ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ: ವಿಶೇಷ ಅಧಿವೇಶನ ಕರೆದ ಸ್ಪೀಕರ್‌

Published 4 ಜುಲೈ 2024, 14:22 IST
Last Updated 4 ಜುಲೈ 2024, 14:22 IST
ಅಕ್ಷರ ಗಾತ್ರ

ಕೋಲ್ಕತ್ತ: ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದ ಬಿಕ್ಕಟ್ಟಿನ ನಡುವೆಯೇ, ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ.

ಈ ಮೂಲಕ ಅವರು ಸದನದ ಕಾರ್ಯನಿರ್ವಹಣೆಯು ರಾಜ್ಯಪಾಲರ ಮೇಲಷ್ಟೇ ಅವಲಂಬಿತವಾಗಿ ಇರುವುದಿಲ್ಲ ಎಂದು ಪ್ರತಿಪಾದಿಸಿದರು.

‘ಕಲಾಪ ಸಲಹಾ ಸಮಿತಿ ಸಭೆ ಶುಕ್ರವಾರ ಮಧ್ಯಾಹ್ನ ನಡೆಯಲಿದ್ದು, ಅಧಿವೇಶನದ ಅವಧಿಯನ್ನು ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು. ವಿಶೇಷ ಅಧಿವೇಶನವು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ ಎಂದರು.

‘ನಾವು ಅಸಹಾಯಕರು ಎಂದು ಯಾರಾದರೂ ಭಾವಿಸಿದ್ದರೆ, ಅದು ತಪ್ಪು. ವಿಧಾನಸಭೆ ಅಸಹಾಯಕವಲ್ಲ ಮತ್ತು ಎಲ್ಲವೂ ರಾಜ್ಯಪಾಲರ ಕೈಯಲ್ಲಿಲ್ಲ. ಈ ಸಂಬಂಧ ಇರುವ ನಿಯಮ ಮತ್ತು ಸಾಂವಿಧಾನಿಕ ಮಾನದಂಡಗಳನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ’ ಎಂದು ಬ್ಯಾನರ್ಜಿ ಪ್ರತಿಕ್ರಿಯಿಸಿದರು. 

ಪ್ರಮಾಣ ವಚನಕ್ಕಾಗಿ ಇಬ್ಬರು ಶಾಸಕರ ಧರಣಿ

ಹೊಸದಾಗಿ ಚುನಾಯಿತರಾಗಿರುವ ಇಬ್ಬರು ಟಿಎಂಸಿ ಶಾಸಕರು ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಿ ಆರನೇ ದಿನವಾದ ಗುರುವಾರವೂ ವಿಧಾನಸಭೆ ಆವರಣದಲ್ಲಿನ ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಬಳಿ ಧರಣಿ ಮುಂದುವರಿಸಿದರು.

ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರು ರಾಜಭವನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸುವಂತೆ ಇಬ್ಬರು ಶಾಸಕರಿಗೆ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕರಿಸಿ, ಧರಣಿ ನಡೆಸುತ್ತಿದ್ದಾರೆ.

ಬಾರಾನಗರ ಶಾಸಕಿ ಸಯಂತಿಕಾ ಬಂಡೋಪಾಧ್ಯಾಯ ಮತ್ತು ಭಾಗಬಂಗೋಲಾ ಶಾಸಕ ರಾಯತ್‌ ಹೊಸೈನ್‌ ಸರ್ಕಾರ್‌ ಅವರು ಧರಣಿ ನಡೆಸುತ್ತಿದ್ದಾರೆ.

‘ಉಪ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರು ಸಾಂಪ್ರದಾಯಿಕವಾಗಿ ಸದನದ ಸ್ಪೀಕರ್‌ ಅಥವಾ ಡೆಪ್ಯೂಟಿ ಸ್ಪೀಕರ್‌ ಅವರನ್ನು ನಿಯೋಜಿಸಬೇಕು. ಆದರೆ, ಹಾಗೆ ಮಾಡದೆ ರಾಜ್ಯಪಾಲರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಬುಧವಾರ ಆಹ್ವಾನಿಸಿದ್ದರು. ನಾವು ಅದನ್ನು ತಿರಸ್ಕರಿಸಿದ್ದೇವೆ’ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರಪತಿಗೆ ಮನವಿ

ಈ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸುವಂತೆ ಸ್ಪೀಕರ್‌ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೋರಿದ್ದಾರೆ.

ರಾಜ್ಯಪಾಲರು ಉದ್ದೇಶಪೂರ್ವಕವಾಗಿಯೇ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ. ಇದನ್ನು ಅವರು ಅಹಂ ಆಗಿ ತೆಗೆದುಕೊಂಡಿದ್ದು, ಈ ವಿಷಯವನ್ನು ಪರಿಹರಿಸಬೇಕು ಎಂದು ಸ್ಪೀಕರ್‌ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT