ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

27 ವಾರಗಳ ಗರ್ಭ ತೆಗೆಸಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌

Published 15 ಮೇ 2024, 13:52 IST
Last Updated 15 ಮೇ 2024, 13:52 IST
ಅಕ್ಷರ ಗಾತ್ರ

ನವದೆಹಲಿ: ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರಿ 27 ವಾರಗಳ ಗರ್ಭಿಣಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಳ್ಳಿಹಾಕಿದೆ. ಗರ್ಭದಲ್ಲಿರುವ ಭ್ರೂಣಕ್ಕೂ ಬದುಕುವ ಮೂಲಭೂತ ಹಕ್ಕು ಇದೆ ಎಂದು ಕೋರ್ಟ್‌ ಈ ವೇಳೆ ಅಭಿಪ್ರಾಯಪಟ್ಟಿದೆ.

ಗರ್ಭಪಾತಕ್ಕೆ ಅನುಮತಿ ಕೋರಿ 20 ವರ್ಷ ವಯಸ್ಸಿನ ಅವಿವಾಹಿತ ಯುವತಿಯು ಮೊದಲಿಗೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೈಕೋರ್ಟ್‌ ಮೇ 3ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಯುವತಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ನೇತೃತ್ವದ ನ್ಯಾಯಪೀಠವು ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತು. ಜೊತೆಗೆ, ಕಾನೂನಿಗೆ ವಿರುದ್ಧವಾಗಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿತು.

ಈ ವೇಳೆ, ವೈದ್ಯಕೀಯ ಗರ್ಭಪಾತ ಕಾಯ್ದೆಯು (ಎಂಟಿಪಿ) ತಾಯಿಯ ಹಕ್ಕಿನ ಕುರಿತಾಗಿದೆ ಎಂದು ಯುವತಿಯ ಪರ ವಕೀಲರು ಪೀಠದೆದುರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಗರ್ಭ ಏಳು ವಾರವನ್ನೂ ಮೀರಿದೆ. ಭ್ರೂಣಕ್ಕೂ ಬದುಕುವ ಹಕ್ಕಿದೆ’ ಎಂದಿತು.

ಇದಕ್ಕೆ, ‘ಭ್ರೂಣವು ತಾಯಿಯ ಗರ್ಭದಲ್ಲಿದೆ. ಪ್ರಸವದವರೆಗೂ ಅದು ತಾಯಿಯ ಹಕ್ಕು. ಯುವತಿಯು ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಆಕೆ ಈಗ ಮಾನಸಿಕವಾಗಿ ಕುಗ್ಗಿಹೋಗಿದ್ದಾಳೆ. ಆಕೆಗೆ ಸಮಾಜವನ್ನು ಎದುರಿಸಲು ಆಗುತ್ತಿಲ್ಲ. ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪರಿಗಣಿಸಬೇಕು’ ಎಂದು ವಕೀಲರು ವಾದಿಸಿದರು. 

ವಕೀಲರ ವಾದವನ್ನು ನ್ಯಾಯಪೀಠ ಪುರಸ್ಕರಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT