ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಗೆ ಜಾಮೀನು: ತೆಲಂಗಾಣ ಸಿಎಂ ರೇವಂತ ರೆಡ್ಡಿ ಹೇಳಿಕೆಗೆ ಸುಪ್ರೀಂ ಕೋರ್ಟ್ ಕಿಡಿ

Published : 29 ಆಗಸ್ಟ್ 2024, 13:37 IST
Last Updated : 29 ಆಗಸ್ಟ್ 2024, 13:37 IST
ಫಾಲೋ ಮಾಡಿ
Comments

ನವದೆಹಲಿ: ಬಿಆರ್‌ಎಸ್‌ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಕುರಿತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. 

ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್‌ಎಸ್‌ ನಡುವಿನ ಸಂಧಾನ ಕಾರಣವಾಗಿರಬಹುದು ಎಂಬ ರೇವಂತ ರೆಡ್ಡಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ‘ಇಂತಹ ಹೇಳಿಕೆಗಳು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಮೂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿದೆ.

‘ಸುದ್ದಿಪತ್ರಿಕೆಗಳಲ್ಲಿ ಅವರ ಹೇಳಿಕೆ ಓದಿದ್ದೀರಾ? ಒಮ್ಮೆ ಓದಿ. ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಇದೆಂತಹ ಹೇಳಿಕೆ? ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಹೀಗೆ ಮಾತನಾಡುತ್ತಾರಾ’ ಎಂದು ಪ್ರಶ್ನಿಸಿತು.

‘ರಾಜಕೀಯ ವಿರೋಧಗಳಿಗಾಗಿ ಕೋರ್ಟ್‌ ಅನ್ನು ಏಕೆ ಎಳೆಯುತ್ತೀರಿ. ರಾಜಕೀಯ ಪಕ್ಷಗಳ ಜೊತೆ ಚರ್ಚಿಸಿ ನಾವು ಆದೇಶವನ್ನು ನಿಡುತ್ತೇವಾ? ರಾಜಕಾರಣಿಗಳು ಅಥವಾ ಇನ್ಯಾರಾದರೂ ಕೋರ್ಟ್‌ ಆದೇಶಗಳನ್ನು ಟೀಕಿಸಿದರೆ, ಆ ಕುರಿತು ನಾವು ಕೆಡಿಸಿಕೊಳ್ಳುವುದಿಲ್ಲ. ಆತ್ಮಸಾಕ್ಷಿ ಮತ್ತು ಪ್ರತಿಜ್ಞಾವಿಧಿಗೆ ಅನುಸಾರವಾಗಿ ಮಾತ್ರ ಕರ್ತವ್ಯ ನಿಭಾಯಿಸುತ್ತೇವೆ’ ಎಂದು ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಮೂವರು ಸದಸ್ಯರಿದ್ದ ಪೀಠವು ರೇವಂತ ರೆಡ್ಡಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಮುಕುಲ್‌ ರೋಹಟಗಿ ಅವರಿಗೆ ಹೇಳಿತು.

ಶಾಸಕಾಂಗದ ಕೆಲಸಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನಾವು ಯಾವತ್ತೂ ಹೇಳುತ್ತೇವೆ. ನಾವು ಅದನ್ನೇ ನಿರೀಕ್ಷಿಸುತ್ತೇವೆ.
ಪಿ.ಕೆ.ಮಿಶ್ರಾ, ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ

‘ಮನೀಶ್‌ ಸಿಸೋಡಿಯಾ ಅವರಿಗೆ 15 ತಿಂಗಳ ಬಳಿಕ ಸಿಕ್ಕ ಜಾಮೀನು, ಕವಿತಾ ಅವರಿಗೆ ಐದೇ ತಿಂಗಳಲ್ಲಿ ಸಿಕ್ಕಿದೆ. ಈ ಬಗ್ಗೆ ಅನುಮಾನಗಳಿವೆ. ಬಿಆರ್‌ಎಸ್‌ ಮತ್ತು ಬಿಜೆಪಿ ಜೊತೆಗಿನ ಸಂಧಾನದ ಫಲವಾಗಿಯೇ ಈಗ ಜಾಮೀನು ಸಿಕ್ಕಿರಬಹುದು’ ಎಂದು ರೇವಂತ ರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ‍್ರತಿಕ್ರಿಯಿಸಿದ್ದರು.

ಸಂಸ್ಥೆಗಳನ್ನು ಕುರಿತಂತೆ ಪರಸ್ಪರ ಗೌರವವನ್ನು ಹೊಂದುವುದು ಮತ್ತು ನಿರ್ದಿಷ್ಟ ಅಂತರವನ್ನು ಕಾಯ್ದು ಕೊಳ್ಳುವುದು ಮೂಲಭೂತವಾದ ಹೊಣೆಗಾರಿಕೆ ಕರ್ತವ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ರೇವಂತ ರೆಡ್ಡಿ ಅವರು ಆರೋಪಿಯಾಗಿರುವ, ಭೋಪಾಲ್‌ಗೆ ಸಂಬಂಧಿಸಿದ 2015ರ ‘ವೋಟಿಗಾಗಿ ಕಾಸು’ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ವಿಶೇಷ ಪ್ರಾಸಿಕ್ಯೂಟರ್ ಒಬ್ಬರು ನಡೆಸಲಿದ್ದಾರೆ ಎಂದೂ ತಿಳಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT