ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣೆಗೆ ತಿಲಕ; ಸಾಮರಸ್ಯ ಕಾಪಾಡಲು ಸೂಚನೆ ನೀಡಿದ ಮಧ್ಯಪ್ರದೇಶ ಶಿಕ್ಷಣ ಇಲಾಖೆ

Published 9 ಜುಲೈ 2023, 15:21 IST
Last Updated 9 ಜುಲೈ 2023, 15:21 IST
ಅಕ್ಷರ ಗಾತ್ರ

ಇಂದೋರ್‌, ಮಧ್ಯಪ್ರದೇಶ: ತಿಲಕವಿಟ್ಟುಕೊಂಡಿದ್ದ ವಿದ್ಯಾರ್ಥಿಗೆ ತರಗತಿ ಪ್ರವೇಶ ನಿರಾಕರಿಸಿದ್ದ ಇಲ್ಲಿನ ಖಾಸಗಿ ಶಾಲೆಯೊಂದಕ್ಕೆ, ‘ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳಿ’ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶ್ರೀ ಬಾಲ ವಿಜ್ಞಾನ ಶಿಶು ವಿಹಾರ ಹೈಯರ್‌ ಸೆಕೆಂಡರಿ ಸ್ಕೂಲ್‌ ಮುಂಭಾಗ ನಿಂತಿರುವ ವಿದ್ಯಾರ್ಥಿ, ‘ಹಣೆಗೆ ತಿಲಕವಿಟ್ಟುಕೊಂಡಿದ್ದರಿಂದ ಶಾಲೆಯೊಳಗೆ ಪ್ರವೇಶ ನೀಡಿಲ್ಲ. ಮತ್ತೊಮ್ಮೆ ಇದು ಪುನರಾವರ್ತನೆಯಾದರೆ ವರ್ಗಾವಣೆ ಪತ್ರ (ಟಿ.ಸಿ) ಕೊಡಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

‘ತಿಲಕವನ್ನಿಟ್ಟುಕೊಂಡು ಶಾಲೆಗೆ ಬರುವುದನ್ನು ತಡೆಯುವುದು ಸರಿಯೇ?’ ಎಂದು ಕೆಲವರು ಶಾಲಾ ಆಡಳಿತ ಮಂಡಳಿಯವರೊಟ್ಟಿಗೆ ಚರ್ಚಿಸುತ್ತಿರುವ ಮತ್ತೊಂದು ವಿಡಿಯೊ ಸಹ ಜಾಲತಾಣದಲ್ಲಿದೆ. ‘ಶಾಲೆಯು ಸಮಾನತೆ ಮತ್ತು ಧಾರ್ಮಿಕ ಸಾಮರಸ್ಯದಿಂದಲೇ ನಡೆಯುತ್ತಿದೆ’ ಎಂದು ಮಹಿಳಾ ಶಿಕ್ಷಕಿಯೊಬ್ಬರು ಹೇಳಿರುವುದು ಸಹ ಇದೇ ವಿಡಿಯೊದಲ್ಲಿದೆ.

‘ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಶಿಸ್ತು ಪಾಲನೆಗಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಲಿ. ಆದರೆ ಹುಟ್ಟುಹಬ್ಬ ಹಾಗೂ ವಿಶೇಷ ಆಚರಣೆ ಸಂದರ್ಭ ತಿಲಕವಿಟ್ಟುಕೊಂಡು ಬರುವ ಮಕ್ಕಳಿಗೆ ಅದನ್ನು ತೆಗೆಯುವಂತೆ ಹೇಳಬೇಡಿ ಎಂದು ಪ್ರಾಂಶುಪಾಲರಿಗೆ ತಿಳಿಸಲಾಗಿದೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಮಂಗಳೇಶಕುಮಾರ ವ್ಯಾಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಕೆಲವರು ಇದಕ್ಕೆ ಇನ್ನಿಲ್ಲದ ಪ್ರಾಮುಖ್ಯ ನೀಡಿದ್ದಾರೆ. ಆದರೂ ಪೋಷಕರು–ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ’ ಎಂದೂ ವ್ಯಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT