ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

Published 29 ಏಪ್ರಿಲ್ 2024, 16:54 IST
Last Updated 29 ಏಪ್ರಿಲ್ 2024, 16:54 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಪಾತ್ರದ ಕುರಿತಂತೆ ಸಿಬಿಐ ತನಿಖೆಗೆ ನಿರ್ದೇಶಿಸಿದ್ದ ಕಲ್ಕತ್ತ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಆದರೆ, 25,000ಕ್ಕೂ ಅಧಿಕ ಮಂದಿ ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿ ನೇಮಕಾತಿಯನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25,753 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದ ಶಾಲಾ ಸೇವಾ ಆಯೋಗದ(ಎಸ್‌ಎಸ್‌ಸಿ) ಪ್ರಕ್ರಿಯೆಯನ್ನು ರದ್ದು ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನೇಮಕಾತಿ ರದ್ದು ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಮೇ 6ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿ ಮಾಡಿದೆ.

‘ರಾಜ್ಯ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ಹೆಚ್ಚಿನ ತನಿಖೆಯನ್ನು ಕೈಗೊಳ್ಳಬಹುದು ಎಂಬ ಹೈಕೋರ್ಟ್ ನಿರ್ದೇಶನವನ್ನು ನಾವು ತಡೆಹಿಡಿಯುತ್ತೇವೆ’ಎಂದು ಪೀಠ ಹೇಳಿದೆ.

25,000 ಜನರ ಉದ್ಯೋಗ ಕಸಿದು ಬೇರೆಯವರಿಗೆ ನೀಡಿರುವುದು ಗಂಭೀರ ವಿಷಯ. ಲಭ್ಯವಿರುವ ಮಾಹಿತಿಗಳನ್ನು ಆಧರಿಸಿ ಮಾನ್ಯ ಮತ್ತು ಅಮಾನ್ಯವಾದ ನೇಮಕಾತಿಗಳನ್ನು ವಿಂಗಡಿಸಲು ಸಾಧ್ಯವೇ ಎಂದು ನ್ಯಾಯಾಲಯ ಕೇಳಿದೆ.

ಅಕ್ರಮ ನೇಮಕಾತಿಗಳಿಗೆ ಅನುವು ಮಾಡಿಕೊಡಲು ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ನೀಡಿದ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ಹೆಚ್ಚುವರಿ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ಹೇಳಿತ್ತು.

ಅಗತ್ಯ ಬಿದ್ದರೆ, ಅಧಿಕಾರಿಗಳನ್ನು ವಶಕ್ಕೆ ಪಡೆದು ಸಹ ವಿಚಾರಣೆ ನಡೆಸಬಹುದು ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT