ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ: ಶರದ್ ಪವಾರ್, ಏಕನಾಥ್ ಶಿಂದೆ ಏನಂದ್ರು?

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ ಇಲ್ಲಿವೆ
Published 2 ಜುಲೈ 2023, 13:56 IST
Last Updated 2 ಜುಲೈ 2023, 13:56 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಇತ್ತ ವಿವಿಧ ನಾಯಕರು ಈ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ.

ಇದು ಹೊಸ ಸರ್ಕಾರವಲ್ಲ: ಏಕನಾಥ್ ಶಿಂದೆ

‘ಇದು ಹೊಸ ಸರ್ಕಾರವಲ್ಲ. ಮೋದಿ ನೇತೃತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಉತ್ತಮ ಕಾರ್ಯಗಳನ್ನು ನೋಡಿ ಅಜಿತ್ ಪವಾರ್ ತಮ್ಮ ಬೆಂಬಲಿಗರೊಂದಿಗೆ ಸೇರಿದ್ದಾರೆ’

–ಏಕನಾಥ್ ಶಿಂದೆ, ಮಹಾರಾಷ್ಟ್ರ ಸಿಎಂ

ಇ.ಡಿ ಹೆದರಿಕೆ ಇರಬಹುದು: ಶರದ್ ಪವಾರ್

‘ಅಜಿತ್ ಪವಾರ್ ಹೀಗೆಕೆ ಮಾಡಿದರು ಎಂದು ನನಗೆ ಗೊತ್ತಿಲ್ಲ. ಇಂತಹ ಬೆಳವಣಿಗೆಗಳು ನನಗೆ ಹೊಸದಲ್ಲ, ಎಲ್ಲವನ್ನೂ ನಿಭಾಯಿಸಿ ಪಕ್ಷವನ್ನು ಮುನ್ನೆಡೆಸಿದ್ದೇನೆ. ಪ್ರಧಾನಿ ಇತ್ತೀಚೆಗೆ ಎನ್‌ಸಿಪಿ ಅನೇಕ ಹಗರಣ ಮಾಡಿದೆ ಎಂದು ಹೇಳಿದ್ದರು. ಇದೀಗ ನಮ್ಮವರೇ ಅವರ ಜೊತೆ ಸೇರಿರುವುದರಿಂದ ಮೋದಿ ಆರೋಪಗಳು ಸುಳ್ಳು ಎಂಬುದು ಸಾಬೀತಾಗಿದೆ. ಜುಲೈ 6ಕ್ಕೆ ಸಭೆ ಕರೆಯುತ್ತೇನೆ. ನಮ್ಮ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ‘

ಶರದ್ ಪವಾರ್, ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ

ಬಿಜೆಪಿಯಿಂದ ಎಗ್ಗಿಲ್ಲದೇ ಶಾಸಕರ ಖರೀದಿ –ಮೆಹಬೂಬಾ ಮುಫ್ತಿ

ಶ್ರೀನಗರ: ‘ಬಿಜೆಪಿಯು ಶಾಸಕರನ್ನು ಖರೀದಿಸುವ ಕಾರ್ಯದಲ್ಲಿ ಎಗ್ಗಿಲ್ಲದೇ ತೊಡಗಿದೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಟೀಕಿಸಿದ್ದು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಜನರ ತೀರ್ಪು ಅಗೌರವಿಸಲು ಬಿಜೆಪಿ ಮತ್ತೆ ಮತ್ತೆ ಮಾಡುತ್ತಿರುವ ಪ್ರಯತ್ನಗಳನ್ನು ಬಣ್ಣಿಸಲು ಪದಗಳೇ ಇಲ್ಲ. ಅಲ್ಲಿ ಪ್ರಜಾಪ್ರಭುತ್ವ ಹತ್ತಿಕ್ಕಲಾಗುತ್ತಿದೆ. ಈ ಕೃತ್ಯ ಮರೆಮಾಚಲು ರಾಷ್ಟ್ರಗೀತೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿ ಒಂದು ಕೈನಲ್ಲಿ ರಾಜಕೀಯ ವಿರೋಧಿಗಳನ್ನು ಹಿಡಿದಿಟ್ಟುಕೊಳ್ಳಲು ಯತ್ನಿಸುತ್ತಿದೆ, ಇನ್ನೊಂದೆಡೆ ಶಾಸಕರನ್ನು ಖರೀದಿಸುವ ಕಾರ್ಯದಲ್ಲಿ ಎಗ್ಗಿಲ್ಲದೆ ನಿರತವಾಗಿದೆ. ಬಿಜೆಪಿಯ ಅಧಿಕಾರ ದಾಹವನ್ನು ಇಂಗಿಸಲು ಜನರ ಹಣ ಬಳಕೆಯಾಗುತ್ತಿದೆ‘ ಎಂದಿದ್ದಾರೆ.

ಪ್ರಜಾಪ್ರಭುತ್ವದ ತಾಯಿ ಇದೇನಾ? –ಕಪಿಲ್‌ ಸಿಬಲ್ ವ್ಯಂಗ್ಯ 

ನವದೆಹಲಿ: ಮಹಾರಾಷ್ಟ್ರ ಬೆಳವಣಿಗೆಯನ್ನು ಉಲ್ಲೇಖಿಸಿರುವ ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್, ‘ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಉಲ್ಲೇಖಿಸಿದ್ದ ‘ಪ್ರಜಾಪ್ರಭುತ್ವದ ತಾಯಿ ಇದೇನಾ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಬಲ್, ‘ಇತ್ತೀಚೆಗೆ ಮೋದಿ ಅವರು ಅಮೆರಿಕಕ್ಕೆ ಹೋಗಿದ್ದಾಗ ಪ್ರಜಾಪ್ರಭುತ್ವ ತಾಯಿ ಕುರಿತು ಉಲ್ಲೇಖ ಮಾಡಿದ್ದರು. ನನ್ನ ಊಹೆ ಪ್ರಕಾರ, ಮೋದಿ ಅವರು ಉಲ್ಲೇಖಿಸಿದ್ದು ಇದೇ ಇರಬಹುದು’ ಎಂದು ಹೇಳಿದ್ದಾರೆ.

ಮೋದಿ ಭ್ರಷ್ಟಾಚಾರದ ಅತಿದೊಡ್ಡ ಪೋಷಕ –ಎಎಪಿ ವಾಗ್ದಾಳಿ

ನವದೆಹಲಿ: ಮಹಾರಾಷ್ಟ್ರದ ಬೆಳವಣಿಗೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಆಮ್‌ ಆದ್ಮಿ ಪಕ್ಷವು (ಎಎಪಿ), ‘ಮೋದಿ ಭ್ರಷ್ಟಾಚಾರದ ಅತಿದೊಡ್ಡ ಪೋಷಕ’ ಎಂದು ಬಣ್ಣಿಸಿದೆ.

‘ಭ್ರಷ್ಟಾಚಾರದ ವಿರುದ್ಧ ಗ್ಯಾರಂಟಿ ಕ್ರಮಕೈಗೊಳ್ಳುತ್ತೇವೆ ಎಂದು ಮೋದಿ ಎರಡು ದಿನದ ಹಿಂದೆ ಹೇಳಿದ್ದರು ಈಗ ಅಜಿತ್‌ ಪವಾರ್ ಅವರು ಶಿವಸೇನೆ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾರೆ’ ಎಂದು ಪಕ್ಷದ ವಕ್ತಾರ ಸಂಜಯ್‌ ಸಿಂಗ್ ಟ್ವೀಟ್‌ ಮಾಡಿದ್ದಾರೆ. ‘ಇಂದು ಎಲ್ಲ ಟಿ.ವಿ ಚಾನಲ್‌ಗಳು ಮೋದಿ ಅವರನ್ನು ಖಂಡಿಸಲಿವೆ’ ಎಂದೂ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT