ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರಿಂದ ವಿಳಂಬ: ಮಸೂದೆಗೆ ರಾಷ್ಟ್ರಪತಿ ಅಂಕಿತಕ್ಕೆ ಮಾರ್ಗಸೂಚಿ ಸಾಧ್ಯತೆ

Published 29 ನವೆಂಬರ್ 2023, 16:46 IST
Last Updated 29 ನವೆಂಬರ್ 2023, 16:46 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ಮಸೂದೆಗಳ ವಿಚಾರವಾಗಿ ಎರಡು ವರ್ಷಗಳಿಂದ ಯಾವುದೇ ತೀರ್ಮಾನ ಕೈಗೊಳ್ಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಡೆ ಕುರಿತು ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಯಾವ ಸಂದರ್ಭಗಳಲ್ಲಿ ರವಾನಿಸಬಹುದು ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವ ಬಗ್ಗೆ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

ಎಂಟು ಮಸೂದೆಗಳ ವಿಚಾರವಾಗಿ ರಾಜ್ಯಪಾಲರು ಈಚೆಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿರುವ ಕೋರ್ಟ್, ರಾಜ್ಯಪಾಲರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮಸೂದೆಗಳ ಬಗ್ಗೆ ಚರ್ಚಿಸಬೇಕು, ಆಗ ರಾಜಕೀಯ ವಿವೇಕವೊಂದು ರೂಪಪಡೆಯಬಹುದು ಎಂದು ಹೇಳಿದೆ. 

ಎಂಟು ಮಸೂದೆಗಳ ಪೈಕಿ ಏಳು ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ‘ಇರಿಸಲಾಗಿದೆ’, ಒಂದು ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

‘ರಾಜ್ಯಪಾಲರು ಮಸೂದೆಗಳನ್ನು ಎರಡು ವರ್ಷ ಇಟ್ಟುಕೊಂಡು ಏನು ಮಾಡುತ್ತಿದ್ದರು’ ಎಂದು ನ್ಯಾಯಪೀಠ ಪ್ರಶ್ನಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿ ಇದ್ದಾರೆ. 

ಮಸೂದೆಗಳಿಗೆ ಸಂಬಂಧಿಸಿದಂತೆ ‘ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುವರು ಎಂಬುದನ್ನು ನಾವು ದಾಖಲಿಸಿಕೊಳ್ಳುತ್ತೇವೆ... ರಾಜ್ಯದಲ್ಲಿ ರಾಜಕೀಯ ವಿವೇಕವೊಂದು ರೂಪಪಡೆಯುತ್ತದೆ ಎಂದು ನಾವು ಆಶಿಸುತ್ತೇವೆ. ಅದಾಗದಿದ್ದರೆ ಕಾನೂನು ರೂಪಿಸಲು ಹಾಗೂ ಸಂವಿಧಾನದತ್ತವಾದ ಕರ್ತವ್ಯವನ್ನು ನಿರ್ವಹಿಸಲು ನಾವಿದ್ದೇವೆ’ ಎಂದು ಪೀಠವು ನೆನಪಿಸಿಕೊಟ್ಟಿದೆ.

ವಿಧಾನಸಭೆಯು ಅಂಗೀಕಾರ ನೀಡಿರುವ ಹಲವು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂದು ದೂರಿ ಕೇರಳ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ.

ಅರ್ಜಿಯ ವಿಚಾರಣೆ ಶುರುವಾಗುತ್ತಿದ್ದಂತೆ ಕೇರಳ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರು, ‘ಮಸೂದೆಗಳನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಯಾವ ಸಂದರ್ಭಗಳಲ್ಲಿ ರವಾನಿಸಬಹುದು ಎಂಬ ವಿಚಾರವಾಗಿ ಮಾರ್ಗಸೂಚಿ ರೂಪಿಸಲು ಕೋರ್ಟ್‌ಗೆ ಇದು ಸರಿಯಾದ ಕಾಲ’ ಎಂದರು. ಮಸೂದೆಗಳ ವಿಚಾರವಾಗಿ ರಾಜ್ಯಪಾಲರು ತೀರ್ಮಾನವನ್ನೇ ತೆಗೆದುಕೊಳ್ಳದೆ ಇರುವುದಕ್ಕೆ ಅವಕಾಶ ಮಾಡಿಕೊಡಬಾರದು, ಅಂತಹ ಅವಕಾಶ ಮಾಡಿಕೊಟ್ಟಲ್ಲಿ ಆಡಳಿತದ ಕೆಲಸಗಳು ಸ್ಥಗಿತವಾಗಿಬಿಡುತ್ತವೆ ಎಂದು ಅವರು ಹೇಳಿದರು.

ವಿಧಾನಸಭೆಯ ಜೊತೆಗೂಡಿ ಕೆಲಸ ಮಾಡುವ ಬದಲು ರಾಜ್ಯಪಾಲರು, ಎದುರಾಳಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದರು.

ಮಸೂದೆಗಳ ವಿಚಾರವಾಗಿ ರಾಜ್ಯಪಾಲರು ಕೆಲವು ತೀರ್ಮಾನಗಳನ್ನು ಕೈಗೊಂಡಿರುವ ಕಾರಣ ಕೇರಳ ಸರ್ಕಾರದ ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂಬ ಇರಾದೆಯನ್ನು ಪೀಠವು ಆರಂಭದಲ್ಲಿ ವ್ಯಕ್ತಪಡಿಸಿತ್ತು. ಆದರೆ, ಈ ವಿಚಾರವಾಗಿ ಮಾರ್ಗಸೂಚಿ ರೂಪಿಸುವ ಬಗ್ಗೆ ತಾನು ಪರಿಗಣಿಸಬಹುದು ಎಂದು ಹೇಳಿದ ಪೀಠವು, ಅರ್ಜಿಯನ್ನು ವಿಚಾರಣೆಗೆ ಬಾಕಿ ಉಳಿಸಿಕೊಂಡಿತು.

ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು, ತಾನು ಪಂಜಾಬ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಪರಿಶೀಲಿಸುವಂತೆ ಕೇರಳ ರಾಜ್ಯಪಾಲರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಶಾಸನ ರೂಪಿಸುವ ಸಹಜ ಪ್ರಕ್ರಿಯೆಗೆ ರಾಜ್ಯಪಾಲರು ಅಡ್ಡಿಯಾಗುವಂತಿಲ್ಲ ಎಂದು ಕೋರ್ಟ್‌ ಆ ತೀರ್ಪಿನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT