರಿಸಂ ಎಂಬ ಸಂಸ್ಥೆಯ ಜೊತೆ ಪುರಕಾಯಸ್ಥ ಸಂಚು ಮಾಡಿದ್ದಾರೆ

ವಶಕ್ಕೆ ಪಡೆಯಲು ಕಾರಣ ಕೊಡಬೇಕು

ಸಂವಿಧಾನದ ವಿಧಿ 22(1)ರ ಪ್ರಕಾರ ಯಾವುದೇ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಯಲ್ಲಿ ಇರಿಸಿಕೊಳ್ಳುವ ಮೊದಲು ಆ ವ್ಯಕ್ತಿಗೆ ಬಂಧನದ ಕಾರಣಗಳನ್ನು ತಿಳಿಸಬೇಕು. ಬಂಧನದ ಕಾರಣಗಳನ್ನು ತಿಳಿಸುವುದು ಕಡ್ಡಾಯ. ಮೌಖಿಕವಾಗಿ ಕಾರಣ ನೀಡಿದರೆ ಸಾಕಾಗುವುದಿಲ್ಲ. ಲಿಖಿತವಾಗಿಯೇ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT