ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಾಲ್ಯಾಂಡ್‌ನಲ್ಲಿ ಭಾರಿ ಮಳೆ: ಹೆದ್ದಾರಿ ಕುಸಿತ; 6 ಮಂದಿ ಸಾವು

Published : 4 ಸೆಪ್ಟೆಂಬರ್ 2024, 16:11 IST
Last Updated : 4 ಸೆಪ್ಟೆಂಬರ್ 2024, 16:11 IST
ಫಾಲೋ ಮಾಡಿ
Comments

ದಿಮಾಪುರ(ನಾಗಾಲ್ಯಾಂಡ್): ಭಾರಿ ಮಳೆಯಿಂದಾಗಿ ನಾಗಾಲ್ಯಾಂಡ್‌ನ ಚುಮೌಕೆಡಿಮಾ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 29ರ ಒಂದು ಭಾಗ ಕುಸಿದ ಪರಿಣಾಮ ಮನೆಗಳಿಗೆ ಹಾನಿಯುಂಟಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.

ಫೆರಿಮಾ ಮತ್ತು ಪಗಲ ಪಹಾರ್‌ನಲ್ಲಿ ಈ ಭೂಕುಸಿತ ಸಂಭವಿಸಿದ್ದು, ರಾತ್ರೋರಾತ್ರಿ ಹೆದ್ದಾರಿಯ ಒಂದು ಭಾಗವು ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಾಣಿಜ್ಯ ಕೇಂದ್ರ ದಿಮಾಪುರ ಮತ್ತು ನಾಗಾಲ್ಯಾಂಡ್ ರಾಜಧಾನಿ ಕೊಹಿಮಾ ನಡುವೆ ಸಂಪರ್ಕ ಕಡಿತಗೊಂಡಿದೆ.

ಭೂಕುಸಿತದಿಂದ ಹಲವು ಮನೆಗಳು ಮತ್ತು ವಾಹನಗಳು ಹಾನಿಗೀಡಾಗಿರುವ ಫೆರಿಮಾದಲ್ಲಿ ಮಹಿಳೆ ಸೇರಿದಂತೆ 6 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ನೆಫಿಯು ರಿಯೊ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕುರಿತಂತೆ ರಾಜ್ಯ ಸರ್ಕಾರವು ಕೇಂದ್ರದ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

'ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 29ರ ದೊಡ್ಡ ಭಾಗ ಕುಸಿದಿರುವ ಬಗ್ಗೆ ನಾನು ಬಹಳ ಕಳವಳಗೊಂಡಿದ್ದೇನೆ. ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿ ಪರಿಶೀಲನೆ ಮತ್ತು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಕುಸಿದಿರುವ ಹೆದ್ದಾರಿ ಪುನರ್ ನಿರ್ಮಾಣ ಮಾಡುವ ಮೂಲಕ ಆದಷ್ಟು ಬೇಗ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ಎಂದು ತಿಳಿಸಿದ್ದಾರೆ.

ಹೆದ್ದಾರಿಗೆ ಹಾನಿಯಾಗಿರುವುದರಿಂದ ರಾಜ್ಯ ರಾಜಧಾನಿಗೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ತರಕಾರಿ ಮತ್ತು ದಿನಸಿ ಅಂಗಡಿಗಳ ಎದುರು ದೊಡ್ಡ ಸಾಲು ಏರ್ಪಟ್ಟಿದ್ದು, ಪೆಟ್ರೋಲ್ ಬಂಕ್‌ಗಳ ಬಳಿಯೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಈವರೆಗೆ ಅಗತ್ಯ ವಸ್ತುಗಳ ಕೊರತೆ ಆಗಿಲ್ಲ ಎಂದು ಕೊಹಿಮಾ ಡಿ.ಸಿ ಕುಮಾರ್ ರಮಣಿಕಾಂತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT