ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಾಂತರಿ ಸಾಸಿವೆಗೆ ಸ್ವದೇಶಿ ಜಾಗರಣ್‌ ಮಂಚ್‌ ವಿರೋಧ

Last Updated 28 ಅಕ್ಟೋಬರ್ 2022, 12:58 IST
ಅಕ್ಷರ ಗಾತ್ರ

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವಕುಲಾಂತರಿ (ಜಿಎಂ) ಹೈಬ್ರಿಡ್‌ ಸಾಸಿವೆ ಬೆಳೆಯಲು ಪರಿಸರ ಸಚಿವಾಲಯ ಅನುಮತಿ ನೀಡಿರುವುದಕ್ಕೆ ಆರೆಸ್ಸೆಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ) ಶುಕ್ರವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪರಿಸರ ಸಚಿವಾಲಯದ ಕುಲಾಂತರಿ ನಿಯಂತ್ರಕಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಅನುಮತಿಗೆ ಆಸ್ಪದ ನೀಡಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಕುಲಾಂತರಿ ಸಾಸಿವೆಗೆ ಸದ್ಯಕ್ಕಲ್ಲ, ಮುಂದೆಂದೂ ಅನುಮತಿ ನೀಡುವುದಿಲ್ಲವೆಂದು ಖಾತ್ರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಎಸ್‌ಜೆಎಂ ಒತ್ತಾಯಿಸಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಅವರಿಗೆ ಬರೆದಿರುವ ಪತ್ರದಲ್ಲಿ ‘ಕುಲಾಂತರಿ ಹೈಬ್ರಿಡ್‌ ಸಾಸಿವೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವುದು ಶುದ್ಧ ಸುಳ್ಳು. ಇದು ಆಧಾರರಹಿತ ಮತ್ತು ದಿಕ್ಕುತಪ್ಪಿಸುವ ಯೋಜನೆ. ಇಂತಹ ಕುಲಾಂತರಿ ಸಾಸಿವೆ ಬೆಂಬಲಿಸುವ ಮೂಲಕ ಜಿಇಎಸಿ ಬೇಜವಾಬ್ದಾರಿ ತೋರಿದೆ’ ಎಂದು ಎಸ್‌ಜೆಎಂ ಆರೋಪಿಸಿದೆ.

‘ಸಾರ್ವಜನಿಕ ವಲಯಕ್ಕೆ ಹಿಂಬಾಗಿಲಿನಿಂದ ಪ್ರವೇಶಿಸಲು ಕುಲಾಂತರಿ ಸಾಸಿವೆಗೆ ಅನುಮತಿಸಿರುವುದು ಸರಿಯಲ್ಲ. ಈ ಹಿಂದೆ ಕುಲಾಂತರಿ ಸಾಸಿವೆ ಬೆಳೆ ಪರವಾಗಿ ಜಿಇಎಸಿ ಶಿಫಾರಸು ಮಾಡಿದಾಗ ಕಳವಳ ವ್ಯಕ್ತಪಡಿಸಿ, ನಿರ್ಧಾರ ಮರುಪರಿಶೀಲನೆಗೂ ಒತ್ತಾಯಿಸಲಾಗಿತ್ತು. ಹೀಗಾಗಿ ಆಗ ಅನುಮತಿ ನೀಡಿರಲಿಲ್ಲ. ಆದರೆ, ಈಗ ಕುಲಾಂತರಿ ಬೆಳೆ ಸಂಶೋಧಕರ ಜತೆಗೆ ಜಿಇಎಸಿ ಕೈಜೋಡಿಸಿದೆ. ಆಡಳಿತದಲ್ಲಿ ರಾಜಿಯಾಗಿದೆ. ಕುಲಾಂತರಿ ಸಾಸಿವೆ ವಿಚಾರದಲ್ಲೂ ಇಂತಹದೇ ಬೆಳವಣಿಗೆ ಆಗಿದೆ’ ಎಂದು ಎಸ್‌ಜೆಎಂ ಸಹ ಸಂಚಾಲಕ ಅಶ್ವಾನಿ ಮಹಾಜನ್‌ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಕುಲಾಂತರಿ ಸಾಸಿವೆ ಬೆಳೆಗೆ ಜಿಇಎಸಿಯಿಂದ ಅನುಮತಿ ಪಡೆದಿರುವ ತಳಿ ವಿಜ್ಞಾನಿ ದೀಪಕ್‌ ಪೆಂಟಲ್‌ ಅವರ ಹೆಸರನ್ನು ಉಲ್ಲೇಖಿಸಿರುವ ಮಹಾಜನ್‌, ‘ಪೆಂಟಲ್‌ ಮತ್ತು ಅವರ ತಂಡ ಪ್ರಚುರಪಡಿಸುತ್ತಿರುವ ಡಿಎಂಎಚ್‌–11 ರೀತಿಯದ್ದೇ ಆದ ಕುಲಾಂತರಿ ಹೈಬ್ರಿಡ್‌ ಸಾಸಿವೆಗೆ ವಾಣಿಜ್ಯ ಅನುಮತಿಗಾಗಿ ಪ್ರೊಆಗ್ರೊ ಸೀಡ್ಸ್‌ ಕಂಪನಿ (ಬೇಯರ್‌ ಸಬ್ಸಿಡಿ ಪಡೆಯುವ ಕಂಪನಿ) 2002ರಲ್ಲಿ ಅರ್ಜಿ ಸಲ್ಲಿಸಿತ್ತು.ಕುಲಾಂತರಿ ಹೈಬ್ರಿಡ್‌ ಸಾಸಿವೆಕ್ಷೇತ್ರ ಪ್ರಯೋಗದಲ್ಲಿ ಹೆಚ್ಚಿನ ಇಳುವರಿ ನೀಡದಿದ್ದಾಗ ಕಂಪನಿಯ ಪರವಾನಗಿ ಅರ್ಜಿಯನ್ನುಭಾರತೀಯ ಕೃಷಿ ಸಂಶೋಧನಾ ಮಂಡಳಿಯು (ಐಸಿಎಆರ್‌) ತಿರಸ್ಕರಿಸಿತ್ತು’ ಎಂದು ಪತ್ರದಲ್ಲಿ ನೆನಪಿಸಿದ್ದಾರೆ.

‘ಕುಲಾಂತರಿ ಹೈಬ್ರಿಡ್‌ ಸಾಸಿವೆಗೆಬೇಯರ್‌ (ಔಷಧೀಯ ಮತ್ತು ಜೈವಿಕ ತಂತ್ರಜ್ಞಾನದಬಹುರಾಷ್ಟ್ರೀಯ ಕಂಪನಿ) ಹಕ್ಕುಸ್ವಾಮ್ಯ ಹೊಂದಿದೆ. ಇದಕ್ಕೆ ರಾಯಧನ ಕೂಡ ಪಾವತಿಸಬೇಕು. ಆದರೆ, ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿದೇಶದ ಜನತೆಯಿಂದ ಮುಚ್ಚಿಡಲಾಗಿದೆ’ ಎಂದು ಮಹಾಜನ್‌ ಗಂಭೀರ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT