ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ | ಅಭ್ಯರ್ಥಿಗಳನ್ನು ಬದಲಿಸದಿದ್ದರೆ ಸೇನಾ ಎರಡಂಕಿ ತಲುಪುತ್ತಿತ್ತು; ಶಿಂದೆ

Published : 26 ಆಗಸ್ಟ್ 2024, 4:36 IST
Last Updated : 26 ಆಗಸ್ಟ್ 2024, 4:36 IST
ಫಾಲೋ ಮಾಡಿ
Comments

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡದೇ ಇದ್ದಿದ್ದರೆ ಶಿವಸೇನಾ ಎರಡಂಕಿ ತಲುಪುತ್ತಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಭಾನುವಾರ ಮಾತನಾಡಿರುವ ಶಿಂದೆ, '3–4 ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ಬದಲಿಸದಿದ್ದರೆ, ನಮ್ಮ ಸ್ಥಾನಗಳು ಎರಡಂಕಿಗೆ ಏರುತ್ತಿತ್ತು. ಆದಾಗ್ಯೂ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ' ಎಂದಿದ್ದಾರೆ.

ಶಿವಸೇನಾ ವಿಭಜನೆ ಬಳಿಕ ನಡೆದ ಮೊದಲ (2024ರ) ಲೋಕಸಭೆ ಚುನಾವಣೆಯಲ್ಲಿ ಶಿವಸೇನಾ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿತ್ತು. ಇಲ್ಲಿನ 48 ಕ್ಷೇತ್ರಗಳ ಪೈಕಿ 15 ಕಡೆ ಕಣಕ್ಕಿಳಿದಿದ್ದ ಶಿಂದೆ ಪಕ್ಷ ಕೇವಲ 7ರಲ್ಲಿ ಜಯ ಗಳಿಸಿತ್ತು. ಆದರೆ, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) 21 ಕಡೆ ಸ್ಪರ್ಧಿಸಿ 9ರಲ್ಲಿ ಜಯಿಸಿತ್ತು.

ಶಿಂದೆ ಪಕ್ಷ, ಯವತ್ಮಲ್‌–ವಾಷಿಮ್‌ ಮತ್ತು ಹಿಂಗೊಲಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಿತ್ತು. 'ಮಹಾಯುತಿ' ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ ಮತ್ತು ನ್ಯಾಷನಲಿಸ್ಟ್‌ ಕಾಂಗ್ರೆಸ್ (ಎನ್‌ಸಿ) ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ನಾಸಿಕ್‌ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುವುದು ತಡವಾಗಿತ್ತು.

'ಅಭ್ಯರ್ಥಿಗಳನ್ನು ಬದಲಿಸುವ ಉದ್ದೇಶವಿರಲಿಲ್ಲ. ಆದರೆ, ಕೆಲವು ಚುನಾವಣಾ ಸಮೀಕ್ಷೆಗಳಿಂದಾಗಿ ಅಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ' ಎಂದು ಹೇಳಿದ್ದಾರೆ.

ಶಿವಸೇನಾ (ಯುಬಿಟಿ) ಪಕ್ಷದವರೂ ಸೇರಿದಂತೆ ಮುಂಬೈನ 80 ಮಾಜಿ ಕಾರ್ಪೊರೇಟರ್‌ಗಳು ಶಿವಸೇನಾ ಸೇರಿದ್ದಾರೆ ಎಂದೂ ಇದೇ ವೇಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT