ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಡಾಣು ದಾನ ಮಾಡಿದಾಕೆ ಜೈವಿಕ ತಾಯಿಯಲ್ಲ: ಬಾಂಬೆ ಹೈಕೋರ್ಟ್

Published : 13 ಆಗಸ್ಟ್ 2024, 14:34 IST
Last Updated : 13 ಆಗಸ್ಟ್ 2024, 14:34 IST
ಫಾಲೋ ಮಾಡಿ
Comments

ಮುಂಬೈ: ವೀರ್ಯ ಅಥವಾ ಅಂಡಾಣು ದಾನ ಮಾಡಿದವರು, ಆ ದಾನದಿಂದ ಜನಿಸುವ ಮಗುವಿನ ಮೇಲೆ ಕಾನೂನುಬದ್ಧ ಅಧಿಕಾರವನ್ನು ಹೊಂದಿರುವುದಿಲ್ಲ, ಆ ಮಗುವಿನ ಜೈವಿಕ ಪಾಲಕರು ತಾವು ಎಂದು ಹೇಳುವಂತೆಯೂ ಇಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.

ಐದು ವರ್ಷ ವಯಸ್ಸಿನ ತನ್ನ ಅವಳಿ ಹೆಣ್ಣುಮಕ್ಕಳನ್ನು ಭೇಟಿ ಮಾಡುವ ಹಕ್ಕು ತನಗಿದೆ ಎಂದು 42 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡುವ ಸಂದರ್ಭದಲ್ಲಿ ಹೈಕೋರ್ಟ್ ಈ ಮಾತು ಹೇಳಿದೆ.

ಬಾಡಿಗೆ ತಾಯ್ತನದ ಮೂಲಕ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳು ಪತಿ ಮತ್ತು ತನ್ನ ತಂಗಿಯ ಜೊತೆ ವಾಸಿಸುತ್ತಿದ್ದಾರೆ, ತಂಗಿಯೇ ಅಂಡಾಣು ದಾನ ಮಾಡಿದ್ದಳು ಎಂದು ಮಹಿಳೆಯು ಅರ್ಜಿಯಲ್ಲಿ ಹೇಳಿದ್ದರು. ಪತ್ನಿಯ ತಂಗಿ ಅಂಡಾಣು ದಾನ ಮಾಡಿದ್ದ ಕಾರಣ, ಅವಳಿ ಹೆಣ್ಣುಮಕ್ಕಳ ಜೈವಿಕ ತಾಯಿ ಎಂದು ಕರೆಸಿಕೊಳ್ಳುವ ಕಾನೂನುಬದ್ಧ ಹಕ್ಕು ಆಕೆಗೆ ಇದೆ ಎಂದು ಪತಿ ವಾದಿಸಿದ್ದರು. ತನ್ನ ಪತ್ನಿಗೆ ಅಂತಹ ಹಕ್ಕು ಇಲ್ಲ ಎಂದು ಹೇಳಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಮಿಲಿಂದ ಜಾಧವ್ ನೇತೃತ್ವದ ಏಕಸದಸ್ಯ ಪೀಠವು ಈ ವಾದವನ್ನು ಒಪ್ಪಲಿಲ್ಲ. ಅಂಡಾಣು ದಾನ ಮಾಡಿದ್ದರೂ ಮಕ್ಕಳ ಜೈವಿಕ ತಾಯಿ ಎಂದು ಹೇಳುವ ಹಕ್ಕು ತಂಗಿಗೆ ಇಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.

ತಂಗಿಯ ಪಾತ್ರ ಅಂಡಾಣು ದಾನ ಮಾಡಿದ್ದು ಮಾತ್ರ, ಅದು ಸ್ವಇಚ್ಛೆಯಿಂದ ಮಾಡಿದ ದಾನ. ಅವರು ತನ್ನನ್ನು ‘ವಂಶವಾಹಿ ತಾಯಿ’ ಎಂದು ಮಾತ್ರವೇ ಕರೆದುಕೊಳ್ಳಬಹುದು ಎಂದು ಪೀಠ ಹೇಳಿದೆ.

