ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ನಿರ್ಮಿಸದಿದ್ದರೆ ಮೈತ್ರಿ ಇಲ್ಲ: ಬಿಜೆಪಿಗೆ ಉದ್ಧವ್‌ ಠಾಕ್ರೆ ಎಚ್ಚರಿಕೆ

Last Updated 25 ಡಿಸೆಂಬರ್ 2018, 1:45 IST
ಅಕ್ಷರ ಗಾತ್ರ

ಪಂಢರಪುರ/ಮಹಾರಾಷ್ಟ್ರ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡದಿದ್ದರೆ ಬಿಜೆಪಿ ನೇತೃತ್ವದ ಎನ್‌ಡಿಎದಲ್ಲಿ ಉಳಿಯುವ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯುವ ಅಥವಾ ಅದರಿಂದ ಹೊರಬರುವ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ ಎಂದು ಅವರು ಸುಳಿವು ನೀಡಿದರು.

ಸೋಮವಾರ ಇಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ತಿಂಗಳು ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಅವರು, ವಿವಾದಿತ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದರು.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ತನ್ನ ಸ್ವಂತ ಬಲದಿಂದಲೇ ಎದುರಿಸುವುದಾಗಿ ಠಾಕ್ರೆ ಈ ಹಿಂದೆಯೇ ಹೇಳಿದ್ದರು. ಆದರೆ, ಕಳೆದ ಆರು ತಿಂಗಳಿಂದ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದಾರೆ. ಮೈತ್ರಿಯಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ಆಸಕ್ತಿಯನ್ನು ಠಾಕ್ರೆ ಈ ರ‍್ಯಾಲಿಯಲ್ಲಿ ತೋರಿಸಲಿಲ್ಲ.

ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಪ್ರಸ್ತಾಪಿಸಿದ ಅವರು, ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಹಾಗೂ ಎಲ್‌ಜೆಪಿ ಅಧ್ಯಕ್ಷ ರಾಮ್‌ ವಿಲಾಸ್‌ ಪಾಸ್ವಾನ್‌ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು.

‘ಚೌಕಿದಾರ್‌ ಚೋರ್‌’

ರಫೇಲ್‌ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಳಸುತ್ತಿದ್ದ ‘ಚೌಕಿದಾರ್‌ ಚೋರ್‌ ಹೈ’ ಎಂಬ ಘೋಷಣೆಯನ್ನು ಠಾಕ್ರೆ ಪುನರುಚ್ಚರಿಸಿದರು.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿವೆ. ಸುಪ್ರೀಂ ಕೋರ್ಟ್‌ ಯಾವ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ‘ಕ್ಲೀನ್‌ ಚಿಟ್‌’ ನೀಡಿದೆ ಎಂಬುದು ಗೊತ್ತಿಲ್ಲ ಎಂದರು.

ಬಿಜೆಪಿಯಿಂದ ಭ್ರಮನಿರಸನ

ಬಿಜೆಪಿ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿಯೂ ಬಿಜೆಪಿ ಸೋಲು ಅನುಭವಿಸಿದ್ದು ಜನರ ಭ್ರಮನಿರಸನಕ್ಕೆ ತಾಜಾ ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟರು.

**
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಬಿಜೆಪಿ ಗ್ರಹಿಕೆ ಛಿದ್ರವಾಗಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಹೊಸ ರಾಜಕೀಯ ಯುಗ ಆರಂಭವಾಗಲಿದೆ ಎಂಬ ಸಂದೇಶವನ್ನು ಫಲಿತಾಂಶ ನೀಡಿದೆ
- ಉದ್ಧವ್‌ ಠಾಕ್ರೆ, ಶಿವಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT