ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ | ನೂಹ್‌ನಲ್ಲಿ ಮುಂದುವರಿದ ನಿಷೇಧಾಜ್ಞೆ, ಇಂಟರ್‌ನೆಟ್‌ ನಿರ್ಬಂಧ

Published 4 ಆಗಸ್ಟ್ 2023, 3:19 IST
Last Updated 4 ಆಗಸ್ಟ್ 2023, 3:19 IST
ಅಕ್ಷರ ಗಾತ್ರ

ಗುರುಗ್ರಾಮ: ಹರಿಯಾಣದ ನೂಹ್‌ ಪಟ್ಟಣದಲ್ಲಿ ಇಂದು (ಶುಕ್ರವಾರ) ಕೂಡ ನಿಷೇಧಾಜ್ಞೆ ಮುಂದುವರಿದಿದ್ದು, ಜಿಲ್ಲೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನೂಹ್‌ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಾಹನಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೊ ಎನ್ನುತ್ತಿವೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ ಮಾಡಿದೆ.

ನೂಹ್‌ ಪಟ್ಟಣದಲ್ಲಿ ಜುಲೈ 31 (ಸೋಮವಾರ) ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದಿದ್ದು, ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿಯನ್ನೂ ಹಚ್ಚಿದ್ದರು.

ಕೋಮು ಗಲಭೆಯಿಂದ ಹರಿಯಾಣದಲ್ಲಿ ಗೃಹ ರಕ್ಷಕ ದಳದ ಇಬ್ಬರು ಮತ್ತು ನಾಲ್ವರು ನಾಗರಿಕರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ತಿಳಿಸಿದ್ದಾರೆ.

ಅವಘಡದಲ್ಲಿ ಪೊಲೀಸ್ ವಾಹನಗಳಿಗೂ ಹಾನಿಯಾಗಿದ್ದು, ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದರು.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಇದುವರೆಗೆ 170ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ... ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಇಂದು: ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ

ಮಸೀದಿಗೆ ಬೆಂಕಿ: ಇಬ್ಬರ ಮೇಲೆ ದಾಳಿ

ನೂಹ್‌ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಶಾರ್ಟ್‌ ಸರ್ಕೀಟ್‌ನಿಂದ ಒಂದು ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಮಸೀದಿಯ ಮೇಲೆ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಈ ಎರಡೂ ಘಟನೆಗಳು ಬುಧವಾರ ರಾತ್ರಿ 11.30ರ ಸುಮಾರಿನಲ್ಲಿ ನಡೆದಿದ್ದು, ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಪೊಲಿಸರು ಹೇಳಿದ್ದಾರೆ. ಒಂದು ಮಸೀದಿ ವಿಜಯ್‌ ಚೌಕ್‌ ಬಳಿ ಇದ್ದರೆ, ಇನ್ನೊಂದು ಮಸೀದಿ ಪೊಲೀಸ್‌ ಠಾಣೆ ಬಳಿ ಇದೆ. ಎರಡೂ ಮಸೀದಿಗಳಿಗೆ ಬೆಂಕಿಯಿಂದ ಸ್ವಲ್ಪ ಹಾನಿಯಾಗಿದೆ. ಬೆಂಕಿ ತಗುಲಿದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಸೀದಿಗೆ ಪೆಟ್ರೋಲ್‌ ಬಾಂಬ್‌ ಎಸೆದ ದು‌ಷ್ಕರ್ಮಿಗಳನ್ನು ಹಿಡಿಯಲು ಶೋಧ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ನೂಹ್‌ ಎಸ್‌ಪಿ ವರುಣ್‌ ಸಿಂಗ್ಲಾ ಹೇಳಿದ್ದಾರೆ.

ಇಬ್ಬರು ಮುಸ್ಲಿಂರ ಮೇಲೆ ಗುಂಪು ದಾಳಿ: ಗುರುಗ್ರಾಮದಲ್ಲಿ ನಿಸಾರ್ ಅಲಿ ಮತ್ತು ಅವರ ಸಹೋದರ ರುಸ್ತಮ್ ಅಲಿ ಎಂಬುವರ ಮೇಲೆ ಸುಮಾರು 30 ಜನರ ಗುಂಪು ಬುಧವಾರ ಸಂಜೆ ದಾಳಿ ನಡೆಸಿ ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ನಗರವನ್ನು ತೊರೆಯುವಂತೆ ಗುಂಪು ಎಚ್ಚರಿಸಿದೆ’ ಎಂದು ನಿಸಾರ್‌ ಅಲಿ ದೂರಿನಲ್ಲಿ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಅಪರಿಚಿತ ಯುವಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಓದಿ... ನೂಹ್‌: ಮಸೀದಿಗೆ ಬೆಂಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT