ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

6 ರೈತರ ಹತ್ಯೆಗೆ ಜವಾಬ್ದಾರರಾಗಿರುವವರಿಗೆ ಕೃಷಿ ಖಾತೆಯೇ?: ಎಸ್‌ಕೆಎಂ ಪ್ರತಿಭಟನೆ

Published 12 ಜೂನ್ 2024, 11:18 IST
Last Updated 12 ಜೂನ್ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯನ್ನು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನೀಡಿರುವುದನ್ನು ಖಂಡಿಸಿ ಬುಧವಾರ ರಾಷ್ಟ್ರ ರಾಜಧಾನಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

2017ರಲ್ಲಿ ಮಧ್ಯಪ್ರದೇಶದಲ್ಲಿ 6 ರೈತರ ಹತ್ಯೆಗೆ ಜವಾಬ್ದಾರರಾಗಿರುವ ಶಿವರಾಜ್ ಸಿಂಗ್ ಅವರನ್ನು ಆ ಖಾತೆಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿದರು.

ರೈತರ ಆತ್ಮಹತ್ಯೆ ಪರಿಹಾರ, ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಎಂಎಸ್‌ಪಿ, ಸಮಗ್ರ ಕೃಷಿ ಸಾಲ ಮನ್ನಾಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಹತ್ಯೆ ಮಾಡಲಾಗಿತ್ತು ಎಂದು ಎಸ್‌ಕೆಎಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಕೆಎಂ ಸಾಮಾನ್ಯ ಸಭೆಯು ಜುಲೈ 10ರಂದು ನಡೆಯಲಿದ್ದು, ದೇಶದ ಎಲ್ಲ ರೈತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದೆ. ಅಲ್ಲಿ ಹೋರಾಟದ ಮುಂದಿನ ಹಾದಿ ನಿರ್ಧರಿಸಲಾಗುವುದು ಎಂದು ಹೇಳಿದೆ.

‘2014 ಮತ್ತು 2019ರ ನಡುವಿನ ಬಿಜೆಪಿ ಆಡಳಿತಾವಧಿಯಲ್ಲಿ ರೈತರ ಕುರಿತಾಗಿ ಕೈಗೊಂಡ ನಿರ್ಧಾರ ಅತ್ಯಂತ ದುರಹಂಕಾರ ಮತ್ತು ಸೂಕ್ಷ್ಮಹೀನ ನಿರ್ಧಾರಗಳಾಗಿವೆ. ರೈತರು ಮತ್ತು ಗ್ರಾಮೀಣ ಜನರ ಮೇಲೆ ಸರ್ಕಾರ ಅತ್ಯಂತ ಕ್ರೂರವಾಗಿ ನಡೆದುಕೊಂಡಿದೆ’ ಎಂದೂ ಅದು ದೂರಿದೆ.

2017ರ ಜೂನ್ ತಿಂಗಳಲ್ಲಿ ಮಧ್ಯಪ್ರದೇಶದ ಮಂಡ್‌ಸೌರ್‌ನಲ್ಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ರೈತರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 6 ಮಂದಿ ರೈತರು ಮೃತಪಟ್ಟಿದ್ದರು.

ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ಕೃಷಿ ಸಮಸ್ಯೆಗಳು, ರೈತರ ಆತ್ಮಹತ್ಯೆ ಮತ್ತು ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಎಂಎಸ್‌ಪಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರೈತರ ಒಕ್ಕೂಟ ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT