ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್‌ ಬಣವೇ ನಿಜವಾದ ಎನ್‌ಸಿಪಿ: ರಾಹುಲ್‌ ನಾರ್ವೇಕರ್‌

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಹೇಳಿಕೆ
Published 15 ಫೆಬ್ರುವರಿ 2024, 15:24 IST
Last Updated 15 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ಮುಂಬೈ: ‘ಅಜಿತ್‌ ಪವಾರ್‌ ನೇತೃತ್ವದ ಬಣವೇ ನಿಜವಾದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)’ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ಗುರುವಾರ ಹೇಳಿದ್ದಾರೆ.

‘ಶಾಸಕರನ್ನು ಅನರ್ಹಗೊಳಿಸಬೇಕೆಂದು ಉಭಯ ಬಣಗಳು ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪಕ್ಷದ ಸಂಸ್ಥಾಪಕ ಶರದ್‌ ಪವಾರ್‌ ಅವರನ್ನು ಪ್ರಶ್ನಿಸುವ ಅಥವಾ ಅವರ ಇಚ್ಛೆಯನ್ನು ವಿರೋಧಿಸುವ ಪ್ರಕ್ರಿಯೆಗಳು ಪಕ್ಷಾಂತರ ಎಂದೆನಿಸಿಕೊಳ್ಳುವುದಿಲ್ಲ. ಅವು ಕೇವಲ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಷ್ಟೇ ಆಗಿವೆ. ಅಲ್ಲದೇ, ಈ ಪ್ರಕರಣದಲ್ಲಿ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಪಕ್ಷಾಂತರ ನಿಷೇಧದ ನಿಬಂಧನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಅವರು ರೂಲಿಂಗ್‌ ನೀಡಿದರು.

2023ರ ಜುಲೈನಲ್ಲಿ ಶರದ್‌ ಪವಾರ್‌ ಅವರ ಸೋದರ ಸಂಬಂಧಿ ಅಜಿತ್‌ ಪವಾರ್‌ ಅವರು ತಮ್ಮ ಬೆಂಬಲಿಗರೊಂದಿಗೆ ಶಿವಸೇನಾ– ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾಗಿ, ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ, ಅಜಿತ್‌ ಹಾಗೂ ಶರದ್‌ ಅವರ ಬಣಗಳು ವಿರೋಧಿ ಬಣದ ಶಾಸಕರನ್ನು ಅನರ್ಹಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದವು.

‘ಬಹುಸಂಖ್ಯಾತ ಸದಸ್ಯರ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ‘ಪಕ್ಷದಿಂದ ಅನರ್ಹಗೊಳಿಸುವ ಬೆದರಿಕೆ’ಯನ್ನು ಪಕ್ಷದ ನಾಯಕರು ಒಡ್ಡಲು ಸಾಧ್ಯವಿಲ್ಲ. 2023ರ ಜುಲೈನಲ್ಲಿ ಎನ್‌ಸಿಪಿಯಲ್ಲಿ ನಡೆದ ಘಟನೆಗಳು ಸ್ಪಷ್ಟವಾಗಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳೇ ಆಗಿವೆ’ ಎಂದು ನಾರ್ವೇಕರ್‌ ಅವರು ಹೇಳಿದ್ದು, ‘ಪಕ್ಷವು ಇಬ್ಭಾಗವಾದಾಗ ಅಜಿತ್‌ ಅವರ ಬಣವು ಹೆಚ್ಚು ಶಾಸಕರ ಬೆಂಬಲವನ್ನು ಹೊಂದಿತ್ತು’ ಎಂಬುದನ್ನೂ ಅವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ.

ಅಜಿತ್‌ ಪವಾರ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಭಾರತದ ಚುನಾವಣಾ ಆಯೋಗ ಕಳೆದ ವಾರ ಆದೇಶ ನೀಡಿದ ಬೆನ್ನಲ್ಲೇ ನಾರ್ವೇಕರ್‌ ಅವರು ಈ ರೂಲಿಂಗ್‌ ನೀಡಿದ್ದಾರೆ.

ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ
ಅಗೋಚರ ಶಕ್ತಿಯ ಕೈವಾಡ
ಸುಪ್ರಿಯಾ ಸುಳೆ ಮುಂಬೈ (ಪಿಟಿಐ): ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ– ಶರದ್‌ಚಂದ್ರ ಪವಾರ್‌ ಬಣದ ನಾಯಕಿ ಸುಪ್ರಿಯಾ ಸುಳೆ ಅವರು ಬಿಜೆಪಿಯ ಹೆಸರನ್ನು ಉಲ್ಲೇಖಿಸಿದೇ ಆ ಪಕ್ಷದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ. ‘ಶರದ್‌ ಪವಾರ್‌ ಅವರು ಹಿಂದೆಯೂ ಎನ್‌ಸಿಪಿಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಮುಂದೆಯೂ ಅವರೇ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುತ್ತಾರೆ. ನಮ್ಮ ತಂದೆಯಿಂದ ಪಕ್ಷವನ್ನು ಕಸಿದುಕೊಳ್ಳಲು ಯಾವುದೋ ‘ಅಗೋಚರ ಶಕ್ತಿ’ ಪ್ರಯತ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಅಜಿತ್‌ ಪವಾರ್‌ ಅವರ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಪಕ್ಷವನ್ನು ಕಟ್ಟಿದವರಿಂದಲೇ ಪಕ್ಷ ಮತ್ತು ಚಿಹ್ನೆಯನ್ನು ಕಸಿದುಕೊಳ್ಳಲಾಗಿದೆ. ಆದ್ದರಿಂದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT