ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಚೀನಾದಿಂದ ಪಾಕ್‌ಗೆ ಹೊರಟಿದ್ದ ಹಡಗು ವಶಕ್ಕೆ

Published 2 ಮಾರ್ಚ್ 2024, 14:11 IST
Last Updated 2 ಮಾರ್ಚ್ 2024, 14:11 IST
ಅಕ್ಷರ ಗಾತ್ರ

ಮುಂಬೈ: ಪಾಕಿಸ್ತಾನದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸಬಹುದಾದ ಸರಕು ಹೊಂದಿರುವ ಅನುಮಾನದ ಮೇರೆಗೆ, ಚೀನಾದಿಂದ ಕರಾಚಿಗೆ ಹೊರಟಿದ್ದ ಹಡಗನ್ನು ಭಾರತದ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮುಂಬೈನ ನ್ಹಾವಾ ಶೇವಾ ಬಂದರಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾಲ್ಟಾ ದೇಶದ ಧ್ವಜ ಹೊಂದಿದ್ದ ‘ಸಿಎಂಎ ಸಿಜಿಎಂ ಆ್ಯಟಿಲಾ’ ಹೆಸರಿನ ಹಡಗನ್ನು ಗುಪ್ತಚರ ಮಾಹಿತಿಯನ್ನು ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ಜನವರಿ 23 ರಂದು ತಡೆದು ಪರಿಶೀಲನೆ ನಡೆಸಿದ್ದಾರೆ. ಹಡಗಿನಲ್ಲಿ ದ್ವಿ–ಬಳಕೆಯ (ನಾಗರಿಕ ಮತ್ತು ಸೇನಾ ಬಳಕೆಗಳೆರಡಕ್ಕೂ ಉಪಯೋಗಿಸಬಹುದಾದ ತಂತ್ರಜ್ಞಾನ) ಸರಕು ಇರುವುದು ಖಚಿತಪಟ್ಟಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 

ಇಟಲಿಯ ಕಂಪನಿಯೊಂದು ತಯಾರಿಸಿರುವ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (ಸಿಎನ್‌ಸಿ) ಯಂತ್ರಗಳು ಹಡಗಿನಲ್ಲಿದ್ದವು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧಿಕಾರಿಗಳು ಕೂಡಾ ಸರಕು ಪರಿಶೀಲಿಸಿದ್ದು, ಸಿಎನ್‌ಸಿ ಯಂತ್ರಗಳನ್ನು ಪಾಕಿಸ್ತಾನವು ತನ್ನ ಪರಮಾಣು ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ಪ್ರಮುಖ ಉಪಕರಣಗಳನ್ನು ತಯಾರಿಸಲು ಈ ಯಂತ್ರವು ಉಪಯುಕ್ತವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ಉತ್ತರ ಕೊರಿಯಾ, ತನ್ನ ಪರಮಾಣು ಕಾರ್ಯಕ್ರಮಗಳಿಗೆ ಇದೇ ಯಂತ್ರವನ್ನು ಬಳಕೆ ಮಾಡುತ್ತಿದೆ. 

‘ಭಾರಿ ಸರಕು ಹೊತ್ತಿದ್ದ ಹಡಗಿನಲ್ಲಿ ಅನುಮಾನಾಸ್ಪದ ವಸ್ತುಗಳು ಇವೆ ಎಂಬ ಗುಪ್ತಚರ ಮಾಹಿತಿ ದೊರೆತಿದೆ. ಈ ವಿಷಯವನ್ನು ಬಂದರಿನ ಅಧಿಕಾರಿಗಳು ರಕ್ಷಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸರಕು ಪರಿಶೀಲಿಸಿದ ಅಧಿಕಾರಿಗಳು ಹಡಗವನ್ನು ವಶಕ್ಕೆ ಪಡೆದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಹಡಗಿನಲ್ಲಿದ್ದ ಸುಮಾರು 22,180 ಕೆ.ಜಿಯಷ್ಟು ಸರಕನ್ನು ಚೀನಾದ ‘ಶಾಂಘೈ ಜೆಎಕ್ಸ್‌ಇ ಗ್ಲೋಬಲ್‌ ಲಾಜಿಸ್ಟಿಕ್ಸ್‌’ ಕಂಪನಿಯು ಪಾಕಿಸ್ತಾನದ ಸಿಯಾಲ್‌ಕೋಟ್‌ನ ‘ಪಾಕಿಸ್ತಾನ್ ವಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಗೆ ಕಳುಹಿಸಿದೆ ಎಂಬುದನ್ನು ಸರಕು ಸಾಗಣೆಗೆ ಸಂಬಂಧಿಸಿದ ಬಿಲ್‌ಗಳು ಮತ್ತು ಇತರ ದಾಖಲೆಗಳಲ್ಲಿ ತೋರಿಸಲಾಗಿದೆ. 

ಆದರೆ, ಹಡಗಿನಲ್ಲಿದ್ದ ಸರಕನ್ನು ತೈಯುವಾನ್ ಮೈನಿಂಗ್‌ ಇಂಪೋರ್ಟ್‌ ಅಂಡ್‌ ಎಕ್ಸ್‌ಪೋರ್ಟ್‌ ಕಂಪನಿಯು ಪಾಕಿಸ್ತಾನದ ಕಾಸ್ಮೋಸ್‌ ಎಂಜಿನಿಯರಿಂಗ್‌ ಕಂಪನಿಗೆ ಕಳುಹಿಸಿದೆ ಎಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಚೀನಾದಿಂದ ಪಾಕಿಸ್ತಾನಕ್ಕೆ ಹಡಗು ಮೂಲಕ ಸಾಗಿಸುತ್ತಿದ್ದ ದ್ವಿ–ಬಳಕೆಯ ಸರಕುಗಳನ್ನು ಭಾರತ ವಶಕ್ಕೆ ಪಡೆದದ್ದು ಇದೇ ಮೊದಲಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT