ನವದೆಹಲಿ: ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ಕಾರ್ಖಾನೆಗಳಿಂದ ಆಗುತ್ತಿರುವ ಪರಿಣಾಮಗಳ ಕುರಿತು ಗಮನಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ನಿರ್ದೇಶಿಸಿತು. ನ್ಯಾಯಮೂರ್ತಿಗಳಾದ ವಿಕ್ರಂನಾಥ್, ಪಿ.ಬಿ.ವರಾಳೆ ಅವರಿದ್ದ ಪೀಠವು ಈ ನಿರ್ದೇಶನ ನೀಡಿತು.
ದೂಳು, ಕಲ್ಮಶ ದೇಹವನ್ನು ಪ್ರವೇಶಿಸಿರುವುದರಿಂದ ಉಂಟಾಗುವ ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿತ ಅನಾರೋಗ್ಯ ಸಮಸ್ಯೆಗಳ ತಡೆಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ನಿರ್ದೇಶನಗಳಿಗೆ ಕೇಂದ್ರ ಮತ್ತು ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳು ಬದ್ಧವಾಗಿರಬೇಕು ಎಂದು ಪೀಠ ಸೂಚಿಸಿತು. ಕಾರ್ಮಿಕರು ಮಾಸ್ಕ್ ಧರಿಸಿರಬೇಕು ಎಂಬುದೂ ಸೇರಿದಂತೆ ಕನಿಷ್ಠ ನಿಯಂತ್ರಣ ಕ್ರಮಗಳನ್ನೂ ಪಾಲಿಸದ ಎಲ್ಲ ಘಟಕಗಳ ವಿರುದ್ದ ಎನ್‌ಜಿಟಿ ಗಮನಹರಿಸಬೇಕು. ಅಲ್ಲದೆ, ಇಂತಹ ಕಾರ್ಖಾನೆಗಳಿಂದ ಉಸಿರಾಟ ಸಂಬಂಧಿ ರೋಗಗಳು ವ್ಯಾಪಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಹಸಿರು ಮಂಡಳಿಗಳು ಕ್ರಮವಹಿಸಬೇಕು ಎಂದು ಸೂಚಿಸಿತು. ಪೀಪಲ್ಸ್ ರೈಟ್ಸ್ ಮತ್ತು ಸೋಷಿಯಲ್ ರೀಸರ್ಚ್ ಸೆಂಟರ್ (ಪ್ರಸಾರ್) ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್ ಈ ಸೂಚನೆಗಳನ್ನು ನೀಡಿತು. ವಿವಿಧ ಕಾರ್ಖಾನೆಗಳು ಮತ್ತು ಕೈಗಾರಿಕೆಗಳಲ್ಲಿರುವ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು. ಬಾಧಿತ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಪರಿಹಾರ ಪಾವತಿ ಪ್ರಕ್ರಿಯೆಯನ್ನು ಗಮನಸಬೇಕು. ಯಾವುದೇ ವಿಳಂಬವಾಗದಂತೆ ಪರಿಣಾಮಕಾರಿಯಾಗಿ ಪರಿಹಾರ ಪಾವತಿ ಪ್ರಕ್ರಿಯೆ ನಡೆದಿದೆ ಎಂಬುದನ್ನು ಎನ್‌ಎಚ್ಆರ್‌ಸಿ ಗಮನಿಸಬೇಕು ಎಂದು ಕೋರ್ಟ್ ಆದೇಶಿಸಿತು.