ಈಗ ಬೇರೆ ಬೇರೆಯಾಗಿ ವಾಸಿಸುತ್ತಿರುವ ದಂಪತಿ, ಬಾಡಿಗೆ ತಾಯ್ತನದ ಒಪ್ಪಂದವನ್ನು 2018ರಲ್ಲಿ ಮಾಡಿಕೊಂಡಿದ್ದರು. ಆಗ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ–2021 ಜಾರಿಗೆ ಬಂದಿರಲಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) 2005ರಲ್ಲಿ ರೂಪಿಸಿದ್ದ ಮಾರ್ಗಸೂಚಿ ಆಗ ಜಾರಿಯಲ್ಲಿತ್ತು, ಈ ಒಪ್ಪಂದವು ಅದಕ್ಕೆ ಅನುಗುಣವಾಗಿರಬೇಕು ಎಂದು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ನೇಮಿಸಿದ್ದ ವಕೀಲರು ಪೀಠಕ್ಕೆ ಮಾಹಿತಿ ನೀಡಿದ್ದರು.

ಆ ಮಾರ್ಗಸೂಚಿಗಳಲ್ಲಿ ಇರುವ ನಿಯಮದ ಪ್ರಕಾರ, ದಾನಿ ಹಾಗೂ ಬಾಡಿಗೆ ತಾಯಿಯು ಪಾಲಕರಿಗೆ ಸಿಗುವ ಎಲ್ಲ ಹಕ್ಕುಗಳನ್ನು ತೊರೆಯಬೇಕಾಗುತ್ತದೆ ಎಂದು ಪೀಠ ಹೇಳಿದೆ. ಈ ಪ್ರಕರಣದಲ್ಲಿ ಅವಳಿ ಮಕ್ಕಳು ಅರ್ಜಿದಾರ ಮಹಿಳೆ ಹಾಗೂ ಅವರ ಪತಿಯ ಮಕ್ಕಳಾಗಿರುತ್ತಾರೆ ಎಂದು ಸಾರಿದೆ.

ದಂಪತಿಗೆ ಸಹಜವಾಗಿ ಗರ್ಭಧರಿಸುವುದಕ್ಕೆ ಸಾಧ್ಯವಿರಲಿಲ್ಲ. ಅರ್ಜಿದಾರ ಮಹಿಳೆಯ ತಂಗಿ ಅಂಡಾಣು ದಾನಕ್ಕೆ ಸ್ವಇಚ್ಛೆಯಿಂದ ಮುಂದೆ ಬಂದರು. 2018ರಲ್ಲಿ ಗರ್ಭಧರಿಸಿದ ಬಾಡಿಗೆ ತಾಯಿಯೊಬ್ಬರು, 2019ರ ಆಗಸ್ಟ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

2019ರ ಏಪ್ರಿಲ್‌ನಲ್ಲಿ ನಡೆದ ಅಪಘಾತದಲ್ಲಿ ತಂಗಿಯ ಪತಿ ಹಾಗೂ ಅವರ ಮಗಳು ಮೃತಪಟ್ಟರು. ಅರ್ಜಿದಾರ ಮಹಿಳೆ ಹಾಗೂ ಅವರ ಪತಿ ನಡುವೆ ಮನಸ್ತಾಪ ಉಂಟಾಗಿ ಪತಿಯು 2021ರ ಮಾರ್ಚ್‌ನಲ್ಲಿ ಪತ್ನಿಗೆ ಮಾಹಿತಿ ನೀಡದೆ, ಮಕ್ಕಳೊಂದಿಗೆ ಇನ್ನೊಂದು ಫ್ಲ್ಯಾಟ್‌ನಲ್ಲಿ ವಾಸಿಸಲಾರಂಭಿಸಿದರು.

ಪತ್ನಿಯ ತಂಗಿ (ಅಂಡಾಣು ದಾನಿ) ರಸ್ತೆ ಅಪಘಾತದ ನಂತರ ಖಿನ್ನತೆಗೆ ಒಳಗಾಗಿದ್ದರು, ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡು ತನ್ನ ಜೊತೆ ವಾಸಿಸಲು ಆರಂಭಿಸಿದರು ಎಂದು ಪತಿ ಹೇಳಿದ್ದರು.

ತನ್ನ ಮಕ್ಕಳ ಭೇಟಿಗೆ ಅವಕಾಶ ನೀಡಬೇಕು ಎಂಬ ಮನವಿಯೊಂದಿಗೆ ಅರ್ಜಿದಾರ ಮಹಿಳೆಯು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಆ ನ್ಯಾಯಾಲಯವು ಈ ಮನವಿಯನ್ನು ಪುರಸ್ಕರಿಸಲಿಲ್ಲ. ಆಗ ಮಹಿಳೆಯು ಹೈಕೋರ್ಟ್‌ ಮೆಟ್ಟಿಲೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT