ಶ್ರೀನಗರ: ಜಮ್ಮುವಿನ ಸುಂಜವಾನ್ ಸೇನಾ ನೆಲೆ ಮೇಲೆ ಉಗ್ರರು ಸೋಮವಾರ ದಾಳಿ ಮಾಡಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಉಗ್ರರು ದೂರದಿಂದಲೇ ನಿಂತು ಗುಂಡು ಹಾರಿಸಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆ. ಕರ್ನಲ್ ಸುನೀಲ್ ಬಡ್‌ಥ್ವಾಲ್ ತಿಳಿಸಿದ್ದಾರೆ.
ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಯೋಧನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ದಾಖಲು ಮಾಡುವ ವೇಳೆಗೆ ಅವರು ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.
ಈ ನೆಲೆಯು ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಸೇನೆ ಕೇಂದ್ರವಾಗಿದೆ. ಉಗ್ರರ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಯಲಿದ್ದು, ಈ ಕೃತ್ಯವು ಆತಂಕ ಮೂಡಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಈಚಿನ ವರ್ಷಗಳಲ್ಲಿ 40–50 ಉಗ್ರರು ನುಸುಳಿದ್ದಾರೆ. ಅಮೆರಿಕನ್ ಎಂ–4 ರೈಫಲ್ ಸೇರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.