ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಚುನಾವಣೆ | ‌ಬದಲಾವಣೆ ತರುವಂತೆ ಮತದಾರರಿಗೆ ಸೋನಿಯಾ ಗಾಂಧಿ ಮನವಿ

Published 28 ನವೆಂಬರ್ 2023, 13:09 IST
Last Updated 28 ನವೆಂಬರ್ 2023, 13:09 IST
ಅಕ್ಷರ ಗಾತ್ರ

ನವದೆಹಲಿ: ನವೆಂಬರ್‌ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವ ಮೂಲಕ ರಾಜ್ಯದಲ್ಲಿ ಬದಲಾವಣೆಯನ್ನು ತರುವಂತೆ ತೆಲಂಗಾಣ ಮತದಾರರಿಗೆ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಎರಡು ನಿಮಿಷಗಳ ವಿಡಿಯೊ ಸಂದೇಶವನ್ನು ಪೋಸ್ಟ್‌ ಮಾಡಿರುವ ಸೋನಿಯಾ ಗಾಂಧಿ, ‘ತೆಲಂಗಾಣದ ನನ್ನ ನೆಚ್ಚಿನ ಸಹೋದರಿಯರು ಹಾಗೂ ಸಹೋದರರಿಗೂ ನಮಸ್ಕಾರ. ಇಂದು ನಾನು ನಿಮ್ಮ ಬಳಿ ಬರಲು ಸಾಧ್ಯವಾಗಿಲ್ಲ, ಆದರೆ ನಾನು ನಿಮ್ಮ ಹೃದಯಗಳಿಗೆ ಬಹಳ ಹತ್ತಿರವಿದ್ದೇನೆ. ತೆಲಂಗಾಣಕ್ಕಾಗಿ ಹುತಾತ್ಮರಾದವರ ಕನಸು ನನಸಾಗುವುದನ್ನು ನಾನು ನೋಡಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

‘ತೆಲಂಗಾಣದಲ್ಲಿರುವ ಭೂಮಾಲೀಕರ ಸರ್ಕಾರವನ್ನು ಜನರ ಸರ್ಕಾರವನ್ನಾಗಿ ನಾವೆಲ್ಲರೂ ಪರಿವರ್ತಿಸಬೇಕೆಂದು ನಾನು ಆಶಿಸುತ್ತೇನೆ. ರಾಜ್ಯದಲ್ಲಿ ಸತ್ಯ ಮತ್ತು ಪ್ರಾಮಾಣಿಕ ಸರ್ಕಾರವನ್ನು ತರುವ ಮೂಲಕ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ’ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

‘ಸೋನಿಯಾ ಅಮ್ಮ ಎಂದು ಕರೆಯುವ ಮೂಲಕ ನೀವು ನನಗೆ ಬಹಳ ಗೌರವವನ್ನು ನೀಡಿದ್ದೀರಿ. ನನ್ನನ್ನು ತಾಯಿಯ ರೀತಿ ಕಾಣುವ ಮೂಲಕ ಅಪಾರ ಪ್ರೀತಿ ಮತ್ತು ಗೌರವವನ್ನು ತೋರಿಸಿದ್ದೀರಿ. ಅದಕ್ಕೆ ನಾನು ಯಾವಗಲೂ ಋಣಿಯಾಗಿರುತ್ತೇನೆ’ ಎಂದು ಸೋನಿಯಾ ಹೇಳಿದ್ದಾರೆ.

‘ತೆಲಂಗಾಣದ ಸಹೋದರಿಯರು, ಸಹೋದರರು, ತಾಯಂದಿರು, ಮಕ್ಕಳು ಎಲ್ಲರು ತಮ್ಮ ಅಧಿಕಾರವನ್ನು ಬಳಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಬದಲಾವಣೆಯನ್ನು ತರಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ಎಂದು ಸೋನಿಯಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT