ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆ ಪ್ರಕರಣ: ತಿರುಮಲದಲ್ಲಿ ಶಾಂತಿ ಹೋಮ

ಶುದ್ಧೀಕರಣ ಪ್ರಕ್ರಿಯೆ ನಡೆಸಿದ ಅರ್ಚಕರು
Published : 23 ಸೆಪ್ಟೆಂಬರ್ 2024, 20:29 IST
Last Updated : 23 ಸೆಪ್ಟೆಂಬರ್ 2024, 20:29 IST
ಫಾಲೋ ಮಾಡಿ
Comments

ಹೈದರಾಬಾದ್‌: ವೈಖಾನಸಾ ಆಗಮ ತತ್ವಗಳ ಪ್ರಕಾರ ತಿರುಮಲದ ಯೋಗಶಾಲೆಯಲ್ಲಿ ಸೋಮವಾರ ಬೆಳಿಗ್ಗೆ ಶಾಂತಿ ಹೋಮ ನೆರವೇರಿಸಲಾಯಿತು.

ತಿರುಪತಿ ದೇವಸ್ಥಾನದ ಲಾಡು ಮತ್ತು ಇತರ ನೈವೇದ್ಯ ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾದ ಬಳಿಕ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಶುದ್ಧೀಕರಣ ಕಾರ್ಯ ನಡೆಸಲಾಯಿತು.

ಶಾಂತಿ ಹೋಮ ಪೂರ್ಣಗೊಳಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ, ಟಿಟಿಡಿ ಇ.ಒ ಜೆ. ಶ್ಯಾಮಲ ರಾವ್‌ ಮತ್ತು ಹೆಚ್ಚುವರಿ ಇ.ಒ ವೆಂಕಯ್ಯ ಚೌಧರಿ, ‘ಇದು ಪವಿತ್ರವಾದ ಪಾಪ ಮುಕ್ತ ಆಚರಣೆಯಾಗಿದೆ. ಇದರ ಅಂಗವಾಗಿ ವಾಸ್ತು ಶುದ್ಧಿ, ಕುಂಭಜಲ ಸಂಪ್ರೋಕ್ಷಣೆಯನ್ನೂ ಮಾಡಲಾಯಿತು’ ಎಂದು ತಿಳಿಸಿದರು.

ಇದು, ಲಾಡು ಪ್ರಸಾದ ಮತ್ತು ನೈವೇದ್ಯದ ಗುಣಮಟ್ಟದ ಬಗ್ಗೆ ಭಕ್ತರಲ್ಲಿದ್ದ ಆತಂಕ ಮತ್ತು ತಪ್ಪು ತಿಳಿವಳಿಕೆಯನ್ನು ದೂರ ಮಾಡಿಸುತ್ತದೆ ಎಂದರು.

ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದ ಮುಖ್ಯ ಅರ್ಚಕ ಮೋಹನರಂಗಾಚಾರ್ಯಲು ಅವರು ಸಂಕಲ್ಪ, ವಾಸ್ತು ಹೋಮ, ಕುಂಭ ಪ್ರತಿಷ್ಠಾನ, ಪಂಚಗವ್ಯ ಆರಾಧನೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ನೆರವೇರಿಸಲಾಯಿತು ಎಂದು ಹೇಳಿದರು.

ಪೂರ್ಣಾಹುತಿ, ಕುಂಭ ಪ್ರೋಕ್ಷಣೆಯ ಬಳಿಕ ವಿಶೆಷ ನೈವೇದ್ಯ ಅರ್ಪಿಸಲಾಯಿತು. ಈ ಮೂಲಕ ಲಾಡು ಪ್ರಸಾದ ಮತ್ತು ನೈವೇದ್ಯ ದೋಷ ಮುಕ್ತವಾಯಿತು ಎಂದು ಅವರು ವಿವರಿಸಿದರು.

‘ಸುಪ್ರೀಂ’ಗೆ ಪಿಐಎಲ್‌ ಸಲ್ಲಿಸಿದ ಸುಬ್ರಮಣಿಯನ್ ಸ್ವಾಮಿ

ತಿರುಪತಿ ಪ್ರಸಾದ ಲಾಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. ಲಾಡುಗಳಿಗೆ ಬಳಸುವ ತುಪ್ಪದ ಮೂಲ ಮತ್ತು ಮಾದರಿಯ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಆಂಧ್ರ ಪ್ರದೇಶದ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪಡೆಯಲು ಮಧ್ಯಂತರ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

‘ಸುಪ್ರೀಂ’ ಸ್ವಯಂ ಪ್ರೇರಿತ  ಪ್ರಕರಣ ದಾಖಲಿಸಲಿ: ವಿಎಚ್‌ಪಿ ತಿರುಪತಿ

ತಿರುಪತಿಯ ಲಾಡು ಸಿದ್ಧಪಡಿಸಲು ಬಳಸಿದ ತುಪ್ಪದ ಕಲಬೆರಕೆ ಕುರಿತು ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಗ್ರಹಿಸಿದೆ. ಅಲ್ಲದೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಬೇಕು ಎಂದು ಅದು ಒತ್ತಾಯಿಸಿದೆ. ತಿರುಪತಿಯಲ್ಲಿ ಸೋಮವಾರ ನಡೆದ ವಿಎಚ್‌ಪಿಯ ಕೇಂದ್ರೀಯ ಮಾರ್ಗದರ್ಶಕ ಮಂಡಲ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯದರ್ಶಿ ಬಜರಂಗ ಬಾಗಡಾ ಇತರ ಪದಾಧಿಕಾರಿಗಳು ಮತ್ತು ಹಲವು ಮಠಾಧೀಶರು ಭಾಗವಹಿಸಿದ್ದರು. ‘ಈ ಸಂಬಂಧ ಸುಪ್ರೀಂ ಕೋರ್ಟ್‌ ಸುಮೊಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಮತ್ತು ತನಿಖೆಗೆ ಸೂಚಿಸಿ ಕಾಲಮಿತಿಯೊಳಗೆ ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ವಿಎಚ್‌ಪಿ ಪ್ರಕಟಣೆಯಲ್ಲಿ ಆಗ್ರಹಿಸಿದೆ. –––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT