ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಮತ್ತು ನನ್ನದು ಎಂಬ ರಾಜಕಾರಣ ಕೊನೆಗಾಣಬೇಕು: ಹೂಡಾ ವಿರುದ್ಧ ಸೆಲ್ಜಾ ಕಿಡಿ

Published 13 ಜೂನ್ 2024, 4:59 IST
Last Updated 13 ಜೂನ್ 2024, 4:59 IST
ಅಕ್ಷರ ಗಾತ್ರ

ಅಂಬಾಲ(ಹರಿಯಾಣ): ‘ಸ್ವಾರ್ಥ ರಾಜಕಾರಣ ಬಿಟ್ಟು, ಹೈಕಮಾಂಡ್‌ಗೆ ಸಮಯೋಚಿತ ಸಲಹೆ ನೀಡಿದ್ದರೆ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ 10 ಸ್ಥಾನಗಳನ್ನೂ ಗೆಲ್ಲಬಹುದಿತ್ತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಅವರು ಪಕ್ಷದ ಹಿರಿಯ ಮುಖಂಡ ಭೂಪೇಂದ್ರ ಸಿಂಗ್ ಹೂಡಾ ಅವರ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮತ್ತು ನನ್ನದು ಎಂಬ ಮನಸ್ಥಿತಿ ಇರುವವರೆಗೂ ಪಕ್ಷದ ಕಾರ್ಯಕರ್ತರು ತೊಂದರೆ ಅನುಭವಿಸುತ್ತಾರೆ’ ಎಂದು ಹೇಳಿದರು.

‘ಸ್ವಾರ್ಥ ರಾಜಕಾರಣ ಮಾಡದೇ ಹೋಗಿದ್ದರೆ, ಅರ್ಹತೆಯ ಆಧಾರದ ಮೇಲೆ ಟಿಕೆಟ್ ನೀಡಿದ್ದರೆ ರಾಜ್ಯದ ಎಲ್ಲ 10 ಸ್ಥಾನಗಳಲ್ಲಿ ಜಯ ನಮ್ಮದಾಗುತಿತ್ತು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (ಕರ್ನಾಲ್‌ ವಿಧಾನಸಭಾ ಉಪಚುನಾವಣೆ) ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್(ಕರ್ನಾಲ್‌ ಲೋಕಸಭಾ ಚುನಾವಣೆ) ವಿರುದ್ಧವೂ ಪ್ರಬಲ ಅಭ್ಯರ್ಥಿಗಳನ್ನು ಹಾಕುವ ಬಗ್ಗೆ ಸಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ನಮ್ಮ ಪಕ್ಷದ ಉಸ್ತುವಾರಿ (ದೀಪಕ್ ಬಬಾರಿಯಾ) ಹೈಕಮಾಂಡ್‌ಗೆ ಸಮಯೋಚಿತ ಸಲಹೆ ನೀಡಿದ್ದರೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿತ್ತು. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ನ್ಯೂನತೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು’ ಎಂದರು.

‘ನಾನು ಇದನ್ನು ಪದೇ ಪದೇ ಹೇಳುತ್ತಿದ್ದೇನೆ.. ನಾನು ಮತ್ತು ನನ್ನದು ಎಂಬ ರಾಜಕಾರಣ ಮುಂದುವರಿದರೆ ಪಕ್ಷಕ್ಕೆ ತೊಂದರೆಯಾಗುತ್ತದೆ’ ಎಂದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಮಿತ್ರ ಪಕ್ಷ ಎಎಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ ಐದು ಸ್ಥಾನಗಳನ್ನು ಗೆದ್ದಿತ್ತು.

ರಾಜ್ಯದಲ್ಲಿ ಸೆಲ್ಜಾ ಮತ್ತು ಹೂಡಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇಡೀ ಚುನಾವಣಾ ಪ್ರಚಾರದ ಸಮಯದಲ್ಲಿ ಇಬ್ಬರು ವೇದಿಕೆಯನ್ನು ಹಂಚಿಕೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT