ಬೆಮೆತರಾ: ಛತ್ತೀಸಗಢದ ಬೆಮೆತರಾ ಜಿಲ್ಲೆಯು ‘ಲವ್ ಜಿಹಾದ್’ ಕೇಂದ್ರವಾಗಿ ಮಾರ್ಪಟ್ಟಿದೆ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಂತಹ ಕೃತ್ಯ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಬೆಮೆತರಾ ಜಿಲ್ಲೆಯ ಸಾಜಾ ವಿಧಾನಸಭಾ ಕ್ಷೇತ್ರದಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ಶಾ, ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ, ದುರ್ಗ್ ವಿಭಾಗವು ಶಿಕ್ಷಣದ ಕೇಂದ್ರವಾಗಿತ್ತು. ಭೂಪೇಶ್ ಇದನ್ನು ಬೆಟ್ಟಿಂಗ್ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಯುವಕರನ್ನು ಬೆಟ್ಟಿಂಗ್ ವ್ಯವಹಾರಕ್ಕೆ ತಳ್ಳುವ ಪಾಪವನ್ನು ಅವರು ಮಾಡಿದ್ದಾರೆ’ ಎಂದು ಟೀಕಿಸಿದರು.
'ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಭಗವಾನ್ ಮಹದೇವ್ ಹೆಸರು ಇಡುವ ಮೂಲಕ ಅವಮಾನಿಸಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗೆ ಬಘೆಲ್ ತಮ್ಮದೇ ಹೆಸರು ಇಡಬಹುದಿತ್ತು. ಅವರು ಮಹದೇವ್ ಹೆಸರನ್ನು ಏಕೆ ಬಳಸಿದರು? ’ ಎಂದರು.
ಬಿಜೆಪಿ ಸಾಜಾ ಕ್ಷೇತ್ರದಿಂದ ಈಶ್ವರ್ ಸಾಹು ಅವರನ್ನು ಕಣಕ್ಕಿಳಿಸಿದೆ. ಕಳೆದ ಏಪ್ರಿಲ್‌ನಲ್ಲಿ ಜಿಲ್ಲೆಯ ಬಿರಾನಪುರ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಈಶ್ವರ್ ಪುತ್ರ ಭುವನೇಶ್ವರ್ ಸಾಹು ಮೃತಪಟ್ಟಿದ್ದರು.
‘ಈಶ್ವರ್ ಸಾಹು ಕೇವಲ ಅಭ್ಯರ್ಥಿ ಮಾತ್ರವಲ್ಲ, ನ್ಯಾಯಕ್ಕಾಗಿ ಹೋರಾಟದ ಸಂಕೇತ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಲ್ಲದೆ, ಭುವನೇಶ್ವರ್ ಸಾಹುಗೆ ನ್ಯಾಯವನ್ನು ಖಾತರಿಪಡಿಸುತ್ತವೆ ಮತ್ತು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿರುವವರಿಗೆ ಪಾಠ ಕಲಿಸುತ್ತವೆ’ ಎಂದು ಎಚ್ಚರಿಸಿದರು.
ಸಾಹು, ಕುರ್ಮಿ ಮತ್ತು ಗೊಂಡ್ ಸಮುದಾಯಗಳು ಅದರ (ಲವ್ ಜಿಹಾದ್) ಗುರಿಯಾಗಿದ್ದರೆ, ಭೂಪೇಶ್ ಬಘೆಲ್ ಸರ್ಕಾರ ನಿದ್ರೆಯಲ್ಲಿದೆ. ಅವರನ್ನು ಎಬ್ಬಿಸುವರು ಯಾರು? ಬಿಜೆಪಿ ಅಧಿಕಾರಕ್ಕೆ ತಂದರೆ ಅಂತಹ ಕೃತ್ಯವನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.